Tuesday, September 29, 2026
Tuesday, September 29, 2026

ಸಾಧಕರನ್ನು ಗುರುತಿಸಿ ಗೌರವಿಸುವ ಸೋಮಶೇಖರ ಅವರ ಸೇವೆ ಸಮಾಜಕ್ಕೆ ಮಾದರಿ : ಡಿಸಿಎಂ ಶ್ಲಾಘನೆ

Date:

ಸಾಧನೆ ಎನ್ನುವುದು ಪರಿಶ್ರಮ, ಶಿಸ್ತು ಮತ್ತು ದೂರದೃಷ್ಟಿಯ ಫಲವಾಗಿದ್ದು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಿರುವ ಸಾಧಕರು ಮುಂದಿನ ಪೀಳಿಗೆಗೆ ಆದರ್ಶವಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ಡಾ. ಸಿ. ಸೋಮಶೇಖರ–ಶ್ರೀಮತಿ ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಸಂಸ್ಕೃತಿ ಸಂಗಮ–2026’ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ದೃಷ್ಟಿಯಲ್ಲಿ ಸಾಧನೆ ಎಂದರೆ ಪರಿಶ್ರಮ, ಶಿಸ್ತು ಮತ್ತು ದೂರದೃಷ್ಟಿ. ಈ ಗುಣಗಳನ್ನು ಮೈಗೂಡಿಸಿಕೊಂಡು ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾನೆ. ಇಂದು ಪ್ರಶಸ್ತಿ ಸ್ವೀಕರಿಸಿರುವ ಎಲ್ಲ ಸಾಧಕರು ನಮಗೆ ಆದರ್ಶವಾಗಿದ್ದಾರೆ ಎಂದರು.

ಭಾರತದ ಸಂಸ್ಕೃತಿಗೆ ವಿಶ್ವದಲ್ಲಿಯೇ ವಿಶಿಷ್ಟ ಸ್ಥಾನವಿದೆ. ಬೇರೆ ಯಾವುದೇ ರಾಷ್ಟ್ರ ಅಥವಾ ಸಮಾಜದಲ್ಲಿ ಕಾಣಸಿಗದಂತಹ ಶ್ರೇಷ್ಠ ಸಾಂಸ್ಕೃತಿಕ ಪರಂಪರೆ ಭಾರತಕ್ಕಿದೆ. ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಡಾ. ಸಿ. ಸೋಮಶೇಖರ ಅವರ ಕಾರ್ಯ ಅಭಿನಂದನೀಯ ಎಂದು ತಿಳಿಸಿದರು.

2015ರಿಂದ ಈವರೆಗೆ ಹಲವಾರು ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವುದು ಮಹತ್ವದ ಕೆಲಸವಾಗಿದೆ. ಇದರ ಹಿಂದೆ ಯಾವುದೇ ಸ್ವಾರ್ಥದ ಉದ್ದೇಶವಿದೆ ಎಂದು ನನಗೆ ಅನ್ನಿಸುವುದಿಲ್ಲ. ಬಹಳಷ್ಟು ಜನರು ನಿವೃತ್ತಿಯ ನಂತರ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಸೋಮಶೇಖರ ಅವರು ನಿವೃತ್ತಿಯ ನಂತರ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಅವರ ದೂರದೃಷ್ಟಿಯನ್ನು ತೋರಿಸುತ್ತದೆ ಎಂದರು.

ಭಾರತದಲ್ಲಿ ಶೇ.60ರಷ್ಟು ಯುವಜನರಿದ್ದು, 40 ವರ್ಷ ವಯಸ್ಸಿನೊಳಗಿನ ಯುವಕರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಇಂದಿನ ಯುವಜನರಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಕೇವಲ ಪಾಠ ಮಾಡಲು ಹೋದರೆ ಅದು ಅವರಿಗೆ ಅಷ್ಟಾಗಿ ಪ್ರಿಯವಾಗುವುದಿಲ್ಲ. ಅವರಿಗೆ ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಆಧುನಿಕ ಜಗತ್ತಿನಲ್ಲಿ ಬದುಕಲು ಅಗತ್ಯವಾದ ಕೌಶಲ್ಯಗಳೂ ಬೇಕಾಗಿವೆ ಎಂದು ಹೇಳಿದರು.

