B.Y. Raghavendra ಮಾನವನಿಗೆ ಒಂದೇ ಜಾತಿ, ಒಂದೇ ಮತ. ಎಲ್ಲರೂ ಸಮಾನರು ಎಂದು ಸಾರಿದವರು ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ನೂಲುವ ಕಾಯಕದ ಮೂಲಕ ಸ್ವಾಭಿಮಾನದ ಬದುಕು ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದವರು ನುಲಿಯ ಚಂದಯ್ಯ. ಇಂತಹ ಮಹಾನ್ ದಾರ್ಶನಿಕರ ಹಾದಿಯಲ್ಲಿ ನಾವು ಸಾಗಬೇಕೆಂದು ಸಂಸದರಾದ ಬಿ.ವೈ ರಾಘವೇಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಶ್ರಾಯದಲ್ಲಿ ಶುಕ್ರವಾರ ಕುವೆಂಪು ರಂಗಮAದಿರದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಹಾಗೂ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ಪದ್ದತಿ ವಿರುದ್ದ ತಮ್ಮದೇ ಹಾದಿನಲ್ಲಿ ಸಮರ ಸಾರಿ, ಅಸ್ಪೃಶ್ಯತೆ ಮತ್ತು ತಾರತಮ್ಯಗಳ ವಿರುದ್ದ ಹೋರಾಡಿ, ಕೆಳ ಜಾತಿಯವರಿಗೆ ಶಿಕ್ಷಣ ಮತ್ತು ಮೂಲಭೂತ ಹಕ್ಕುಗಳನ್ನು ಕೊಡಿಸುವ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರು ಕೆಳವರ್ಗದವರು ಸೇರಿದಂತೆ ಎಲ್ಲರಿಗೂ ಶಿಕ್ಷಣ ಸಿಗಬೇಕು ಹಾಗೂ ಮನುಷ್ಯ ಮನುಷ್ಯತ್ವ ಹೊಂದಿ ಬದುಕಬೇಕು ಎಂದು ಹೋರಾಡುವ ಮೂಲಕ ಸಾಮರಸ್ಯ, ಸೌಹಾರ್ದಯುತ ಜೀವನ ಕಟ್ಟಿದ ದಾರ್ಶನಿಕರು ಎಂದು ತಿಳಿಸಿದರು.
ನುಲಿಯ ಚಂಚಯ್ಯನವರು ಹುಲ್ಲನ್ನು ತಂದು ಹೊಸೆದು ಹಗ್ಗ ಮಾಡುವ ಮೂಲಕ ಕಾಯಕದ ಮಹತ್ವವನ್ನು ಜಗತ್ತಿಗೇ ಸಾರಿದ ಇವರು ರಚಿಸಿರುವ ವಚನಗಳು ಇಂದಿಗೂ ನಮ್ಮ ಜೀವನದ ಹಾಸುಹೊಕ್ಕಾಗಿವೆ. ಆಧುನಿಕ ತಾಂತ್ರಿಕತೆ, ಎಐ ನಂತಹ ಕಾಲದಲ್ಲಿಯೂ ತಂದೆ ತಾಯಿ ಪ್ರೀತಿ ಮಮತೆ, ಗುರುಹಿರಿಯರ ಮಾರ್ಗದರ್ಶನ, ಹಾರೈಕೆಗಳು ಗಟ್ಟಿಯಾಗಿವೆ. ಆಧುನಿತೆಯ ನಡುವೆಯೂ ನಮ್ಮ ಹಿರಿಯರ, ದಾರ್ಶನಿಕರ ಹಾದಿಯಲ್ಲಿ ನಡೆದು ಎಲ್ಲವನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಬೇಕೆಂದು ಕರೆ ನೀಡಿದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಅಂದು ಸಮಾಜದಲ್ಲಿ ತಾಂಡವವಾಡುತ್ತಿದ್ದ ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ತಾರತಮ್ಯಗಳು ವಿರುದ್ದ ಹೋರಾಡಿದ ನಾರಾಯಣ ಗುರುಗಳು ದೇಶ ಸೇವೆಯೇ ಈಶ ಸೇವೆ ಎಂದು ಅರ್ಥ ಮಾಡಿಸಿದವರು.
ಅತ್ಯಂತ ನಿಷ್ಠೆಯಿಂದ ಹಗ್ಗ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡ ನುಲಿಯ ಚಂದಯ್ಯನವರು ಒಂದೇ ನೂಲನ್ನು ಒಟ್ಟುಗೂಡಿಸಿ ಹಗ್ಗ ಹೊಸೆಯುವ ಮೂಲಕ ನಮ್ಮ ಸಾಮೂಹಿಕ ಶಕ್ತಿಯ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ. ಅವರು ಕಾಯಕವೇ ಕೈಲಾಸ ಎಂದು ನಂಬಿ, ಬಸವಣ್ಣನವರೊಂದಿಗೆ ಕೆಲಸ ಮಾಡಿದ ಮಹಾನ್ ಶರಣರು. ಮನುಕುಲಕ್ಕಾಗಿ ಕಾಯಕ ಮಾಡಿದವರು ಎಂದು ಸ್ಮರಿಸಿದರು.
