“ಏಸೂರು ಕೊಟ್ಟರೂ ಈಸೂರು ಕೊಡೆವು” ಎನ್ನುವ ಸಿಂಹ ಗರ್ಜನೆಯೊಂದಿಗೆ, ಭಾರತದಲ್ಲೇ ಪ್ರಥಮವಾಗಿ “ಸ್ವತಂತ್ರ ಸರ್ಕಾರ”ವೆಂದು ಘೋಷಿಸಿಕೊಂಡು ಬ್ರಿಟಿಷರ ವಿರುದ್ಧ ಐತಿಹಾಸಿಕ ಹೋರಾಟ ನಡೆಸಿದ ನಮ್ಮ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ‘ಈಸೂರು’ ಅಮರ ಬಲಿದಾನಿಗಳ ಪುಣ್ಯಭೂಮಿಯಾಗಿದೆ.
ಇಂದು ಈಸೂರಿನ ‘ಸ್ಮಾರಕ ಭವನ’ದಲ್ಲಿ ಆಯೋಜಿಸಲಾಗಿದ್ದ “ಹುತಾತ್ಮ ಸ್ವಾತಂತ್ರ್ಯ ಯೋಧರ ಮತ್ತು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಅನಾವರಣ” ಕಾರ್ಯಕ್ರಮದಲ್ಲಿ ಭಾಗವಹಿಸಿ, ಉದ್ಘಾಟನೆ ನೆರವೇರಿಸಲಾಯಿತು.
ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಶ್ರೀ ಗುರುಪ್ಪ ಕಮ್ಮಾರ, ಶ್ರೀ ಜಿನಹಳ್ಳಿ ಕೆ. ಮಲ್ಲಪ್ಪ, ಶ್ರೀ ಬೀರಕಟ್ಟೆ ಹಾಲಪ್ಪ, ಶ್ರೀ ಗೌಡ್ರು ಶಂಕರಪ್ಪ ಹಾಗೂ ಶ್ರೀ ಸೂರ್ಯನಾರಾಯಣಚಾರ್ ಸೇರಿದಂತೆ ಎಲ್ಲಾ ಅಮರ ಯೋಧರಿಗೆ ಮತ್ತು ಈಸೂರು ಸಂಗ್ರಾಮದ ಸತ್ಯಾಗ್ರಹಿಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳು. ಅವರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮದ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಸದಾ ಸ್ಪೂರ್ತಿಯಾಗಲಿ.
ಈ ಸಂದರ್ಭದಲ್ಲಿ ಶ್ರೀ ಎ. ಎಸ್. ಮೋಹನ್‌ಕುಮಾರ್, ನಿವೃತ್ತ IAS ಅಧಿಕಾರಿ ಶ್ರೀ ಪ್ರಭಾಕರ್, ಧರ್ಮದರ್ಶಿ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
