Wednesday, February 25, 2026
Wednesday, February 25, 2026

Basavanna ಬಸವಣ್ಣನವರ ಮತ್ತು ಕನಕದಾಸರ ರಚನೆಗಳಲ್ಲಿ ಸಂವಿಧಾನದ ಆಶಯಗಳು..

Date:

ಲೇ: ಡಾ.ರವಿ.ಎಂ.ಸಿದ್ಲಿಪುರ.


Basavanna ಈ ಶೀರ್ಷಿಕೆಯಲ್ಲಿ 12, 16, 19-20, ಶತಮಾನಗಳಲ್ಲಿನ ಬಸವ, ಕನಕ, ಗಾಂಧಿ ಮತ್ತು ಅಂಬೇಡ್ಕರ್ ಹಾಗೂ ಇವರು ಪ್ರತಿಪಾದಿಸಿದ ಕ್ರಮವಾಗಿ ಸಮಾನತೆ, ವೈಚಾರಿಕ ಪ್ರಜ್ಞೆ, ಸ್ವಾತಂತ್ರ್ಯ ಹೋರಾಟ-ಪ್ರಜಾಪ್ರಭುತ್ವ ವ್ಯವಸ್ಥೆ,
ಇವೆಲ್ಲವುಗಳ ಸಾರವಾದ ಸಂವಿಧಾನವಿದೆ.

ಇವರೆಲ್ಲಾ ‘ನಮ್ಮ’ ಬಗ್ಗೆ ಮಾತಾನಾಡಿದವರು, ನಾವು ಮಾತಾಡುವಂತೆ ಮಾಡಿದವರು. ಮೌನವಹಿಸದಂತೆ ಎಚ್ಚರಿಕೆಯನ್ನೂ ನೀಡಿದವರು.

“ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು” ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ ಮಾತು ಇಲ್ಲಿ ಸ್ಮರಣೀಯ. ಈ ಹಿನ್ನೆಲೆಯಲ್ಲಿ, ಚರಿತ್ರೆ ಎಂಬುದು ಕೇವಲ ಗತಕಾಲದ ಸ್ಮೃತಿಯಲ್ಲ; ಅದು ವರ್ತಮಾನದ ಅಸ್ಮಿತೆಯನ್ನು ರೂಪಿಸುವ ಒಂದು Active Presence(ಸಕ್ರಿಯ ಉಪಸ್ಥಿತಿ). ನಾವು ಇಂದು ಅನುಭವಿಸುತ್ತಿರುವ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ಏಕಾಏಕಿ ಸೃಷ್ಟಿಯಾದವುಗಳಲ್ಲ. ಬದಲಾಗಿ, ಅವು ಶತಮಾನಗಳ ಕಾಲ ಈ ನೆಲದ ಮಣ್ಣಿನಲ್ಲಿ ನಡೆದ ಸೈದ್ಧಾಂತಿಕ ಮಥನದ, ಸಂಘರ್ಷದ ಫಲಶ್ರುತಿಗಳಾಗಿವೆ.

೧೯೫೦ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನವು ಒಂದು Living Document ಆಗಿದ್ದು, ಅದು ೧೨ನೇ ಶತಮಾನದ ಬಸವಣ್ಣ ಮತ್ತು ೧೬ನೇ ಶತಮಾನದ ಕನಕದಾಸರಂತಹ ಕ್ರಾಂತಿಕಾರಿಗಳ ಕನಸುಗಳ ಸಮಕಾಲೀನ ರೂಪವಾಗಿದೆ. ಇಂತಹವರ ವಿಚಾರಗಳು ನಮ್ಮ ಸಂವಿಧಾನಕ್ಕೆ Pre-modern Constitutionalism(ಆಧುನಿಕಪೂರ್ವ ಸಂವಿಧಾನವಾದ)ದ ಭದ್ರ ತಳಹದಿಯನ್ನು ಒದಗಿಸಿವೆ. ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಬುದ್ಧನ ಪ್ರಜ್ಞೆ, ಬಸವಣ್ಣನ ಸಮಾನತೆ ಮತ್ತು ದಾಸರಂತಹ ದಾರ್ಶನಿಕರ ಅಂತಃಕರಣವನ್ನು ಮೈಗೂಡಿಸಿಕೊಂಡಿದ್ದರು ಎಂಬುದನ್ನು ಸಂವಿಧಾನದಲ್ಲಿಯೇ ಗುರುತಿಸಬಹುದು. ಆದ್ದರಿಂದಾಗಿ ಭಾರತದ ಸಂವಿಧಾನವನ್ನು ನಾವು ಒಂದು Evolutionary Document(ವಿಕಾಸಾತ್ಮಕ ದಾಖಲೆ) ಎಂದು ಕರೆಯಬಹುದು.

