Monday, July 6, 2026
Monday, July 6, 2026

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸದೃಢಗೊಂಡು ಮುನ್ನಡೆಯಬೇಕು : ಬಿ.ಬಿ.ಕಾವೇರಿ

Date:

ಶಿವಮೊಗ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸದೃಢಗೊಂಡು ಸರ್ಕಾರ ಅಥವಾ ಯಾವುದೇ ಹಣಕಾಸು ಸಂಸ್ಥೆಗಳ ಆರ್ಥಿಕ ನೆರವಿಲ್ಲದೆ ಸ್ವತಂತ್ರವಾಗಿ ನಡೆಯುವಂತಾಗಬೇಕು ಎಂದು ಸರ್ಕಾರದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್‌ನ ಅಬ್ದುಲ್‌ನಜೀರ್‌ಸಾಬ್‌ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ, ಬರ ಪರಿಸ್ಥಿತಿ ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-206ರ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂಬರುವ ವರ್ಷಗಳಲ್ಲಿ ಸರ್ಕಾರದಿಂದ ಯಾವುದೇ ಅನುದಾನ ಬರುವುದನ್ನು ನಿರೀಕ್ಷಿಸದೇ, ಸ್ಥಳೀಯ ಸಂಸ್ಥೆಯ ಆದಾಯದ ಸಂಪನ್ಮೂಲಗಳಾಗಿರುವ ಖಾಲಿ ನಿವೇಶನ ಮತ್ತು ಕಟ್ಟಡಗಳ ಮೇಲಿನ ಆಸ್ತಿ ತೆರಿಗೆ, ಬಾಡಿಗೆ ಮತ್ತು ಇತರೆ ಶುಲ್ಕಗಳು, ಕರವಸೂಲಿ ಮುಂತಾದ ತೆರಿಗೆಗಳನ್ನು ಸಂಗ್ರಹಿಸಿ, ಶೇ.100ರಷ್ಟು ಸಾಧನೆ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ವಿಶೇಷ ಗಮನಹರಿಸಬೇಕೆಂದವರು ನುಡಿದರು.
ಇ-ಖಾತಾಗಳನ್ನು ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಗತಿ ಆಶಾದಾಯಕವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಸಂಸ್ಥೆಗಳ ಮುಖ್ಯಸ್ಥರು ಸಲ್ಲದ ಕಾರಣಗಳನ್ನು ಹೇಳದೆ ನಿರೀಕ್ಷಿತ ಯೋಜನೆಯ ಪ್ರಗತಿಗೆ ಶ್ರಮಿಸುವಂತೆ ಸೂಚಿಸಿದ ಅವರು, “ಎ” ಮತ್ತು ʼಬಿ” ಖಾತಾಗಳನ್ನು ಗುರುತಿಸಿ, ಅವುಗಳ ಮಾಲೀಕರಿಗೆ ದಾಖಲೆಗಳನ್ನು ಒದಗಿಸುವಲ್ಲಿ ವಿಶೇಷ ಗಮನಹರಿಸುವಂತೆ ಸೂಚಿಸಿದರು. ಇದರಿಂದಾಗಿ ಸ್ಥಳೀಯ ಸಂಸ್ಥೆಗಳೆ ಆದಾಯ ಹೆಚ್ಚಳವಾಗಲಿದೆ ಮಾತ್ರವಲ್ಲ ಆಸ್ತಿಗಳ ಮಾಲೀಕರಿಗೆ ಅನುಕೂಲವೂ ಆಗಲಿದೆ ಎಂದರು.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಒದಗಿಸಲಾಗುತ್ತಿರುವ ಶುದ್ಧ ಕುಡಿಯುವ ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು. ನೀರಿನ ಗುಣಮಟ್ಟ ಪರೀಕ್ಷಿಸದ ಕಾರಣಕ್ಕಾಗಿ ರಾಜ್ಯದ ಕೆಲವು ಸ್ಥಳಗಳಲ್ಲಿ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳು ಕಂಡುಬಂದಿವೆ. ಅಂತಹ ಪರಿಸ್ಥಿತಿ ಎದುರಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಪ್ರತಿದಿನ ಸಂಗ್ರಹಿಸಲಾಗುತ್ತಿರುವ ಘನತ್ಯಾಜ್ಯವನ್ನು ಸಂಗ್ರಹಿಸಿ, ಬೇರ್ಪಡಿಸಿ, ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು ಎಂದ ಅವರು, ಅದಕ್ಕಾಗಿ ಅನುಷ್ಟಾನದಲ್ಲಿರುವ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಅಮೃತ ಯೋಜನೆಯಡಿ ಕೈಗೊಂಡ ರಸ್ತೆ, ಚರಂಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ ಅವರು ಸೂಚಿಸಿದರು.
