Friday, March 13, 2026
Friday, March 13, 2026

Kuvempu University ಕುವೆಂಪು ವಿವಿಯಲ್ಲಿ ‘ಸಹ್ಯಾದ್ರಿ ಉತ್ಸವ-2026’ಕ್ಕೆ ಅದ್ಧೂರಿ ಚಾಲನೆ: ಜಾನಪದ ಕಲೆಗಳ ವೈಭವ

Date:

Kuvempu University ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾದ 2026ನೇ ಸಾಲಿನ ‘ಸಹ್ಯಾದ್ರಿ ಉತ್ಸವ’ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಗುರುವಾರ (ಮಾರ್ಚ್ 12) ವಿಶ್ವವಿದ್ಯಾಲಯದ ಆವರಣದಲ್ಲಿ ಅತ್ಯಂತ ಸಡಗರದಿಂದ ಚಾಲನೆ ನೀಡಲಾಯಿತು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸುಮಾರು 40ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಕುವೆಂಪು ಪ್ರತಿಮೆಗೆ ಹಾರ ಹಾಕುವ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಸಾಂಪ್ರದಾಯಿಕವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಹ್ಯಾದ್ರಿ ಉತ್ಸವ ಹಾಗೂ ಪಥ ಸಂಚಲನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಡಾ. ಜಯಮಾಲಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಜಯಮಾಲಾ ಅವರು “ನಾನು ಪುನರ್ವಸತಿಯ ಬಗ್ಗೆ ಸುದೀರ್ಘವಾಗಿ ಸಂಶೋಧನೆ ನಡೆಸಿ ಥೀಸಿಸ್ ಬರೆದಿದ್ದೇನೆ. ಅಲ್ಮಟ್ಟಿಯ ಅಣೆಕಟ್ಟು ಸಂತ್ರಸ್ತರ ನೋವು ಮತ್ತು ಅನುಭವಗಳನ್ನು ಹತ್ತಿರದಿಂದ ಕಂಡಿದ್ದೇನೆ. ನನ್ನ ಈ ಶೈಕ್ಷಣಿಕ ಸಾಧನೆಗಾಗಿ ಅಂದಿನ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಸ್ತಿ ಪಡೆದ ಸಾರ್ಥಕತೆ ನನಗಿದೆ. ನಿರಾಶ್ರಿತ ಭಾವ ಎಂಬುದು ಪ್ರತಿಯೊಬ್ಬ ಮನುಷ್ಯನನ್ನೂ ಕಾಡುವಂತಹದ್ದು, ಈ ಕಾರ್ಯಕ್ರಮಕ್ಕೆ ಬರಬೇಕೆಂಬ ಹಂಬಲ ನನಗಿತ್ತು,” ಎಂದು ನೆನಪು ಮಾಡಿಕೊಂಡರು.
Kuvempu University ಕುವೆಂಪು ಅವರ “ಹೋಗುವೆನು ನಾ ಮಲೆಯ ನಾಡಿಗೆ” ಎಂಬ ಸಾಲುಗಳನ್ನು ಸ್ಮರಿಸುತ್ತಾ, “ಮಲೆನಾಡು ಅತ್ಯಂತ ನಯನ ಮನೋಹರವಾದ ಕಾಡುಗಳನ್ನು ಹೊಂದಿರುವ ತಾಣ. ಇದು ಕೇವಲ ಪ್ರಕೃತಿಯಲ್ಲ, ದೈತ್ಯ ಪ್ರತಿಭೆಗಳನ್ನು ನಾಡಿಗೆ ನೀಡಿದ ಪವಿತ್ರ ಭೂಮಿ,” ಎಂದು ಮಲೆನಾಡಿನ ಸಾಹಿತ್ಯಿಕ ಶ್ರೀಮಂತಿಕೆಯನ್ನು ಬಣ್ಣಿಸಿದರು.
“ವಿದ್ಯಾರ್ಥಿಗಳು ತಮ್ಮ ಜಾಣ್ಮೆಯನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸಬೇಕು. ಮನುಷ್ಯನನ್ನು ಮೃದುವಾಗಿರಿಸುವ ಗುಣಗಳಾದ ಸಾಹಿತ್ಯ, ಸಂಗೀತ ಮತ್ತು ಕಲೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಬದುಕು ಸಾರ್ಥಕವಾಗುತ್ತದೆ. ಪ್ರೀತಿ, ಸಹಿಷ್ಣುತೆ ಮತ್ತು ಉಪಕಾರದ ಗುಣಗಳನ್ನು ಮರೆಯಬೇಡಿ. ಮನುಷ್ಯ ಭಾವನಾಶೂನ್ಯನಾದರೆ ಎಷ್ಟೇ ಆಸೆಗಳಿದ್ದರೂ ಬದುಕು ಶೂನ್ಯವಾಗುತ್ತದೆ. ವಿಶ್ವವಿದ್ಯಾಲಯ ನೀಡುವ ಉತ್ತಮ ಶಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳಿ,” ಎಂದು ಕರೆ ನೀಡಿದರು.
