ಸಮಾಜದಲ್ಲಿ ಸತ್ಯವನ್ನು ಎತ್ತಿ ತೋರುವಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ನ್ಯಾಯ ವಿತರಣೆಯ ಸಂದರ್ಭದಲ್ಲಿಯೂ ಛಾಯಾಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ತಾಲೂಕು ಅಧ್ಯಕ್ಷ ಓ.ಬಿ. ರಾಜಶೇಖರಪ್ಪ ಕೆರೆಕೊಪ್ಪ ಅಭಿಪ್ರಾಯಿಸಿದರು.
ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್ ನಲ್ಲಿ ಬುಧವಾರ ಸಂಜೆ ತಾಲೂಕು ಛಾಯಾಚಿತ್ರಗ್ರಾಹಕ ಸಂಘದಿಂದ ಹಮ್ಮಿಕೊಂಡ ೧೮೭ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಪ್ಪು-ಬಿಳುಪಿನಿಂದ ಆರಂಭವಾದ ಛಾಯಚಿತ್ರ ವರ್ಣಮಯವಾಗಿ, ಪ್ರಸ್ತುತ ಡಿಜಿಟಲ್ಮಯವಾಗಿದೆ. ಛಾಯಚಿತ್ರದ ಮೂಲಕವೇ ಅನೇಕರು ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಘದ ಸದಸ್ಯರು ರಾಜಕೀಯೇತರವಾಗಿ ಸಂಘವನ್ನು ಮೇಲೆತ್ತುವ ಕಾರ್ಯ ಮಾಡಬೇಕಿದೆ. ಜತೆಗೆ, ಛಾಯಾಚಿತ್ರಗ್ರಾಹಕರನ್ನು ಸಮಾಜ ಗೌರವಯುತವಾಗಿ ಕಾಣಬೇಕು. ಛಾಯಾಗ್ರಾಹಕರ ಪ್ರಮುಖ ಬೇಡಿಕೆಯಾದ ಛಾಯಾಚಿತ್ರ ಸಭಾ ಭವನ ನಿರ್ಮಾಣದ ಕುರಿತು ಸಚಿವ ಎಸ್. ಮಧುಬಂಗಾರಪ್ಪ ಅವರ ಗಮನಕ್ಕೆ ತರಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಸಂಘದ ಸಂಸ್ಥಾಪಕ ಅಧ್ಯಕ್ಷ ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ನೂರಕ್ಕೂ ಅಧಿಕ ಛಾಯಾಚಿತ್ರಗ್ರಾಹಕರು ಛಾಯಚಿತ್ರದ ಮೂಲಕವೇ ಜೀವನವನ್ನು ಸಾಗಿಸುತ್ತಿದ್ದಾರೆ. ತಾಲೂಕಿನಲ್ಲಿ ೨೦೧೨ ರಲ್ಲಿ ಆರಂಭವಾದ ಸಂಘವು ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಛಾಯಾಚಿತ್ರ ಭವನ ನಿರ್ಮಾಣ ಮಾಡಬೇಕು ಎಂಬುದು ಬಹುದಿನದ ಬೇಡಿಕೆಯಾಗಿದೆ. ಈ ಬಗ್ಗೆ ಮನವಿ ಸಲ್ಲಿಸಿ, ನಿವೇಶನವನ್ನು ಸಹ ಗುರುತಿಸಲಾಗಿತ್ತು. ಆದರೆ, ಅದು ನೆನೆಗುದಿಗೆ ಬಿದ್ದಿದೆ. ಶೀಘ್ರದಲ್ಲಿ ಸಚಿವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಈಶ್ವಪ್ಪ ಬಿ. ಕೆರೆಕೊಪ್ಪ ಮಾತನಾಡಿ, ಛಾಯಾಚಿತ್ರಗ್ರಾಹಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮಾತ್ರವಲ್ಲದೇ, ಡಿಜಿಟಲ್ ಮೊಬೈಲ್ ಹಾವಳಿಯಿಂದ ಸಮರ್ಪಕವಾಗಿಯೂ ಕೆಲಸ ದೊರೆಯುತ್ತಿಲ್ಲ. ಅನೇಕ ಛಾಯಾಚಿತ್ರಗ್ರಾಹಕರು ಸ್ವಂತ ಸೂರು ಇಲ್ಲದೇ, ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಸಾಗಿಸುವುದೇ ದುಸ್ತರವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಮನ ಹರಿಸಿ, ನಿವೇಶನಗಳನ್ನು ಹಂಚಿಕೆ ಮಾಡಿದರೆ ಅನುಕೂಲವಾಗುತ್ತದೆ ಎಂದರು.
