ಕಥಕ್ ನೃತ್ಯದ ಬಗ್ಗೆ ಕಂಡು ಕೇಳದ ಭಾರತೀಯನಿಲ್ಲ. ಶಾಸ್ತ್ರೀಯ ನೃತ್ಯದ ಆಳವಾದ ಜ್ಞಾನವಿರದಿದ್ದರೂ,
ಕಿಂಚಿತ್ ಅರಿವಿನಿಂದಲಾದರೂ ಆತ ಭರತನಾಟ್ಯವನ್ನು ನೋಡಿಯೂ ಕೂಡ ಇದು ಕಥಕ್ ಅಲ್ಲವೇ ?
ಎಂಬ ಉದ್ಗಾರ ತೆಗೆಯದೇ ಇರಲಾರ. ಕಥಕ್ ನೃತ್ಯ ಇಷ್ಟು ಜನಮಾನ್ಯವಾಗಲು ಕಾರಣರಾದ
ಮೂಲಕೊಂಡಿಯೇ ಇತ್ತೀಚೆಗೆ ನಮ್ಮನ್ನಗಲಿದ ಪಂಡಿತ್ ಬಿರ್ಜು ಮಹಾರಾಜ್ ಅವರು.
ಅವರ ಕಥಕ್ ನೃತ್ಯದ ಬಗೆಗಿನ ಮೋಹ ಅವರನ್ನು ದಿಗ್ಗಜರ ಸಾಲಿನಲ್ಲಿ ನಿಲ್ಲುವ ಘನತೆಯನ್ನು ಕೊಟ್ಟಿತು.
ತಬಲಾ, ಹಾರ್ಮೋನಿಯಂ, ಗೆಜ್ಜೆಯ ಝೇಂಕಾರಗಳ ನಡುವಿನಲ್ಲೇ ಬೆಳೆದ ಬಿರ್ಜು ಮಹಾರಾಜರು
ತಮ್ಮ ಅಂತಿಮಯ ಯಾತ್ರೆಯನ್ನೂ ಕೂಡ ತಮ್ಮ ನೆಚ್ಚಿನ ಹಳೆಯ ಹಿಂದಿ ಗೀತೆಗಳನ್ನು ಹಾಡುತ್ತಲೇ
ಮುಗಿಸಿದರು. ಅವರು ಕಥಕ್ ನೃತ್ಯವನ್ನು ಕೇವಲ ವಿಶ್ವದರ್ಜೆಗೇರಿಸಿದ್ದಷ್ಟೇ ಅಲ್ಲದೆ ಮುಂಬರುವ ಹಲವು
ಪೀಳಿಗೆಗೆ ಅದರ ಸರ್ವಸಾರವನ್ನೂ ಎರೆದು ಹೋದರು. ಅವರೊಬ್ಬ ಉತ್ಕೃಷ್ಟ ನೃತ್ಯಗಾರರಷ್ಟೆ ಅಲ್ಲದೆ
ಅಪ್ರತಿಮ ಕವಿಗಳೂ ಆಗಿದ್ದರು. ‘ಬ್ರಿಜ್‌ಶ್ಯಾಮ್’ ಎಂಬ ಅಂಕಿತದಡಿಯಲ್ಲಿ ಹಲವು ಕವಿತೆಗಳನ್ನೂ
ಬರೆದಿದ್ದರು. ಗಾಯಕರಾಗಿ ಗಾಯನದ ಹಲವು ಆಯಾಮಗಳಲ್ಲಿ ಸಿದ್ದಹಸ್ತರಾಗಿದ್ದರು. ಹಲವು ಪ್ರಕಾರಗಳ
ವಾದ್ಯಗಳನ್ನೂ ನುಡಿಸುತ್ತಿದ್ದರು. ಆದರೆ ಕಥಕ್ ಅವರ ಜೀವನದ ಧ್ಯೇಯವಾಗಿತ್ತು. ಈ ನೃತ್ಯವನ್ನು
ದೇಶ-ವಿದೇಶಗಳಾಚೆ ಪರಿಚಯಿಸುವ ಹೊಣೆಯನ್ನು ಅವರು ಅತ್ಯಂತ ಶ್ರದ್ದೆಯಿಂದ ಸ್ವೀಕರಿಸಿದ್ದರು. ತಮ್ಮ
ಮನಸೆಳೆಯುವ ಪಾದಚಲನೆಗಳು ಹಾಗೂ ಭಾವಾಭಿನಯದಿಂದ ನೋಡುಗರನ್ನು ಕ್ಷಣಾರ್ಧದಲ್ಲಿ
ಮೂಕವಿಸ್ಮಿತಗೊಳಿಸುತ್ತಿದ್ದ ಬಿರ್ಜುರವರು, ತಮ್ಮ ಮೂರನೆಯ ವಯಸ್ಸಿಗೇ ನೃತ್ಯದ ತಾಲೀಮಿನ ಅಂಗಳಕ್ಕೆ
ಹೋಗಿ ಅಲ್ಲಿ ಅಭ್ಯಸಿಸುತ್ತಿದ್ದ ಇತರ ವಿದ್ಯಾರ್ಥಿಗಳೊಂದಿಗೆ ಅಭ್ಯಾಸಕ್ಕೆ ನಿಲ್ಲುತ್ತಿದ್ದರಂತೆ.
ಲಕ್ನೋದಲ್ಲಿ ತಮ್ಮ ಪೂರ್ವಜರ ಮನೆಯಲ್ಲಿ ಬೃಜ್ ಮೋಹನ್‌ನಾಥ್ ಮಿಶ್ರಾ ಹೆಸರಿನಿಂದ ಜನ್ಮತಳೆದ
ಇವರು ಯಾವಾಗ ಬಿರ್ಜು ಆದರೆಂಬುದು ಅವರಿಗೇ ತಿಳಿಯದ ಸಂಗತಿ. ಒಂದು ಸಂದರ್ಶನದಲ್ಲಿ
ಅವರು ಹೇಳಿದ್ದರು “ನಮ್ಮ ಮನೆ ಶೃತಿ, ಸ್ವರ, ಲಯ ತಾಳಗಳ ಸಮುದ್ರದಂತಿತ್ತು. ಏಳು ಪೀಳಿಗೆಯಿಂದ
ಅಲ್ಲಿ ಸಂಗೀತದ ವಿಚಾರವನ್ನು ಹೊರತುಪಡಿಸಿ ಮತ್ಯಾವುದೇ ಮಾತುಕತೆಗಳು ನಡೆದದ್ದೇ ಇಲ್ಲ.
ಸೌಂದರ್ಯೋಪಾಸನೆ, ಸಂಗೀತೋಪಾಸನೆ, ಭಗವಂತನ ಆರಾಧನೆ ಇವಿಷ್ಟೇ ಅಲ್ಲಿಯ
ಜೀವಾಳವಾಗಿದ್ದವು”. ಪ್ರಖ್ಯಾತ ನೃತ್ಯ ಕಲಾವಿದ ಅಚ್ಛನ್ ಮಹಾರಾಜ್‌ರ ಮನೆತನದಲ್ಲಿ ಜನಿಸಿದ ಬಿರ್ಜು
ಮಹಾರಾಜರು ತಮ್ಮ ಏಳನೇಯ ವಯಸ್ಸಿನಲ್ಲಿಯೇ ವೇದಿಕೆಯನ್ನೇರಿ ನೃತ್ಯ ಪ್ರಸ್ತುತಿ ನೀಡಿದ್ದರು. ತಮ್ಮ
ತಂದೆ ಅಚ್ಚನ್ ಮಹಾರಾಜ್, ಚಿಕ್ಕಪ್ಪ ಶಂಭು ಮಹಾರಾಜ್ ಹಾಗೂ ಲಚ್ಛು ಮಹಾರಾಜ್‌ರ ಗರಡಿಯಲ್ಲಿ
ಕಥಕ್ ನೃತ್ಯದ ಸೂಕ್ಷ್ಮತೆಗಳನ್ನು ಅರಿತುಕೊಂಡರು.
