ವಿಶ್ವಕರ್ಮ ಸಮಾಜ ವಿಶ್ವವ್ಯಾಪ್ತಿ ಪ್ರಸಿದ್ಧಿ ಪಡೆದ ಸಮಾಜವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ವಿಧಾನಪರಿಷತ್ ಶಾಸಕರಾದ ಡಾ| ಧನಂಜಯ ಸರ್ಜಿ ಹಾಗೂ ಡಿ.ಎಸ್. ಅರುಣ್ ಅವರು ಹೇಳಿದರು.
ವಿಶ್ವದಾದ್ಯಂತ ಇರುವ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ದೇವಾಲಯಗಳನ್ನು ಮತ್ತು ದೇವರ ಮೂರ್ತಿಗಳನ್ನು ನಿರ್ಮಿಸಿದ ಹಿರಿಮೆ ಈ ಸಮಾಜದ ಶಿಲ್ಪಿಗಳದ್ದಾಗಿದ್ದು, ಅನ್ನದಾತರಿಗೆ ನೇಗಿಲು ಮುಂತಾದ ಉಪಕರಣಗಳ ನಿರ್ಮಾಣದಲ್ಲಿ ಹಾಗೂ ಅಪೂರ್ವ ಚಿನ್ನಾಭರಣ ಹಾಗೂ ಕೆತ್ತನೆಯ ಕಲಾಕೃತಿಗಳ ನಿರ್ಮಾಣದಲ್ಲಿ ವಿಶ್ವಕರ್ಮ ಬಾಂಧವರು ವಿಶ್ವಮಾನ್ಯರು ಎಂದರು.
ಶಿವಮೊಗ್ಗದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಜರುಗಿದ ವಿಶ್ವಕರ್ಮ ಸೌಹಾರ್ದ ಸಹಕಾರಿಯ ಸರ್ವಸದಸ್ಯರ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಶಿವಮೊಗ್ಗದ ವಾಜಪೇಯಿ ಬಡಾವಣೆಯಲ್ಲಿ ವಿಶ್ವಕರ್ಮ ಸೌಹಾರ್ದ ಸಹಕಾರಿ ವತಿಯಿಂದ ಕಲಾಕೆತ್ತನೆ, ಮೂರ್ತಿಗಳ ನಿರ್ಮಾಣ, ಚಿನ್ನಬೆಳ್ಳಿ ಕುಸುರಿ ಕೆಲಸ ಸೇರಿದಂತೆ ವಿಶ್ವಕರ್ಮರ ಪಂಚ ಕಸುಬುಗಳ ಕುರಿತಂತೆ ನಿರ್ಮಿಸುತ್ತಿರುವ ವಿಶ್ವಕರ್ಮ ಕರಕುಶಲ ಕೌಶಲ್ಯ ತರಬೇತಿ ಭವನದ ನಿರ್ಮಾಣ ಮಾಡುತ್ತಿದ್ದು, ವೃತ್ತಿ ಉಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ಕಾರ್‍ಯವಾಗಿದೆ ಎಂದರು. ಈ ಭವನಕ್ಕೆ ಸಾಕಷ್ಟು ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದರು.
ಆರಂಭಿಕವಾಗಿ ತಲಾ ೫ ಲಕ್ಷ ರೂ. ಬಿಡುಗಡೆ ಮಾಡಿದ್ದು, ಶಾಸಕ ಚನ್ನಬಸಪ್ಪ ಅವರು ಈಗಾಗಲೇ ೧೫ ಲಕ್ಷ ರೂ. ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ೧೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಆದಷ್ಟು ಶೀಘ್ರವಾಗಿ ಈ ಭವನ ನಿರ್ಮಾಣವಾಗಲಿ ಎಂದರು.
ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷ ಎನ್. ಗೋಪಿನಾಥ್ ಅವರು ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಅಧ್ಯಕ್ಷ ಎಸ್. ಚಂದ್ರಕಾಂತ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಸೇವೆ ಪರಿಗಣಿಸಿ ವೈಯಕ್ತಿಕ ಸಾಧನೆಗಾಗಿ ರಾಷ್ಟ್ರಮಟ್ಟದಲ್ಲಿ ಅಚೀವರ್ ಅವಾರ್ಡ್ ಪುರಸ್ಕೃತ ರಾದ ಶಿವಮೊಗ್ಗ ಮಾಚೇನಹಳ್ಳಿ ಕೈಗಾರಿಕಾ ಕೇಂದ್ರದ ಶಾಂತಲಾ ಆಟೋ ಮೆಷಿನಿಂಗ್ ಪ್ರೈ.ಲಿ., ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎ.ಎಲ್. ಚಂದ್ರಶೇಖರ್ ಹಾಗೂ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ ಹೆಸರಿನಲ್ಲಿ ಶಿವಮೊಗ್ಗದ ಜನತೆಗೆ ಹಲವು ಅಭೂತಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಪ್ರಸಿದ್ಧಿ ಪಡೆದ ಹಾಗೂ ಅಯೋಧ್ಯಾ ರಾಮಮಂದಿರದ ಶ್ರೀ ರಾಮನ ಮೂರ್ತಿಯನ್ನು ನಿರ್ಮಿಸಿದ ಮೈಸೂರಿನ ಅರುಣ್ ಯೋಗಿರಾಜ್ ಅವರನ್ನು ಶಿವಮೊಗ್ಗಕ್ಕೆ ಕರೆಸಿದ ಹಿರಿಮೆಯ ಗಾಯತ್ರಿ ಜ್ಯುವೆಲರ್‍ಸ್‌ನ ಶ್ರೀ ಶಶಿ ಮಂಗಳಗಾರ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಸಹಕಾರಿ ಉಪಾಧ್ಯಕ್ಷ ಸಿ.ಪಿ. ಶಿವಕುಮಾರಾಚಾರ್, ಗೌರವ ಕಾರ್ಯದರ್ಶಿ ಕೆ. ಈಶ್ವರಾಚಾರಿ, ನಿರ್ದೇಶಕರಾದ ಪಿ. ಶ್ರೀನಿವಾಸ್, ಬಿ. ಸುರೇಶ್, ಸುರೇಶ್ ಬಾಬು, ಹೆಚ್.ಎಸ್. ನಾಗರಾಜ್, ಗಣೇಶ್ ಶೇಟ್, ಎಂ. ಚಂದನ್, ಸುರೇಶ್ ಡಿ. ಶೇಟ್, ಪುಟ್ಟಾಚಾರ್, ಸಿ. ಗುರುದೀಪ್, ಶ್ರೀಮತಿ ಲೋಲಾಕ್ಷಿ ಜಕಣಾಚಾರ್, ಶ್ರೀಮತಿ ಎಸ್. ಇಂದಿರಾ, ಸಿಇಓ ಶ್ರೀಮತಿ ರೂಪಾ ಹಾಗೂ ಸಂಘದ ಸದಸ್ಯರು, ಸಿಬ್ಬಂದಿ ಮತ್ತು ಪಿಗ್ಮಿ ಸಂಗ್ರಾಹಕರಿದ್ದರು.
ವಿಶ್ವಕರ್ಮ ಕರಕುಶಲ ಕೌಶಲ್ಯಭವನ ನಿರ್ಮಾಣಕ್ಕೆಹೆಚ್ಚಿನ ಅನುದಾನ : ಡಾ| ಸರ್ಜಿ-ಅರುಣ್ ಭರವಸೆ
Date:
