ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತಂತೆ ಕಸ್ತೂರಿರಂಗನ್ ನೇತೃತ್ವದ ಸಮಿತಿ ನೀಡಿರುವ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ಹೊರಡಿಸಿರುವ 7 ನೇ ಬಾರಿಯ ಕರಡು ಅಧಿಸೂಚನೆಗೆ ರಾಜ್ಯದ ನಿರ್ಣಯವನ್ನು ಇದೇ ತಿಂಗಳ 27 ರೊಳಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದ ಅಭಿಪ್ರಾಯವನ್ನು ಸಲ್ಲಿಸುವ ಸಲುವಾಗಿ ಚರ್ಚೆ ನಡೆಸಲು ಕರೆಯಲಾಗಿರುವ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಇಂದು ಮಧ್ಯಾಹ್ನ ಭೋಜನದ ನಂತರ ಆರಂಭವಾದ ವಿಧಾನ ಸಭಾ ಕಲಾಪದಲ್ಲಿ ಶಾಸಕರಾದ ಆರ್. ಬಿ. ದೇಶಪಾಂಡೆ, ಆರಗ ಜ್ಞಾನೇಂದ್ರ, ಬಿ. ವೈ. ವಿಜಯೇಂದ್ರ, ಸುರೇಶ್ ಬಾಬು, ನಯನ ಮೋಟಮ್ಮ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಪೊನ್ನಣ್ಣ, ಹಾಗೂ ಸಚಿವರಾದ ಈಶ್ವರ್ ಖಂಡ್ರೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಆರಗ ಜ್ಞಾನೇಂದ್ರ ಅವರು ಮಾತನಾಡಿ, ಕಸ್ತೂರಿರಂಗನ್ ವರದಿಯು ಕಾಡಂಚಿನ ಜನರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಿದೆ. ಈ ಭಾಗದ ಜನರಿಗೆ ತಮ್ಮ ಬದುಕಿಗೆ ಏನಾಗುವುದೋ ಎಂಬ ಆತಂಕ ಎದುರಾಗಿದೆ. ಹಾಗಾಗಿ ಮುಖ್ಯಮಂತ್ರಿ ಅವರು ನಡೆಸಿದ ಸಭೆಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ತಮ್ಮ ಆತಂಕವನ್ನು ಹೇಳಿಕೊಂಡಿದ್ದಾರೆ. ಸ್ಯಾಟಿಲೖಟ್ ಆಧಾರದ ಮೇಲೆ
ತಯಾರಿಸಲಾಗಿರುವ ಈ ವರದಿ ವೈಜ್ಞಾನಿಕವಾಗಿದೆ. ಅರಣ್ಯದಂಚಿನಲ್ಲಿ ವಾಸಿಸುವ ಜನರೆ ಕಾಡನ್ನು ಉಳಿಸಿ, ಬೆಳೆಸುತ್ತಿದ್ದಾರೆ. ಆದರೆ ಪರಿಸರ ಸಂರಕ್ಷಣೆ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಗಳಂತಹ ಮತ್ತಿತರ ಕಾಯ್ದೆಗಳು ಅಲ್ಲಿನ ಜನರಿಗೆ ಬದುಕಲು ಬಿಡುತ್ತಿಲ್ಲ ಎಂದರು.
ಆರ್.ವಿ. ದೇಶಪಾಂಡೆ ಅವರು ಮಾತನಾಡಿ ಸಮಿತಿಯು ಖುದ್ದಾಗಿ, ಈ ಸ್ಥಳಗಳ ಪರಿಶೀಲನೆ ನಡೆಸಿಲ್ಲ. ಸ್ಥಳೀಯ ಜನರ ಅಭಿಪ್ರಾಯವನ್ನು ಕೂಡ ತೆಗೆದುಕೊಂಡಿಲ್ಲ. ಒಂದು ಕಡೆ ಕುಳಿತು ಸ್ಯಾಟಲೈಟ್ ಮೂಲಕ ವರದಿಯನ್ನು ತಯಾರಿಸಿದ್ದಾರೆ. ನೂರಾರು ವರ್ಷಗಳಿಂದ ಅರಣ್ಯದಂಚಿನಲ್ಲಿ ಜೀವನ ನಡೆಸುತ್ತಿರುವವರು ಗೌರವದಿಂದ ಬಾಳಬೇಕು. ಆರು ರಾಜ್ಯಗಳನ್ನು ಒಳಗೊಂಡಿರುವ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ, ಕರ್ನಾಟಕದ ಅತಿ ಹೆಚ್ಚಿನ ಪ್ರದೇಶವನ್ನು ಗುರುತಿಸಲಾಗಿದೆ. ಪರಿಸರವೂ ಉಳಿಯುವ ಜೊತೆಗೆ ಸ್ಥಳೀಯ ಜನರ ಜೀವನಕ್ಕೂ ತೊಂದರೆಯಾಗಬಾರದು. ಆ ರೀತಿಯಲ್ಲಿ ವಾಸ್ತವಾಧಾರಿತ ಮೌಲ್ಯಮಾಪನ ಮಾಡಬೇಕೆಂದರು.
ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಮಾತನಾಡಿ ಪಶ್ಚಿಮಘಟ್ಟ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅದಕ್ಕೆ ದೇಶಕ್ಕೆ ಮಳೆ ತರಿಸುವಂತಹ ಶಕ್ತಿ ಇದೆ. ನೂರಾರು ವರ್ಷಗಳಿಂದ ಜೀವನ ಕಟ್ಟಿಕೊಂಡಿರುವವರಿಂದ ಪಶ್ಚಿಮಘಟ್ಟಕ್ಕೆ ಹಾನಿಯಾಗುವುದಿಲ್ಲ. ಆದರೆ ಪ್ರಭಾವಿಗಳಿಂದ ದೊಡ್ಡ ದೊಡ್ಡ ಮಟ್ಟದಲ್ಲಿ ಅತಿಕ್ರಮಣ ಆಗದಂತೆ ತಡೆಯಬೇಕು. ಈ ವರದಿಯಲ್ಲಿ ನಮ್ಮ ರಾಜ್ಯದ 10 ಜಿಲ್ಲೆಗಳಿಂದ 20668 ಚದರ ಕಿ.ಮೀ ಒಳಪಟ್ಟಿದೆ. ನಮ್ಮ ಸರ್ಕಾರ ಈ ವರದಿಯನ್ನು ತಿರಸ್ಕಾರ ಮಾಡಿದೆ. ಈ ವರದಿಯಿಂದ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲರೂ ಏಕಪಕ್ಷೀಯವಾಗಿ ಒಮ್ಮತದಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಅಲ್ಲದೆ ಶರಾವತಿ ಮುಳುಗಡೆ ಪ್ರದೇಶದ ಜನರ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವುದಾಗಿ ತಿಳಿಸಿದರು.
ಪೊನ್ನಣ್ಣ ಅವರು ಮಾತನಾಡಿ, ನಮ್ಮ ಕೊಡಗಿನಲ್ಲಿ ಕಾಫಿ ಬೆಳೆಯುತ್ತಿರುವ ಜಾಗವನ್ನು ಸಹ ಪರಿಸರ ಸೂಕ್ಷ್ಮ ಪ್ರದೇಶ ಎಂದು ಈ ವರದಿಯಲ್ಲಿ ಗುರುತಿಸಲಾಗಿದೆ. ಈ ವರದಿಯಲ್ಲಿ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತು ಮಾಡಿಲ್ಲ. ಹಾಗಾಗಿ ಹೊಸದಾಗಿ ತಜ್ಞರ ಸಮಿತಿಯನ್ನು ರಚಿಸಿ, ಪ್ರತ್ಯಕ್ಷವಾಗಿ ಸ್ಥಳಗಳಿಗೆ ಭೇಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕು ಎಂದರು.
ಬಿ.ವೈ. ವಿಜಯೇಂದ್ರ ಅವರು ಮಾತನಾಡಿ ಕಸ್ತೂರಿರಂಗನ್ ವರದಿ 13 ವರ್ಷದಷ್ಟು ಹಳೆಯದಾಗಿದ್ದು, ಕೇರಳಂ ರಾಜ್ಯದವರು ಮಾಡಿದ ರೀತಿಯಲ್ಲಿಯೇ ರಾಜ್ಯ ಸರ್ಕಾರವು ಭೌತಿಕ ಸಮೀಕ್ಷೆ ಮಾಡಲು ಕೇಂದ್ರ ಸರ್ಕಾರಕ್ಕೆ ಕನಿಷ್ಠ ಒಂದು ವರ್ಷ ಕಾಲಾವಕಾಶವನ್ನು ಕೇಳಬೇಕೆಂದರು.
ನಯನ ಮೋಟಮ್ಮ ಅವರು, ಕಾಫಿ ಬೆಳೆ ಬೆಳೆದು ಜೀವನ ನಡೆಸುತ್ತಿರುವ ಮೂಡಿಗೆರೆಯ 31 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. 17 ನೇ ಶತಮಾನದಿಂದಲೇ ಕಾಫಿ ಬೆಳೆಯುತ್ತಿರುವ ನಮ್ಮವರ ಕೃಷಿ ಭೂಮಿಯನ್ನು ಈ ವರದಿಯಲ್ಲಿ ಹೇಗೆ ಸೇರಿಸಲಾಗಿದೆ. ಅವೈಜ್ಞಾನಿಕವಾಗಿರುವ ಈ ವರದಿಯನ್ನು ಸರ್ಕಾರ ತಿರಸ್ಕರಿಸುವ ಮೂಲಕ ಇಲ್ಲಿನ ಜನರ ಕೖಷಿ ಭೂಮಿಯನ್ನು ರಕ್ಷಣೆ ಮಾಡಬೇಕೆಂದರು.