ಇಂದಿನ ಜೆನ್‌ ಜಿ ಪೀಳಿಗೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಗೌರವವನ್ನು ಇನ್ನಷ್ಟು ಬೆಳೆಸುವ ಅಗತ್ಯವಿದೆ. ಅವರಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಮಹತ್ವವನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಬದಲಾದ ಆಧುನಿಕ ಜಗತ್ತಿನಲ್ಲಿ ಪಠ್ಯಪುಸ್ತಕಗಳಲ್ಲಿ ಹಿಂದೆ ಇದ್ದ ‘ಮೋರಲ್ ಸೈನ್ಸ್’ನಂತಹ ಮೌಲ್ಯಾಧಾರಿತ ಶಿಕ್ಷಣ ಕಾಣೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಮಗೆ ಎಐಗಿಂತಲೂ ಸಂಸ್ಕೃತಿ ಮತ್ತು ಸಂಸ್ಕಾರದ ಅಗತ್ಯ ಹೆಚ್ಚಿದೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಾವು ಮರೆತುಬಿಟ್ಟರೆ, ಸಮಾಜದಲ್ಲಿ ಅದಕ್ಕೆ ಅಗತ್ಯವಾದ ಪ್ರೋತ್ಸಾಹ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ನಾವು ಎಂತಹ ಭಾರತವನ್ನು ನೋಡಬೇಕಾಗುತ್ತದೆ ಎಂಬುದರ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.

ವಿಶ್ವದಲ್ಲಿಯೇ ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ಭಾರತವು ತನ್ನ ಮುಂದಿನ ಪೀಳಿಗೆಗೆ ಏನು ಹೇಳಲಿದೆ, ಯಾವ ಮೌಲ್ಯಗಳನ್ನು ಹಸ್ತಾಂತರಿಸಲಿದೆ ಎಂಬುದರ ಕುರಿತು ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು.

ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗಳ ಮೂಲಕ ಗುರುತಿಸದೆ ಹೋದರೆ, ಅವರ ಸಾಧನೆ ಹಾಗೂ ಆ ಕ್ಷೇತ್ರಗಳ ಮಹತ್ವ ಸಮಾಜಕ್ಕೆ ಸಮರ್ಪಕವಾಗಿ ಪರಿಚಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸೋಮಶೇಖರ ಅವರು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಮಾಜ ಮತ್ತು ದೇಶ ನಿರಂತರವಾಗಿ ಬದಲಾಗುತ್ತಿದೆ. ಈ ಬದಲಾವಣೆಗಳ ನಡುವೆಯೂ ಭಾರತ ತನ್ನ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.

ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವುದು ಸರ್ಕಾರದ ಜವಾಬ್ದಾರಿಯೂ ಆಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಸಂಖ್ಯೆಯೂ ಈಗ ನೂರರ ಗಡಿ ದಾಟಿದೆ. ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಇಂತಹ ದಿಗ್ಗಜರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಡಾ. ಶಿವರಾಜ್ ವಿ.ಪಾಟೀಲ್ ಅವರು, ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶಂಕರ್ ಬಿದರಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ಡಾ. ವೂಡೇ ಪಿ.ಕೃಷ್ಣ, ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಕುಟುಂಬ ಮಿಲನದಿಂದ ಬಾಂಧವ್ಯ ವೃದ್ಧಿ, ಪ್ರತಿಭೆ ಅನಾವರಣ: ವಿಜಯಲಕ್ಷ್ಮಿ ಕಡಂಬ

JCI Shivamogga ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ವತಿಯಿಂದ ಸ್ನೇಹ ಮಿಲನ...

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...