ಪೌರಕಾರ್ಮಿಕರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು. ಜಿಲ್ಲೆಯ ಹಲವು ಸ್ಥಳಗಳಲ್ಲಿ ನಡೆಸಲಾಗುತ್ತಿರುವ ಇಂದಿರಾ ಕ್ಯಾಂಟೀನ್‌ಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಕ್ಯಾಂಟೀನ್‌ಗಳ ವ್ಯವಸ್ಥಿತ ಮೇಲ್ವಿಚಾರಣೆಗಾಗಿ ಅಧಿಕಾರಿಗಳನ್ನು ನಿಯೋಜಿಸಿ, ಕಾಲಕಾಲಕ್ಕೆ ಅಲ್ಲಿನ ಉಪಹಾರದ ಗುಣಮಟ್ಟದ ಪರೀಕ್ಷೆಗಳನ್ನು ನಡೆಸುವಂತೆ ಹಾಗೂ ಕ್ಯಾಂಟೀನ್‌ಗಳಿಗೆ ಸಿಸಿ ಕ್ಯಾಮರಾ ಕಣ್ಗಾವಲುಗಳನ್ನು ಹಾಕುವಂತೆ ಅವರು ಸೂಚಿಸಿದರು.
ಕೆರೆಗಳ ಅಭಿವೃದ್ಧಿ, ಉದ್ಯಾನವನಗಳಲ್ಲಿ ಹಸೀರೀಕರಣ ಮುಂತಾದ ಯೋಜನೆಗಳನ್ನು ಸಕಾಲದಲ್ಲಿ ಆರಂಭಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು. ಮುಂದಿನ ಕೆಲವು ದಶಕಗಳಲ್ಲಿ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಬೆಳೆಯುತ್ತಿರುವ ನಗರದ ವೇಗಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕು ಅಲ್ಲದೆ ವರ್ತುಲ ರಸ್ತೆಗಳ ನಿರ್ಮಾಣದ ಬಗ್ಗೆಯೂ ಯೋಜನೆ ರೂಪಿಸಬೇಕಾದ ಅಗತ್ಯವಿದೆ ಎಂದವರು ನುಡಿದರು.
ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಸರಬರಾಜಾಗುತ್ತಿರುವ ಶುದ್ಧ ಕುಡಿಯುವ ನೀರು, ಅದರ ಬಳಕೆ ಮತ್ತು ನಿರ್ವಹಣೆ ಮಾದರಿ ಎನಿಸುವಂತಿದ್ದು, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಈ ಮಾದರಿಯನ್ನು ಅನುಸರಿಸಬೇಕು ಎಂದರು.
ಜಿಲ್ಲೆಯಲ್ಲಿ ವಾಡಿಕೆಯಂತೆ ನಿರೀಕ್ಷಿತ ಪ್ರಮಾಣದ ಮಳೆ ಬಾರದಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಮಳೆಯು ಜಿಲ್ಲೆಯ ಜನರಲ್ಲಿ ಸಮಾಧಾನವನ್ನುಂಟು ಮಾಡಿದೆ ಆದರೂ ಕೃಷಿ ಮತ್ತು ತೋಟಗಾರಿಕೆ ಇಲಾಖಾ ಅಧಿಕಾರಿಗಳು ನಿರಂತರವಾಗಿ ರೈತರ ಸಂಪರ್ಕದಲ್ಲಿದ್ದು, ರೈತರು ಬೆಳೆಯ ಬಹುದಾದ ಪರ್ಯಾಯ ಬೆಳೆ ಮತ್ತು ಅವರಿಗೆ ಸಮಾಧಾನ ಎನಿಸುವ ಸಲಹೆಗಳನ್ನು ನೀಡುವಂತೆ ಹಾಘೂ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅವರು ಸಲಹೆ ನೀಡಿದರು.
ವಿಬಿ ಜಿರಾಮ್‌ಜಿ ಯೋಜನೆಯಡಿ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಪ್ರಮಾಣದಲ್ಲಿ ತೋಟಗಾರಿಕೆ ಕಾರ್ಯಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈ ಯೋಜನೆಯಡಿ ಸಾಧಿಸಿರುವ ಪ್ರಗತಿ ಉತ್ತಮವಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಅಭಿನಂದಾರ್ಹರು ಎಂದರು.