B.Y. Raghavendra ಶಿವಮೊಗ್ಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ|| ಹೆಚ್.ಕಲ್ಲನ ಬ್ರಹ್ಮ ಶ್ರೀ ನಾರಾಯಣ ಗುರು ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜಾತಿ-ಮತದ ಕರಾಳ ವ್ಯವಸ್ಥೆಯಿಂದ ನಲುಗಿದ್ದ ಸಮಾಜವನ್ನು ಸರಿಪಡಿಸಲು ದಾರ್ಶನಿಕರು, ಮಹಾಪುರುಷರು, ಶರಣರು ಹೋರಾಟ ಮಾಡುತ್ತಾ, ಮಾನವರೆಲ್ಲಾ ಒಂದೇ ಎಂದು ಸಾರಿದರು, ಸಂಘನೆ, ಶಿಕ್ಷಣ, ವೈಚಾರಿಕತೆಯ ಮಹತ್ವ ತಿಳಿಸುತ್ತಾ, ಮನುಷ್ಯತ್ವ ರೂಪಿಸುವ ಕಾಯಕದಲ್ಲಿ ತೊಡಗಿದ್ದರು.
ಆ ಕಾಲದಲ್ಲಿ ಕೆಳವರ್ಗದ ಜನರಿಗೆ ಕ್ಷೇತಪ್ರವೇಶ, ಶಿಕ್ಷಣ ಮತ್ತು ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾರಾಯಣ ಗುರುಗಳು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದರು.
ಮೌನ ಕ್ರಾಂತಿಯ ಮೂಲಕ ಸಮಾಜ ಬದಲಾವಣೆಯಲ್ಲಿ ತೊಡಗಿದರು. ಗಾಂಧೀಜಿ ಕೂಡ ಇವರ ಪ್ರಭಾವಕ್ಕೆ ಒಳಗಾಗಿದ್ದರು. ದಲಿತರು, ಶೋಷಿತರು ಅಸ್ಪೃಶ್ಯರು ಸೇರಿದಂತೆ ಇಡೀ ಸಮಾಜಕ್ಕೆ ಶಿಕ್ಷಣದ ಮೂಲಕ ಸಮಾನತೆ ತರಲು ಹೋರಾಟ ಮಾಡಿದರು. ಯಾವುದೇ ವ್ಯಕ್ತಿಯು ಹುಟ್ಟಿನಿಂದ ಶ್ರೇಷ್ಠನಾಗುವುದಿಲ್ಲ, ಅವನ ಗುಣ ಮತ್ತು ಕರ್ಮಗಳಿಂದ ಶ್ರೇಷ್ಠನಾಗುತ್ತಾನೆ ಎಂಬುದನ್ನು ಅವರು ಸಾರಿದರು.
“ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿAದ ಬಲಶಾಲಿಗಳಾಗಿ” ಎಂದು ಕರೆ ನೀಡಿದ ಅವರು, ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದರು.
ಇಂದಿನ ಆಧುನಿಕ ಯುಗದಲ್ಲೂ ನಾರಾಯಣ ಗುರುಗಳ ತತ್ವಗಳು ಮತ್ತು ಸಂದೇಶಗಳು ಅತ್ಯಂತ ಪ್ರಸ್ತುತವಾಗಿವೆ. ಸಮಾಜದಲ್ಲಿ ಶಾಂತಿ, ಸಹೋದರತ್ವ, ಸಮಾನತೆ ಮತ್ತು ಜಾತ್ಯತೀತತೆಯನ್ನು ಕಾಯ್ದುಕೊಳ್ಳಲು ಅವರ ಹಾದಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಶ್ರೀ ನುಲಿಯ ಚಂದಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 12 ನೇ ಶತಮಾನ ಜ್ಞಾನದ ದೀಪ್ತಿ ಬೆಳಗಿದ ಯುಗ. ಆ ಜ್ಞಾನ ಪಥವನ್ನು ನಾವು ಎಂದಿಗೂ ಮರೆಯುವಂತಿಲ್ಲ. ನೂಲುವ ಕಾಯಕದಲ್ಲಿ ತೊಡಗಿದ್ದ ಚಂದಯ್ಯನವರು ಅರಿವಿನ ಹಗ್ಗವನ್ನು ಹೊಸೆದರು. ಲಿಂಗಕ್ಕಿAತ ಜಂಗಮನೇ ಪ್ರಧಾನ ಎಂದು ನಂಬಿ ನಡೆದವರು. ಹುಲ್ಲಿನಿಂದ ಹಗ್ಗ ಹೊಸೆದು ಬಂದ ಹಣದಲ್ಲಿ ದಾಸೋಹ ಮಾಡುತ್ತಿದ್ದ ಅವರು ಮನುಕುಲದ ಉದ್ದಾರಕ್ಕಾಗಿ ಹಲವಾರು ವಚನಗಳನ್ನು ರಚಿಸಿದ್ದಾರೆ. ಅದರಲ್ಲಿ 48 ವಚನ ಲಭಿಸಿವೆ. ಇಂದಿನ ಯುವ ಪೀಳಿಗೆ ಚಂದಯ್ಯರAತಹ ಮಹಾತ್ಮರ ಬಗ್ಗೆ ತಿಳಿದುಕೊಳ್ಳಬೇಕಿದೆ.