ತಮ್ಮ ತಂದೆಯೊಂದಿಗೆ ಹಲವು ವೇದಿಕೆಗಳಲ್ಲಿ ನೃತ್ಯವನ್ನು ಪ್ರದರ್ಶಿಸಿದ ಇವರು, ತಮ್ಮ ಅತ್ಯಂತ ಕಿರಿಯ
ವಯಸ್ಸಿನಲ್ಲಿಯೇ ಅಂದರೆ 13ರ ವಯಸ್ಸಿಗೇ ಅವರನ್ನು ಕಳೆದುಕೊಂಡು ಜೀವನೋಪಾಯಕ್ಕಾಗಿ ದೆಹಲಿಗೆ
ಪ್ರಯಾಣ ಬೆಳೆಸಿದರು. ಅಲ್ಲಿ ಸಂಗೀತ ಭಾರತಿಯಲ್ಲಿ, ಕಥಕ್ ಕೇಂದ್ರದಲ್ಲಿ ಹಾಗೂ ಭಾರತೀಯ ಕಲಾ
ಕೇಂದ್ರಗಳಲ್ಲಿ ನರ್ತನವನ್ನು ಕಲಿಸಲಾರಂಭಿಸಿದರು. ಅವರ ಕಥಕ್ ನೃತ್ಯದ ಬಗೆಗಿನ ಅಪೂರ್ವ ಜ್ಞಾನ
ಹಾಗೂ ಕಲಾತ್ಮಕತೆಗೆ ಮನಸೋತು ಕೇಂದ್ರ ಸರ್ಕಾರ 1998ರಲ್ಲಿ ಮುಖ್ಯ ಉಪನ್ಯಾಸಕರು, ನಂತರದಲ್ಲಿ
ನಿರ್ದೇಶಕರಾಗಿ ನೇಮಕಗೊಂಡರು.
ತದನಂತರ ನಿವೃತ್ತರಾದರು. ಇದರ ನಂತರವೇ ತಮ್ಮ ಸ್ವಂತ ನೃತ್ಯಶಾಲೆ
‘ಕಲಾಶ್ರಮ’ವನ್ನು ತೆರೆದರು.
ಯಾವುದೇ ಹಮ್ಮುಬಿಮ್ಮಗಳಿಲ್ಲದ ಸಹನಾರೂಪಿ ಬಿರ್ಜುಮಹಾರಾಜರು ಹಲವಾರು ಪ್ರಸಿದ್ದ ನಾಟಕ
ಹಾಗೂ ಚಲನಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದರು. ಇವರ ನೃತ್ಯದ ಅಭೂತಪೂರ್ವ ಕೊಡುಗೆಗಾಗಿ
ಕೇಂದ್ರ ಸರ್ಕಾರ ಇವರನ್ನು ಪದ್ಮವಿಭೂಷಣ, ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, ಕಾಳಿದಾಸ
ಸಮ್ಮಾನ್, ನೃತ್ಯ ವಿಲಾಸ, ರಾಜೀವ ಗಾಂಧಿ ಸಮ್ಮಾನ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರನ್ನಾಗಿಸಿತ್ತು.
ಇದೇ ಫೆಬ್ರವರಿ 8ಕ್ಕೆ ತಮ್ಮ84ನೇ ಸಂವತ್ಸರಕ್ಕೆ ಕಾಲಿರಿಸಬೇಕಾಗಿದ್ದ ಬಿರ್ಜುಮಹಾರಾಜರು ಇಹಲೋಕ
ತ್ಯಜಿಸಿದರೂ ತಮ್ಮ ನೃತ್ಯದ ಅವಿಚ್ಛಿನ್ನ ಪರಂಪರೆಯ ಮುಖಾಂತರ ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ
ನೆಲೆಸಿದ್ದಾರೆ.
ಲೇಖಕರ ಪರಿಚಯ:
ನೃತ್ಯಗುರು ಸಹನಾ ಚೇತನ್ ಅವರು ಪರ್ಫಾರ್ಮರ್ ಮತ್ತು ಕಲಾತ್ಮಕ ನಿರ್ದೇಶಕರು, ನೃತ್ಯ ಸಂಯೋಜಕರು ಹಾಗೂ ಲೇಖಕರು. ಇವರು ಕಲಾಕ್ಷೇತ್ರದಲ್ಲಿ ಕಲಾವಿದೆಯಾಗಿ, ಕಲಾ ಶಿಕ್ಷಕಿಯಾಗಿ, ಸಾಂಸ್ಕೃತಿಕ ಉತ್ಸವಗಳ ರೂವಾರಿಯಾಗಿ ರೂಪುಗೊಂಡಿದ್ದಾರೆ.
ಇವರು ಸಹಚೇತನ ನಾಟ್ಯಾಲಯ (ರಿ) ದಲ್ಲಿ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp
Why Keelambi Media Lab Pvt Ltd ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.