ಈ ವಿಕಾಸಾತ್ಮಕ ಮೈಲಿಗಲ್ಲುಗಳನ್ನು ಅರಿಯುವುದು ಎಂದರೆ ನಮ್ಮ ಅಸ್ಮಿತೆಯನ್ನು ರಕ್ಷಿಸುವ Ideological Armor(ಸೈದ್ಧಾಂತಿಕ ರಕ್ಷಣಾ ಕವಚ)ವನ್ನು ತೊಟ್ಟಂತೆ. ಈ ಇತಿಹಾಸದ ಅರಿವು ನಮಗೆ ಕೇವಲ ಮಾಹಿತಿಯಲ್ಲ, ಬದಲಾಗಿ ಇಂದಿನ ಪ್ರಜಾಪ್ರಭುತ್ವದ ಸಂಕೀರ್ಣತೆಗಳನ್ನು ಎದುರಿಸಲು ಬೇಕಾದ Moral Courage(ನೈತಿಕ ಧೈರ್ಯ)ವನ್ನು ಒದಗಿಸುವ ಚೇತನವಾಗಿದೆ.

ಸಂವಿಧಾನದ ಪೀಠಿಕೆ(Preamble) “ಭಾರತದ ಜನಗಳಾದ ನಾವು” ಎಂದು ಪ್ರಾರಂಭವಾಗುತ್ತದೆ. ಬಸವಣ್ಣನವರು ಇದನ್ನು ಭಾವನಾತ್ಮಕ ಸಮಾನತೆಯ ಭಾಷೆಯಲ್ಲಿ ನುಡಿದ್ದಾರೆ. “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.” ಈ ವಚನವು ಪ್ರಜಾಪ್ರಭುತ್ವದ ಮೂಲ ಮಂತ್ರವಾದ Fraternity(ಭ್ರಾತೃತ್ವ) ಮತ್ತು Equality(ಸಮಾನತೆ)ಯ ಘೋಷಣೆಯಾಗಿದೆ. ಇಲ್ಲಿ ಕೇವಲ ರಾಜಕೀಯ ಗುರುತು ಮಾತ್ರವಲ್ಲ, ಭಾವನಾತ್ಮಕ ಬಂಧನ ರೂಪುಗೊಳ್ಳುತ್ತದೆ.

ಬಸವಣ್ಣನವರು ಜಾತಿ ಪದ್ಧತಿಯನ್ನು ನಿರಾಕರಿಸಲು ಬಳಸಿದ ತಂತ್ರ ಅತ್ಯಂತ ವಿಶಿಷ್ಟ. ಅವರು ಕೇವಲ ವ್ಯವಸ್ಥೆಯನ್ನು ಬೈಯಲಿಲ್ಲ; ಬದಲಾಗಿ ತಮಗೊಂದು ಹೊಸ Ideological ವಂಶವೃಕ್ಷವನ್ನೇ ಸೃಷ್ಟಿಸಿಕೊಂಡರು. Biological ತಂದೆ-ತಾಯಿಯನ್ನು ನಿರಾಕರಿಸಿ, ಆದರ್ಶದ ತಂದೆ-ತಾಯಿಯರನ್ನು ಸ್ವೀಕರಿಸುವ ಈ ಕ್ರಿಯೆ ಆಧುನಿಕ ಸಂವಿಧಾನದ ‘ಜಾತಿ ಮೀರಿದ ಪೌರತ್ವ’ದ ಪರಿಕಲ್ಪನೆಗೆ ಮೂಲಾಧಾರವಾಗಿದೆ.

ಕನಕದಾಸರ ಪ್ರಸಿದ್ಧ ಕೀರ್ತನೆ ‘ಕುಲಕುಲ’ವನ್ನು ಕೇಳಿದ ಕ್ಷಣದಲ್ಲಿ, ಅದು ಕೇವಲ ಭಕ್ತಿಗೀತೆ ಎಂದು ಅನಿಸಿದರೆ ಅದು ಆ ಕೀರ್ತನೆಯ ಅಪೂರ್ಣ ಗ್ರಹಣ. ಅದು ಐದು ಶತಮಾನಗಳ ಹಿಂದಿನ ಸಂವಿಧಾನ-ಭಾಷ್ಯ: “ಕುಲಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ…. ಆತ್ಮ ಯಾವ ಕುಲ ಜೀವ ಯಾವ ಕುಲ ತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯ” ಇಲ್ಲಿ ಕನಕದಾಸರು ತಾತ್ವಿಕ ದೃಷ್ಟಿಕೋನದಿಂದ ಜಾತಿ ಪ್ರಶ್ನೆಯನ್ನು ಪರಿಹರಿಸುತ್ತಾರೆ: ಆತ್ಮಕ್ಕೆ ಜಾತಿ ಇಲ್ಲ, ಜೀವಕ್ಕೆ ಕುಲ ಇಲ್ಲ, ಇಂದ್ರಿಯಗಳಿಗೆ ಭೇದ ಇಲ್ಲ— ಹಾಗಾದರೆ ಕೇವಲ ದೇಹ ಹುಟ್ಟಿನ, ವಾಸಸ್ಥಳ, ಆಹಾರ, ಉಡುಗೆ-ತೊಡುಗೆಗಳ ಆಧಾರಗಳ ಮೇಲೆ ಮನುಷ್ಯ ಮನುಷ್ಯರ ನಡುವೆ ಗೋಡೆ ಕಟ್ಟುವುದು ಎಂತು ಸರಿ? ಈ ಪ್ರಶ್ನೆ ಸಂವಿಧಾನದ ‘ವ್ಯಕ್ತಿ ಗೌರವ ಮತ್ತು Individual Dignity’ಯ ಮೂಲತಾರ್ಕಿಕ ಆಧಾರವೆಂದರೆ ತಪ್ಪಾಗಲಾರದು.

ಇವರಿಬ್ಬರ ಚಿಂತನೆಗಳ ಈ ಸಂಗಮವು ಆಧುನಿಕ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾದ Social Inclusion ಮತ್ತು Active Citizenshipನ ಮಾದರಿಗಳನ್ನು ಒದಗಿಸುತ್ತದೆ. ಕೇವಲ ಕಾನೂನುಬದ್ಧ ಸಮಾನತೆಯಷ್ಟೇ ಸಾಲದು, ಅದು ಪರಸ್ಪರ ಗೌರವ ಮತ್ತು ಅರಿವಿನ ಮೂಲಕ ಒಡಮೂಡುವ ಭಾವನಾತ್ಮಕ ಬಂಧವಾಗಬೇಕು ಎಂಬುದು ಇಲ್ಲಿನ ಸೈದ್ಧಾಂತಿಕ ಸಾರವಾಗಿದೆ. ಇಂತಹ ಸಾರವು ಬಸವಣ್ಣ ಮತ್ತು ಕನಕದಾಸರನ್ನು ಧಾರ್ಮಿಕ ಚೌಕಟ್ಟಿನಿಂದ ಹೊರತಂದು, ಅವರನ್ನು ಆಧುನಿಕ ರಾಜಕೀಯ ಮತ್ತು ಸಾಮಾಜಿಕ ತತ್ವಶಾಸ್ತ್ರದ ಪ್ರಖರ ಚಿಂತಕರನ್ನಾಗಿ ಮಾಡುತ್ತದೆ.

ಬಸವಣ್ಣ ಸಮಾಜ ಸುಧಾರಣೆಗಾಗಿ ಸಂಘಟನಾತ್ಮಕ ಮಾರ್ಗ ತುಳಿದರು— ಅನುಭವ ಮಂಟಪ ಕಟ್ಟಿ, ಎಲ್ಲ ಜಾತಿ-ವರ್ಗದ ಶರಣರನ್ನು ಒಂದೇ ಮೇಜಿನ ಸುತ್ತ ತಂದರು. ಕನಕದಾಸರು ಒಬ್ಬ ಒಂಟಿ ನ್ಯಾಯ-ಹೋರಾಟಗಾರನಂತೆ(Individual Crusader) ವ್ಯವಸ್ಥೆಯ ಒಳಗಿದ್ದೇ ಅದರ ಟೊಳ್ಳುತನವನ್ನು ಬಯಲಿಗೆಳೆದರು. “ಹೊಲೆಯ ಹೊರಗಿಹನೆ ಊರೊಳಗಿಲ್ಲವೆ” ಈ ಪ್ರಶ್ನೆ ಅಂಬೇಡ್ಕರ್ ಅವರ ದಲಿತ ಚಿಂತನೆಯ ಮುನ್ಸೂಚನೆಯಂತೆ ತೋರುತ್ತದೆ. ಹೊಲೆಯ ಮನುಷ್ಯ ಊರೊಳಗೆ ಇದ್ದಾನೆ, ಆದರೆ ಅವನನ್ನು ಹೊರಗಿಡಲಾಗಿದೆ— ಈ ವಿರೋಧಾಭಾಸವನ್ನು ಕನಕದಾಸರು ಅತ್ಯಂತ ಮಾರ್ಮಿಕವಾಗಿ ಬಯಲಿಗೆಳೆಯುತ್ತಾರೆ.

ಬಸವಣ್ಣನವರು ಒಂದು ಪರ್ಯಾಯ ವ್ಯವಸ್ಥೆಯನ್ನು(Alternative System) ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸಿದರೆ, ಕನಕದಾಸರ ಪ್ರಪಂಚವು ಅಸ್ತಿತ್ವದಲ್ಲಿದ್ದ ಶ್ರೇಣೀಕೃತ ವ್ಯವಸ್ಥೆಯೊಳಗಿನ ಸಂಘರ್ಷಮಯ ಹಾದಿಯಾಗಿತ್ತು. ದಾಸಕೂಟದ ಭಾಗವಾಗಿ ಅವರು ಪಡೆದ ಅನುಭವಗಳು ಕೇವಲ ಭಕ್ತಿಯ ತಿಕ್ಕಾಟಗಳಾಗಿರದೆ, ಅವು ಒಂದು Social Hegemony(ಸಾಮಾಜಿಕ ಪ್ರಾಬಲ್ಯ) ವಿರುದ್ಧದ ಸೈದ್ಧಾಂತಿಕ ಮುಖಾಮುಖಿಯಾಗಿದ್ದವು.

Basavanna ಬಸವಣ್ಣನವರ “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬ ವಚನವು ಸಂವಹನ ಮೀಮಾಂಸೆಯ ದೃಷ್ಟಿಯಿಂದ ಒಂದು Axiological Standard ಅಥವಾ ಮೌಲ್ಯಮಾಪನ ಮಾನದಂಡವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಕೇವಲ ಏನನ್ನಾದರೂ ಹೇಳುವ ಹಕ್ಕಲ್ಲ(Rights), ಬದಲಾಗಿ ಅದು ಹೇಗೆ ಹೇಳಬೇಕು ಎಂಬ ನೈತಿಕ ಹೊಣೆಗಾರಿಕೆ (Responsibility) ಎಂಬುದು ಅವರ ವಾದವಾಗಿತ್ತು. ಇಂದಿನ ದ್ವೇಷ ಭಾಷಣ ಮತ್ತು ಟ್ರೋಲ್ ಸಂಸ್ಕೃತಿಯ ಕಾಲದಲ್ಲಿ, ಬಸವಣ್ಣನವರ ಈ ಮಾತುಗಳು ಕೇವಲ ಸಾಹಿತ್ಯಿಕ ಸಾಲುಗಳಲ್ಲ; ಅವು ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗೆ ಅತ್ಯಗತ್ಯವಾದ ಒಂದು Code of Conduct(ನೀತಿ ಸಂಹಿತೆ). ನುಡಿ ಮತ್ತು ನಡೆಯ ನಡುವಿನ ಸಮನ್ವಯವನ್ನು ಅವರು ‘ಶಿವಾಚಾರ’ವೆಂದು ಕರೆದದ್ದು, ಇಂದಿನ ರಾಜಕೀಯ ವ್ಯವಸ್ಥೆಯ ಪಾರದರ್ಶಕತೆ(Transparency) ಮತ್ತು ಉತ್ತರದಾಯಿತ್ವದ(Accountability) ತಾತ್ವಿಕ ಬೇರಾಗಿದೆ. ನಾಯಕನ ಮಾತು ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ ಇಡೀ ಪ್ರಜಾಪ್ರಭುತ್ವದ ಪಾವಿತ್ರ್ಯವೇ ಕುಸಿಯುತ್ತದೆ ಎಂಬುದು ಇಲ್ಲಿನ ಸೈದ್ಧಾಂತಿಕ ಎಚ್ಚರಿಕೆಯಾಗಿದೆ.