ಹಿರಿಯ ಛಾಯಾಚಿತ್ರಗ್ರಾಹಕರಾದ ಎಂ.ಕೆ. ಬಸಪ್ಪ ಕೊಡಕಣಿ, ಪ್ರಕಾಶ್ ಗೌಡ ಜಡೆ, ದಿವಾಕರ ಆನವಟ್ಟಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಬಾಬು ಮೈಸೂರು ಅವರಿಂದ ಒಂದು ದಿನದ ಛಾಯಾಗ್ರಹಣ ಕಾರ್ಯಾಗಾರ ನಡೆಯಿತು.
ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಈಶ್ವರ ಬಿ. ಕೆರೆಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ದಂತ ವೈದ್ಯ ಡಾ. ಅಮೋಘ ವರ್ಷ, ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ಶ್ರೀನಿವಾಸ್, ತಾಲೂಕು ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಮುಖ್ಯ ಶಿಕ್ಷಕ ಹಾಲೇಶ್ ನವುಲೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಜಿ.ಎಂ. ತೋಟಪ್ಪ, ಷಣ್ಮುಖ ಸಾಗರ, ಮೋಹನ ಶಿವಮೊಗ್ಗ, ಪಾರುಸ್ವಾಮಿ ಶಿಕಾರಿಪುರ, ಶಿರೀಷ ಸಿದ್ದಾಪುರ, ಶಿವಕುಮಾರ ಶಿರಾಳಕೊಪ್ಪ, ಹಸೆ ಚಿತ್ತಾರ ಕಲಾವಿದ ಎಚ್. ವಿಶ್ವನಾಥ ಹೆಚ್ಚೆ, ದಯಾನಂದ್, ರಾಜೀವ್, ಅಣ್ಣಪ್ಪ, ತ್ಯಾಗರಾಜ್, ಪ್ರಶಾಂತ, ಶರತ್, ಗಿರೀಶ್, ಸಂತೋಷ್ ಸೇರಿದಂತೆ ಇತರರಿದ್ದರು. ರೂಪಾ ಮಧುಕೇಶ್ವರ ಪ್ರಾರ್ಥಿಸಿ, ಪ್ರಸನ್ನ ಸ್ವಾಗತಿಸಿ, ಕುಸುಮಾ ಇಂಡುವಳ್ಳಿ ವಂದಿಸಿ, ಮೋಹನ್ ಸುರಭಿ ನಿರೂಪಿಸಿದರು.
೨೭ ಸೊರಬ ೦೧ : ಸೊರಬ ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್ ನಲ್ಲಿ ತಾಲೂಕು ಛಾಯಾಚಿತ್ರಗ್ರಾಹಕ ಸಂಘದಿAದ ಹಮ್ಮಿಕೊಂಡ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ದೀವರ ಸಂಘದ ಅಧ್ಯಕ್ಷ ಓ.ಬಿ. ರಾಜಶೇಖರಪ್ಪ ಕೆರೆಕೊಪ್ಪ ಉದ್ಘಾಟಿಸಿದರು.
ಛಾಯಾಚಿತ್ರಗ್ರಾಹಕನ್ನು ಸಮಾಜ ಗೌರವಯುತವಾಗಿ ಕಾಣಬೇಕು- ಓ.ಬಿ.ರಾಜಶೇಖರಪ್ಪ ಕೆರೆಕೊಪ್ಪ
Date:
