Yakshasamvardana Trust ಶಿವಮೊಗ್ಗದ ಯಕ್ಷಸಂವರ್ಧನಾ ಸಂಸ್ಥೆಯ ವಾರ್ಷಿಕೋತ್ಸವ ಯಕ್ಷಸಿಂಚನ-2026 ನಿನ್ನೆ ಮತ್ತು ಇಂದು ಸೋಮಿನಕೊಪ್ಪದ ಶ್ರೀ ಪಂಚಮುಖಿ ಆಂಜನೇಯ ಮತ್ತು ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನಡೆಯಿತು.
ನಿನ್ನೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ರವೀಂದ್ರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯಕ್ಷಗಾನ ಎಂಬ ನಾಲ್ಕು ಅಕ್ಷರದ ಪದದಲ್ಲಿ ಹಾಡು, ಸಂಭಾಷಣೆ, ನೃತ್ಯ, ಅಭಿನಯ, ವೇಷಭೂಷಣ ಎಂಬ ಐದು ಅಂಶಗಳು ತುಂಬಿವೆ. ಇದು ಯಾವುದೇ ರಂಗಭೂಮಿ ಪ್ರಕಾರದಲ್ಲೂ ಇಲ್ಲ. ಯಕ್ಷಗಾನಕ್ಕೆ ಸರಿಸಾಟಿಯಾದ ಕಲೆ ಮತ್ತೊಂದಿಲ್ಲ ಎಂದು ಶ್ರೀ ರವೀಂದ್ರ ಭಟ್ ಅಭಿಪ್ರಾಯಪಟ್ಟರು.
ಯಕ್ಷಗುರು ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಮಾತನಾಡಿ, ತಾನು ಭಯದಿಂದ ಶಿವಮೊಗ್ಗಕ್ಕೆ ಬಂದೆ, ಆದರೆ ಇಂದು ಪುರುಸೋತ್ತಿಲ್ಲದಷ್ಟು ಯಕ್ಷಗಾನ ಕಲಿಸುವ ಅವಕಾಶ ಗಳು ಬರುತ್ತಿವೆ. ಯಕ್ಷಗಾನ ಯಾವುದೇ ಅಡೆತಡೆ ಇದ್ದರೂ ಅದನ್ನು ಮೆಟ್ಟಿ ನಿಲ್ಲುವ ಕಲೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ಸೆಂಟ್ರಲ್ ಶಿವಮೊಗ್ಗದ ಕಾರ್ಯದರ್ಶಿ ಶ್ರೀ ಜಯಶೀಲ ಶೆಟ್ಟಿ ಮಾತನಾಡಿ ಯಕ್ಷಗಾನ ಕಲೆಯನ್ನು ಬೆಳೆಸಲು ತನ್ನಿಂದಾದ ಸಹಾಯ ನೀಡುವ ಭರವಸೆ ನೀಡಿದರು.
ಅನಾರೋಗ್ಯ ಪೀಡಿತ ಯಕ್ಷಗಾನ ಕಲಾವಿದ ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ ಮತ್ತು ಶಿವಮೊಗ್ಗ ವಿಕಾಸ ಶಾಲೆಯ ವಿದ್ಯಾರ್ಥಿ ಎಚ್ ಪ್ರಥಮ್ ಅವರಿಗೆ ಸಂಸ್ಥೆಯು ನೀಡಿದ ಆರ್ಥಿಕ ನೆರವನ್ನು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಮಕ್ಕಳ ಯಕ್ಷಗಾನ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಅಂಡಿಂಜೆ ಮತ್ತು ಶ್ರೀಮತಿ ವಿನಯಾ ಕುಮಾರಿ ದಂಪತಿ ಹಾಗೂ ಶಿವಮೊಗ್ಗ ನಾರಾಯಣ ಹೃದಯಾಲಯದ ವೈದ್ಯರಾದ ಡಾ.ಶ್ರೀವತ್ಸ ನಾಡಿಗ್ ಮತ್ತು ಡಾ.ಅಪರ್ಣಾ ಶ್ರೀವತ್ಸ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸತೀಶ್ ಕುಮಾರ್ ಅಂಡಿಂಜೆಯವರು ಇಂದಿನ ಮಕ್ಕಳನ್ನು ಮೊಬೈಲ್ ಪ್ರಭಾವದಿಂದ ದೂರವಿಡಲು ಪೋಷಕರು ಯಕ್ಷಗಾನದಂತಹ ಕಲೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರಿಗೆ ಕಲೆ, ಸಂಸ್ಕೃತಿಗಳನ್ನು ಕಲಿಸಿ ಸುಸಂಸ್ಕೃತರನ್ನಾಗಿ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಆನಂದ ಶೆಟ್ಟಿಯವರು ಮಾತನಾಡಿ ಮುಂದಿನ ವರ್ಷದಿಂದ ಆಸಕ್ತರಿಗೆ ಉಚಿತ ಯಕ್ಷಗಾನ ಕಲಿಸುವ ಯೋಜನೆ ಇದೆ ಎಂದರು.

Yakshasamvardana Trust ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಭಾರತಿ ಸುದರ್ಶನ್ ಸ್ವಾಗತಿಸಿ, ಖಜಾಂಚಿ ಶ್ರೀ ಗೋವಿಂದರಾಯ ನಾಯಕ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಸಹಕಾರ್ಯದರ್ಶಿ ಶ್ರೀಮತಿ ಮಲ್ಲಿಕಾ ಆರ್ ಭಟ್ ಮತ್ತು ಕುಮಾರಿ ಪ್ರಗತಿ ಶೆಟ್ಟಿ ಪ್ರಾರ್ಥಿಸಿದರು.
ನಂತರ ಮಕ್ಕಳಿಂದ ದ್ರುಪದ ಗರ್ವಭಂಗ ಮತ್ತು ಗುರುದಕ್ಷಿಣೆ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು.
ಇಂದು ಪುರುಷರು ಮತ್ತು ಮಹಿಳಾ ಕಲಾವಿದರಿಂದ ಶಮಂತಕಮಣಿ ವಿಲಾಸ ಮತ್ತು ವಿಂದಾನುವಿಂದ ಕಾಳಗ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗುರು ಐನಬೈಲು ಶ್ರೀ ಪರಮೇಶ್ವರ ಹೆಗಡೆ, ಶ್ರೀ ನಾಗರಾಜ ಆರ್, ಮದ್ದಳೆಯಲ್ಲಿ ಶ್ರೀ ಶರತ್ ಹೆಗ್ಗೋಡು, ಶ್ರೀ ಗಣಪತಿ ಪ್ರಭು, ಚೆಂಡೆಯಲ್ಲಿ ಶ್ರೀ ಕಿರಣ್ ಬಾವಿಗದ್ದೆ ಮತ್ತು ನವೀನ್ ಎನ್. ಜೆ. ಸಹಕರಿಸಿದರು.