ಇಂದಿನ ಜಾಗತಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಇಡೀ ದೇಶ ಮತ್ತು ಜಗತ್ತು ಯುದ್ಧದ ಭೀತಿಯಿಂದ ತುಂಬಿದೆ. ಇಂತಹ ಸಮಯದಲ್ಲಿ ಮನುಷ್ಯನಿಗೆ ಎಲ್ಲಕ್ಕಿಂತ ಮೊದಲು ಬೇಕಾಗಿರುವುದು ಮಾನವೀಯತೆ. ಕುವೆಂಪು ಅವರು ಹೇಳಿದಂತೆ ಇದು ‘ಸರ್ವಜನಾಂಗದ ಶಾಂತಿಯ ತೋಟ’ವಾಗಬೇಕು,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಮಾತನಾಡಿ, “ಕನ್ನಡ ಸಿನಿಮಾ ರಂಗವು ಅತ್ಯಂತ ಉತ್ತುಂಗದಲ್ಲಿದ್ದ ಕಾಲದಲ್ಲಿ ತನ್ನ ಅಭಿನಯದ ಮೂಲಕ ಮನೆಮಾತಾದವರು ಡಾ. ಜಯಮಾಲಾ. ಅವರು ಕೇವಲ ಬೆಳ್ಳಿ ಪರದೆಯ ತಾರೆಯಲ್ಲ, ಸಾಧನೆಯ ಶಿಖರಕ್ಕೇರಿದ ‘ಧ್ರುವತಾರೆ’. ಅವರೊಟ್ಟಿಗಿನ ನೆನಪುಗಳು ಸದಾ ಹಸಿರು. ಅವರು ಅಭಿನಯಿಸಿದ ಚಿತ್ರಗಳು ‘ಸ್ವರ್ಣ ಕಮಲ’ ಪ್ರಶಸ್ತಿ ಪಡೆದಿರುವುದು ಅವರ ಕಲಾತ್ಮಕ ಪ್ರತಿಭೆಗೆ ಸಾಕ್ಷಿ. ಅಂತಹ ಸಾಧಕಿ ನಮ್ಮ ನಡುವೆ ಇರುವುದು ಹೆಮ್ಮೆಯ ವಿಷಯ,” ಎಂದು ಶ್ಲಾಘಿಸಿದರು.
“ಇವತ್ತಿನ ಪಥಸಂಚಲನದ ವೈಭವವೇ ಅದಕ್ಕೆ ಸಾಕ್ಷಿ. ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಕಲಾ ಪ್ರಕಾರಗಳು ಪಥಸಂಚಲನದ ವಿಶೇಷತೆಯನ್ನು ಹೆಚ್ಚಿಸಿವೆ,” ಎಂದು ಮಲೆನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಣ್ಣಿಸಿದರು. “ವಿದ್ಯಾರ್ಥಿಗಳು ಈ ಮೂರು ದಿನಗಳ ಕಾಲ ಎಲ್ಲವನ್ನೂ ಸಂಭ್ರಮದಿಂದ ಕಲಿಯಬೇಕು. ಇದು ಕೇವಲ ಸ್ಪರ್ಧೆಯಲ್ಲ, ನಿಮ್ಮೊಳಗಿನ ಕಲೆ ಪ್ರದರ್ಶಿಸಲು ಸಿಕ್ಕಿರುವ ಸುವರ್ಣ ಅವಕಾಶ. ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ,” ಎಂದು ಆಶಿಸಿದರು.
ಆಧುನಿಕ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾ, “ಇಂದಿನ ಜಗತ್ತಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಷ್ಟೇ ಮುಂದುವರಿದಿದ್ದರೂ, ಮನುಷ್ಯನ ಮನುಷ್ಯತ್ವವನ್ನು ಮತ್ತು ಭಾವನೆಗಳನ್ನು ಉಳಿಸುವುದು ಕಲೆ ಮಾತ್ರ. ಎಂತಹ ತಂತ್ರಜ್ಞಾನವೂ ಕಲೆಯನ್ನು ಎಂದಿಗೂ ರೀಪ್ಲೇಸ್ ಮಾಡಲು ಸಾಧ್ಯವಿಲ್ಲ. ಮನುಷ್ಯನಿಗೆ ಕೊನೆಯವರೆಗೂ ಭರವಸೆ ಇರುವುದು ಕಲೆ ಮತ್ತು ಸಾಹಿತ್ಯದಲ್ಲಿ ಮಾತ್ರ,” ಎಂಬ ಗಹನವಾದ ವಿಚಾರವನ್ನು ಮಂಡಿಸಿದರು.
ಗಮನಸೆಳೆದ ಪಥಸಂಚಲನ:
ಪಥ ಸಂಚಲನದಲ್ಲಿ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾವಾಡಿ, ಕಂಸಾಳೆ, ಕೊಡವ ನೃತ್ಯ, ನವದುರ್ಗೆಯರ ವೇಷಧಾರಿಗಳು, ಪೂಜಾ ಕುಣಿತ, ನಂದಿ ಕೋಲು, ಕಾಡು ಮನುಷ್ಯರ ವೇಷ ಹಾಗೂ ವೀರಗಾಸೆ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವಿಶೇಷವಾಗಿ ಕುವೆಂಪು ಶತಮಾನೋತ್ಸವ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ವಿವಿಧತೆಯಲ್ಲಿ ಏಕತೆ’ ಎಂಬ ಪರಿಕಲ್ಪನೆಯ ಪಥ ಸಂಚಲನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಶ್ರೀ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಪ್ರೊ. ಹೆಚ್. ಎನ್. ರಮೇಶ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಜಿ. ಪ್ರಶಾಂತ್ ನಾಯಕ್, ಪ್ರೊ. ವಿಜಯಕುಮಾರ, ಪ್ರೊ. ವೆಂಕಟೇಶ್, ಪ್ರೊ. ಸತ್ಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. Kumar Bangarappa ರಾಜ್ಯದಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರ ಇನ್ನಷ್ಟು ಎತ್ತರಕ್ಕೇರಲಿ : ಎಸ್. ಕುಮಾರ್ ಬಂಗಾರಪ್ಪ

S. Kumar Bangarappa ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟ...

DC Shivamogga ಮಾ.18 ರಿಂದ ಎಸ್‌ಎಸ್‌ಎಲ್ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ

DC Shivamogga ವಿದ್ಯಾರ್ಥಿಗಳ ಜೀವನದ ದಿಸೆಯನ್ನು ನಿರ್ಧರಿಸುವ ಮುಖ್ಯ ಘಟ್ಟವಾದ ಎಸ್‌ಎಸ್‌ಎಲ್‌ಸಿ...

ಶಿವಮೊಗ್ಗದ ರಾಯಲ್ ಆರ್ಕಿಡ್ ನಲ್ಲಿ ಅವಿರ ಉಡುಪು ಸಂಸ್ಥೆಯ ಯುಗಾದಿ ಸೀರೆ ಹಬ್ಬ

ಶಿವಮೊಗ್ಗದ ರಾಯಲ್ ಆರ್ಕಿಡ್ ನಲ್ಲಿ ಚಿತ್ರನಟಿ ಕಾರುಣ್ಯ ಗೌಡರ ಅವಿರ ಉಡುಪು...

“ನೈಸರ್ಗಿಕ ಮತ್ತು ಸಾವಯವ ಕೃಷಿ” ಕುರಿತಾದ ಪ್ರಾದೇಶಿಕ ವಿಚಾರಸಂಕಿರಣ’ಯಶಸ್ವಿ

Regional Organic and Natural Farming Center ಪ್ರಾದೇಶಿಕ ಸಾವಯವ ಮತ್ತು...