ಕನಕದಾಸರು “ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ” ಎನ್ನುವ ಮೂಲಕ ಒಂದು ರೀತಿಯ Epistemological Honesty ಅಥವಾ ಜ್ಞಾನಮೀಮಾಂಸೆಯ ಪ್ರಾಮಾಣಿಕತೆಯನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯ(Public Opinion) ಎನ್ನುವುದು ಕೇವಲ ಸಂಖ್ಯೆಯ ಅಥವಾ ಬಹುಮತದ ಆಟವಾಗಬಾರದು; ಅದು ಸತ್ಯ ಮತ್ತು ಅರಿವಿನ ಮೇಲೆ ನಿಂತ ಸಜ್ಜನರ ಸಹಮತವಾಗಿರಬೇಕು ಎಂಬುದು ಅವರ ಆಶಯವಾಗಿತ್ತು. ಇಂದಿನ ಸುಳ್ಳು ಸುದ್ದಿ ಮತ್ತು ಮೊಬ್ ಮೆಂಟಾಲಿಟಿಯ(Mob Mentality) ಸಂದರ್ಭದಲ್ಲಿ, ಯಾವುದೋ ಒತ್ತಡಕ್ಕೋ ಅಥವಾ ಭಾವೋದ್ರೇಕಕ್ಕೋ ಮಣಿಯದೆ ಸತ್ಯವನ್ನು ಸತ್ಯವೆಂದು ಘೋಷಿಸುವ ಧೈರ್ಯವೇ ನಿಜವಾದ ಪ್ರಜಾಪ್ರಭುತ್ವದ ಜೀವಾಳ.

ಬಸವಣ್ಣ ಮತ್ತು ಕನಕದಾಸರ ಈ ತಾತ್ವಿಕ ಸಂಗಮದಲ್ಲಿ ನಮಗಿಲ್ಲಿ ಗುಣಮಟ್ಟದ ಪ್ರಜಾಪ್ರಭುತ್ವದ(Quality Democracy) ಉನ್ನತ ಮಾದರಿ ಸಿಗುತ್ತದೆ. ಬಸವಣ್ಣನವರ ಸಹಿಷ್ಣುತೆಯ ಸಿದ್ಧಾಂತವು— “ಬಯಿದವರೆನ್ನ ಬಂಧುಗಳು” ಎಂದು ಕರೆದದ್ದು— ಕೇವಲ ವೈಯಕ್ತಿಕ ಔದಾರ್ಯವಲ್ಲ; ಅದು ಪ್ರಜಾಪ್ರಭುತ್ವದಲ್ಲಿ ಎದುರಾಳಿಯನ್ನೂ ಸಮಾನ ಗೌರವದಿಂದ ಕಾಣಬೇಕಾದ Pluralistic Toleranceನ ಸಂಕೇತವಾಗಿದೆ. ಹಾಗೆಯೇ ಕನಕದಾಸರ “ನಿನ್ನ ನೀನೆ ತಿಳಿದು ನೋಡೆಲೊ” ಎಂಬ ಕರೆ ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಸದಾ ಜಾಗೃತನಾಗಿರಬೇಕು ಎಂಬ Active Citizenshipನ ಸಾರವಾಗಿದೆ. ಸಮಾಜದ ದೋಷಗಳ ಬಗ್ಗೆ ಮೌನವಾಗಿರುವುದು ಕೂಡ ಆ ಅನ್ಯಾಯಕ್ಕೆ ನೀಡುವ ಸಹಕಾರವೇ ಎಂಬ ಬಸವಣ್ಣನವರ ಎಚ್ಚರಿಕೆಯು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನೂ, ಎಲ್ಲಾ ರೀತಿಯ ಮಾಧ್ಯಮಗಳು ‘ವಾಚ್‌ಡಾಗ್’(Watchdog)ನಂತೆ ವರ್ತಿಸಬೇಕಾದ ಅನಿವಾರ್ಯತೆಯನ್ನು ಪ್ರತಿಪಾದಿಸುತ್ತದೆ.

