ರಕ್ತದಾನವು ಅತ್ಯಂತ ಶ್ರೇಷ್ಠ ಮಾನವೀಯ ಸೇವೆಯಾಗಿದ್ದು, ಆರೋಗ್ಯವಂತ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವವರ ಜೀವ ಉಳಿಸಲು ಕೈಜೋಡಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಕರೆ ನೀಡಿದರು.
ಹುಂಚ ಪದ್ಮಾಂಬಾ ಶಾಲೆಯ ಆವರಣದಲ್ಲಿ ರೋಟರಿ ಕ್ಲಬ್ ಕೋಣಂದೂರು ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಅಪಘಾತ, ಶಸ್ತ್ರಚಿಕಿತ್ಸೆ ಹಾಗೂ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ರಕ್ತದ ಅಗತ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ರಕ್ತದಾನಿಗಳ ಕೊಡುಗೆ ಅಮೂಲ್ಯವಾಗಿದ್ದು, ಸಮಾಜದಲ್ಲಿ ರಕ್ತದಾನದ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಶಿಬಿರದಲ್ಲಿ ದಾಖಲೆ ಮಟ್ಟದಲ್ಲಿ 55 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು. ರಕ್ತದಾನ ಮಾಡಿದ ದಾನಿಗಳಿಗೆ ಜ್ಯೂಸ್, ಹಣ್ಣು ಹಾಗೂ ಪುರಸ್ಕಾರ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೋಣಂದೂರು ಅಧ್ಯಕ್ಷ ಸಂದೇಶ್ ಕುಮಾರ್ ಕೆ.ಎಂ., ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ, ಬಿ.ಟಿ. ಈಶ್ವರಪ್ಪ, ಅಭಿಷೇಕ್, ಗುರುಪ್ರಸಾದ್ ಸೇರಿದಂತೆ ರೋಟರಿ ಸದಸ್ಯರು ಹಾಗೂ ಹುಂಚದ ಸರ್ವಮಿತ್ರರು ಭಾಗವಹಿಸಿದ್ದರು.
ಶಿಬಿರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ರೋ. ಕಿರಣ್ ಜೆ.ಪಿ. ಮತ್ತು ಅವರ ತಂಡದ ಸಂಘಟನಾ ಕಾರ್ಯಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತವಾಯಿತು. 55 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಶಿಬಿರ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಮಿಡ್ಟೌನ್ ರೋಟರಿ ಫೌಂಡೇಷನ್ ವತಿಯಿಂದ ಸೇವಾ ಪುರಸ್ಕಾರ ಪತ್ರವನ್ನು ನೀಡಲಾಯಿತು.
ರಕ್ತದಾನ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಸಾರ್ವಜನಿಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾನವೀಯ ಸೇವೆಗೆ ಕೈಜೋಡಿಸಿರುವುದು ವಿಶೇಷವಾಗಿತ್ತು.