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಲು ವಿಶೇಷ ಸಮಗ್ರ ಪರಿಷ್ಕರಣೆ-2026ನ್ನು ಜಿಲ್ಲೆಯಲ್ಲಿ ಆರಂಭಿಸಿದೆ. ಮತಗಟ್ಟೆ ಅಧಿಕಾರಿಗಳು ಜೂನ್ 30 ರಿಂದ ಜುಲೈ 29ರವರೆಗೆ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವರು. ಮ್ಯಾಪಿಂಗ್ ಆಗದ ಮತದಾರರು ಸರ್ಕಾರ ಗುರುತಿಸಿದ 12 ದಾಖಲೆಗಳ ಪೈಕಿ ಯಾವುದಾದರೊಂದನ್ನು ಒದಗಿಸಿ ನೋಂದಣಿಗೆ ಸಹಕರಿಸಬಹುದಾಗಿದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಮತದಾರರ ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್ 05 ರಿಂದ ಸೆಪ್ಟೆಂಬರ್ 04 ರವರೆಗೆ ಅಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು ಆಗಸ್ಟ್ 5 ರಿಂದ ಅಕ್ಟೋಬರ್ 3 ರವರೆಗೆ ಇತ್ಯರ್ಥಪಡಿಸಲಾಗುವುದು. 2026ರ ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.                                    - ಪ್ರಭುಲಿಂಗ ಕವಳಿಕಟ್ಟಿ, ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಬಿ.ನಿಖಿಲ್‌ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadra Dam ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ

Bhadra Dam ಭದ್ರಾ ಜಲಾಶಯಕ್ಕೆ ಮಳೆ ಹಿನ್ನೆಲೆಯಲ್ಲಿ ನಿರಂತರವಾಗಿ ನೀರಿನ ಹರಿವು...

Klive Special Article ಮಕ್ಕಳು ಉತ್ತಮ ನಾಗರೀಕರಾಗಲು ಸ್ಕೌಟ್ಸ್ ಗೈಡ್ಸ್ ಪ್ರೇರಣೆ

-ಪುನರ್ನಿರ್ಮಿತ ಧ ರಾ ಮ ಸ್ಕೌಟ್ ಭವನ ಇಂದು ಉದ್ಘಾಟನೆ, ತನ್ನಿಮಿತ್ತ...

DC Shivamogga ಮತದಾರರ ಪಟ್ಟಿ ಪರಿಷ್ಕರಣೆ, ಸಹಕರಿಸಲು ಜಿಲ್ಲಾ ಜನತೆಗೆ ಡೀಸಿ ಪ್ರಭುಲಿಂಗ ಕವಳಿಕಟ್ಟಿ ಮನವಿ

DC Shivamogga ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಲು...

B.Y. Raghavendra ನಮ್ಮ ಸಹಕಾರಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರ ಆರೋಗ್ಯ ರಕ್ಷಣೆ ಅತ್ಯಂತ ಪ್ರಮುಖ : ಬಿ.ವೈ.ರಾಘವೇಂದ್ರ

B.Y. Raghavendra ಅಂತರರಾಷ್ಟ್ರೀಯ ಸಹಕಾರಿ ದಿನ–2026 ಹಾಗೂ ಕೇಂದ್ರ ಸಹಕಾರ ಸಚಿವಾಲಯ...