ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ವಾಟೆಕೂಡ್ಲು ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ವಾಮಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.
ಈ ಘಟನೆ ಬೆಳಕಿಗೆ ಬಂದ ಬಳಿಕ ಗ್ರಾಮಸ್ಥರಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಜುಲೈ 15ರಂದು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿದ್ದ ಈ ದೃಶ್ಯವನ್ನು ನೋಡಿ ಭಯಗೊಂಡು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶೇಖರಪ್ಪ ಬಿನ್ ಶಂಕ್ರಪ್ಪ ಹಾಗೂ ಶೇಖರ ಶೆಟ್ಟಿ ಬಿನ್ ಗಣಪಯ್ಯ ಶೆಟ್ಟಿ ಅವರ ಮನೆಗಳಿಗೆ ತೆರಳುವ ರಸ್ತೆಯ ಪಕ್ಕದಲ್ಲಿ ಗುರುತಿಸಲಾಗದ ವ್ಯಕ್ತಿಗಳು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಗ್ರಾಮಸ್ಥರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ವಾಮಾಚಾರ ನಡೆಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ
