ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ 10ನೇ ವರ್ಷದ “ಮಾವು ಮೇಳ–2026” ಅದ್ಧೂರಿಯಾಗಿ ನಡೆಯುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಮೇ 12ರಂದು ಆರಂಭವಾದ ಈ ಮೇಳವು ಮೇ 22ರವರೆಗೆ ನಡೆಯಲಿದ್ದು, ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ತರಲಾಗಿರುವ 200ಕ್ಕೂ ಅಧಿಕ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಕೇಸರ್, ದಶೇರಿ, ಬಾದಾಮಿ, ಮಲ್ಲಿಕಾ ಸೇರಿದಂತೆ ಹಲವು ಸ್ಥಳೀಯ ಹಾಗೂ ವಿದೇಶಿ ತಳಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಮೇಳದ ಪ್ರಮುಖ ಆಕರ್ಷಣೆಯಾಗಿ ಜಪಾನ್ ಮೂಲದ ವಿಶ್ವದ ಅತ್ಯಂತ ದುಬಾರಿ “ಮಿಯಾಜಾಕಿ” ಮಾವು ಪ್ರದರ್ಶನಕ್ಕಿಡಲಾಗಿದ್ದು, ಪ್ರತಿ ಕೆ.ಜಿಗೆ ಸುಮಾರು ₹3,000 ದರ ನಿಗದಿಪಡಿಸಲಾಗಿದೆ.
ಕೆಂಪು ಬಣ್ಣದ ಈ ವಿಶೇಷ ತಳಿಯ ಮಾವು ನೋಡುಗರ ಕುತೂಹಲ ಹೆಚ್ಚಿಸಿದೆ.
ಇದೇ ವೇಳೆ ಮಾವಿನ ಉಪ್ಪಿನಕಾಯಿ, ಸೀಕರಣೆ ಹಾಗೂ ಇತರೆ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಹಣ್ಣುಗಳನ್ನು ಎಥಿಲೀನ್ ಬಳಸಿ ವೈಜ್ಞಾನಿಕವಾಗಿ ಮಾಗಿಸುವ ವಿಧಾನಗಳನ್ನೂ ಇಲಾಖೆಯವರು ಪ್ರದರ್ಶಿಸುತ್ತಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆ ರಾಜ್ಯ ತೋಟಗಾರಿಕೆ ಇಲಾಖೆ ರೈತರಿಗೆ ಮಿಯಾಜಾಕಿ ಮಾವು ಬೆಳೆಸಲು ಉತ್ತೇಜನ ನೀಡಿತ್ತು. ಆರಂಭದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ನಿರೀಕ್ಷಿಸಲಾಗಿದ್ದರೂ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿ ಈಗ ವಾಸ್ತವಿಕ ದರ ನಿಗದಿಪಡಿಸಲಾಗಿದೆ.
ಮುಂದಿನ ವರ್ಷಗಳಲ್ಲಿ ಈ ವಿಶೇಷ ತಳಿಗೆ ಹೆಚ್ಚಿನ ಮಾರುಕಟ್ಟೆ ದೊರೆಯುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮೇಳಕ್ಕೆ ಕುಟುಂಬ ಸಮೇತರಾಗಿ ಆಗಮಿಸುತ್ತಿರುವ ಸಾರ್ವಜನಿಕರು ವಿವಿಧ ತಳಿಯ ಮಾವಿನ ರುಚಿ ಸವಿದು ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.
ವರದಿ
ಮುರುಳೀಧರ್ ನಾಡಿಗೇರ್