ನುಲಿಯ ಚಂದಯ್ಯನವರ ಜೀವನದ ಅತ್ಯಂತ ಪ್ರಸಿದ್ಧ ಘಟನೆ ಎಂದರೆ ಅವರ ‘ಇಷ್ಟಲಿಂಗ’ ಕಳೆದುಹೋದ ಪ್ರಸಂಗ. ಒಮ್ಮೆ ಕಾಯಕದಲ್ಲಿ ಮಗ್ನರಾಗಿದ್ದಾಗ ಅವರ ಕೊರಳಲ್ಲಿದ್ದ ಇಷ್ಟಲಿಂಗ ಜಾರಿ ಕೆಳಗೆ ಬಿತ್ತು. ಆದರೆ ಚಂದಯ್ಯನವರು, “ನನಗೆ ಕಾಯಕವೇ ಮುಖ್ಯ, ಕಾಯಕದ ಸಮಯದಲ್ಲಿ ಲಿಂಗವನ್ನು ಹುಡುಕುತ್ತಾ ಕುಳಿತರೆ ನನ್ನ ಕಾಯಕಕ್ಕೆ ಲೋಪ ಉಂಟಾಗುತ್ತದೆ” ಎಂದು ಲಿಂಗವನ್ನು ಬಿಟ್ಟು ತಮ್ಮ ಕಾಯಕವನ್ನು ಮುಂದುವರಿಸಿದರು.
ಆಗ ಇಷ್ಟಲಿಂಗವೇ ಚಂದಯ್ಯನವರ ಕಾಯಕ ನಿಷ್ಠೆಗೆ ಮೆಚ್ಚಿ ಅವರ ಹಿಂದೆ ಓಡಿಬಂದು “ನನ್ನನ್ನು ಸ್ವೀಕರಿಸು” ಎಂದು ಬೇಡಿಕೊಂಡಿತು. ಆಗ ಚಂದಯ್ಯನವರು, “ಕಾಯಕವಿಲ್ಲದೆ ಉಣ್ಣುವ ಲಿಂಗವೂ ನನಗೆ ಬೇಡ, ದುಡಿಯದೆ ಕುಳಿತು ತಿನ್ನುವುದು ದಾಸೋಹವಲ್ಲ” ಎಂದು ಲಿಂಗಕ್ಕೇ ಕಾಯಕದ ಮಹತ್ವ್ವವನ್ನು ಬೋಧಿಸಿದರು. ಅರಿವಿಗೆ ಸಿಕ್ಕಿದ ತೊಡರುಗಳನ್ನು ನಿವಾರಿಸುತ್ತಾ ಬಂದ ಚಂದಯ್ಯನವರು ಕಾಯಕ ಮತ್ತು ದಾಸೋಹದ ಶ್ರೇಷ್ಠತೆಯನ್ನು ಸಾರಿದರು ಎಂದು ತಿಳಿಸಿದ ಅವರು ಸಮುದಾಯಕ್ಕೆ ಶಿಕ್ಷಣ ಕೊಡಿಸುವುದು ಅತ್ಯಂತ ಮುಖ್ಯ. ಎಲ್ಲರೂ ಸುಶಿಕ್ಷಿತರಾಗಬೇಕು. ಶಿಕ್ಷಣದ ಮೂಲಕ ಅವರ ತತ್ವಗಳು, ಚಿಂತನೆಗಳನ್ನು ಪಸರಿಸಬೇಕೆಂದು ಆಶಿಸಿದರು.
ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಮಾತನಾಡಿ, ಸಮಾನತೆಯ ತತ್ವ ಸಾರಿದ ಮಹಾದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರು. ಹಾಗೂ ಕಾಯಕದ ಮಹತ್ವ ಸಾರಿದವರು ನುಲಿಯ ಚಂದಯ್ಯ. ಇಂತಹ ಮಹಾನ್ ದಾರ್ಶನಿಕರ ತತ್ವಾದರ್ಶಗಳನ್ನು ನಾವೆಲ್ಲ ಅಳವಡಿಸಿಕೊಂಡು ಸಾಗಬೇಕೆಂದು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್, ವಿವಿಧ ಸಮಾಜಗಳ ಬಾಂಧವರು, ಅಧಿಕಾರಿಗಳು ಹಾಜರಿದ್ದರು.
B.Y. Raghavendra ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶರಣ ನುಲಿಯ ಚಂದಯ್ಯ ಅವರ ಆದರ್ಶಗಳ ಹಾದಿಯಲ್ಲಿ ನಾವು ಸಾಗಬೇಕು- ಬಿ.ವೈ.ರಾಘವೇಂದ್ರ
Date:
