ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಮುಖ್ಯ ಯೋಜನಾ ಅಧಿಕಾರಿ, ಜಿಲ್ಲಾ ಪಂಚಾಯತ್ ಹಾಗೂ ಅಧೀನ ಕಾರ್ಯದರ್ಶಿ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಮಂಡಳಿ, ಶಿವಮೊಗ್ಗದ ಹನುಮಾನಾಯಕ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ ಮಾತನಾಡಿದ ಅವರು, ಸಾಧಕರನ್ನು ಗೌರವಿಸುವುದರಿಂದ ಅವರ ಸಾಧನೆಗೆ ಪ್ರೋತ್ಸಾಹ ದೊರೆಯುವುದರ ಜೊತೆಗೆ, ಸಮಾಜದಲ್ಲಿರುವ ಇತರರಿಗೂ ಸಾಧನೆ ಮಾಡುವ ಸ್ಫೂರ್ತಿ ದೊರೆಯುತ್ತದೆ. ಇಂತಹ ಕಾರ್ಯಕ್ರಮಗಳು ಸಂಘಟನೆಯ ಶಕ್ತಿ ಮತ್ತು ವರ್ಚಸ್ಸನ್ನು ಹೆಚ್ಚಿಸುವುದರ ಜೊತೆಗೆ ಸಮಾಜಮುಖಿ ಚಿಂತನೆಗೆ ಉತ್ತೇಜನ ನೀಡುತ್ತವೆ ಎಂದು ಹೇಳಿದರು.
ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಆಚರಿಸಲ್ಪಡಬೇಕು. ಇಂತಹ ಕಾರ್ಯಕ್ರಮಗಳಿಂದ ಪರಸ್ಪರ ಪರಿಚಯ, ಸ್ನೇಹ, ಸೌಹಾರ್ದತೆ ಹಾಗೂ ಸೇವಾ ಮನೋಭಾವನೆ ಮತ್ತಷ್ಟು ವೃದ್ಧಿಯಾಗುತ್ತದೆ. ಜಾತಿ, ಮತ, ಭೇದಭಾವಗಳನ್ನು ಮೀರಿ ಎಲ್ಲರೂ ಒಗ್ಗೂಡಿ ಆಚರಿಸುವ ಹಬ್ಬಗಳು ಸಮಾಜದಲ್ಲಿ ಏಕತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುತ್ತವೆ ಎಂದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಜಾತಿಭೇದಗಳನ್ನು ತೊರೆದು ಎಲ್ಲರೂ ಒಗ್ಗೂಡಿ ಆಚರಿಸುವ ಇಂತಹ ಹಬ್ಬಗಳು ಮನಸ್ಸಿಗೆ ಉಲ್ಲಾಸ ನೀಡುವುದರ ಜೊತೆಗೆ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಮತ್ತು ಪರಸ್ಪರ ಬಾಂಧವ್ಯವನ್ನು ಮೂಡಿಸುತ್ತವೆ. ಸಮಾಜದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ಮಧುರ ಮಧುರವಿ ಮಂಜುಳಗಾನ’ ಎಂಬ ಹೆಸರಿನಲ್ಲಿ ಹಳೆಯ ಕನ್ನಡ ಚಿತ್ರಗೀತೆಗಳು, ಪ್ರೇಕ್ಷಕರ ಕೋರಿಕೆಯ ಹಾಡುಗಳು ಸೇರಿದಂತೆ ವಿವಿಧ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯನ, ನೃತ್ಯ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಗಮನ ಸೆಳೆದವು.
ಇದೇ ಸಂದರ್ಭದಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆ ಕುಮಾರಿ ಆದ್ಯ ರಾಜು ಹಾಗೂ ಇತರ ಕಲಾವಿದರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಹಾಗೂ ವೃತ್ತಿಯಲ್ಲಿ ವಿಶೇಷ ಸಾಧನೆ ಮಾಡಿದ ಗಣೇಶ್ ಅವರನ್ನು ಹಾಗೂ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗಣ್ಯರು, ಸಂಘದ ಪದಾಧಿಕಾರಿಗಳು, ಕಲಾವಿದರು, ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಸಾಧಕರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