ಬಸವಣ್ಣ ಖಜಾನೆಯ ಮಂತ್ರಿಯಾಗಿದ್ದಾಗಲೂ, ಕನಕದಾಸರು ದಂಡನಾಯಕರಾಗಿದ್ದಾಗಲೂ ಅಧಿಕಾರ ಮತ್ತು ಸಂಪತ್ತಿನ ದಾಹ ಅವರನ್ನು ಆವರಿಸಲಿಲ್ಲ. ಇದು ಆಧುನಿಕ ರಾಜಕಾರಣದಲ್ಲಿ ನಮಗೆ ಬೇಕಿರುವ ಉತ್ತರದಾಯಿತ್ವ(Accountability) ಮತ್ತು ನೈತಿಕತೆಯ(Ethics) ಪರಮೋಚ್ಚ ಮಾದರಿಯಾಗಿದೆ.
ಬಸವಣ್ಣನವರ ‘ದಾಸೋಹ’ ಪ್ರಜ್ಞೆ ಮತ್ತು ಕನಕದಾಸರ ‘ಜನಾಭಿಪ್ರಾಯ ಕೇಂದ್ರಿತ’ ಆರ್ಥಿಕ ದೃಷ್ಟಿಕೋನಗಳು ಇಂದಿನ ಆರ್ಥಿಕ ಬಿಕ್ಕಟ್ಟುಗಳಿಗೆ ಸುಸ್ಥಿರವಾದ ಪರಿಹಾರವನ್ನು ಒದಗಿಸುತ್ತವೆ. ಸಂಪತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬ ಸಂವಿಧಾನದ ಆಶಯವು ಸಾಕಾರಗೊಳ್ಳಬೇಕಾದರೆ, ನಮಗೆ ಗಾಂಧೀಜಿಯವರು ಹೇಳಿದ ‘Trusteeship’(ಧರ್ಮದರ್ಶಿತ್ವ)ಗಿಂತಲೂ ಹಳೆಯದಾದ ಮತ್ತು ಪ್ರಬಲವಾದ ಶರಣರ ‘ಕಾಯಕ-ದಾಸೋಹ’ ಸಂಸ್ಕೃತಿಯ ಅಗತ್ಯವಿದೆ. ನಾವು ಗಳಿಸುವ ಸಂಪತ್ತಿನಲ್ಲಿ ಸಮಾಜದ ಪಾಲೂ ಇದೆ ಎಂಬ ಅರಿವು ಮೂಡಿದಾಗ ಮಾತ್ರ ಸಾಮಾಜಿಕ ನ್ಯಾಯ(Social Justice) ಲಭ್ಯವಾಗುತ್ತದೆ.

ಬಸವಣ್ಣನವರ ದೃಷ್ಟಿಯಲ್ಲಿ ಧರ್ಮ ಎಂಬುದು ಬಾಹ್ಯ ಆಚರಣೆಗಳ ಅಥವಾ ಬೃಹತ್ ಕಟ್ಟಡಗಳ ಪ್ರದರ್ಶನವಾಗಿರಲಿಲ್ಲ; ಬದಲಾಗಿ ಅದು ಅಂತರಂಗದ ಶುದ್ಧಿ ಮತ್ತು ಮಾನವೀಯತೆಯ ವಿಕಾಸವಾಗಿತ್ತು. ಅವರ ಪ್ರಸಿದ್ಧ ವಚನ “ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಲಶವಯ್ಯಾ. ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬುದು ಕೇವಲ ಬಡವನ ಅಳಲಲ್ಲ. ಇದು ‘ಸ್ಥಾವರ’(Static/Institutionalized Religion) ಮತ್ತು ‘ಜಂಗಮ’(Dynamic/Living Humanity) ನಡುವಿನ ಸಂಘರ್ಷವನ್ನು ಎತ್ತಿ ತೋರಿಸುವ ಒಂದು ಸಿದ್ಧಾಂತವಾಗಿದೆ.
ಇಂದು ನಾವು ಸಾವಿರಾರು ಕೋಟಿ ರೂಪಾಯಿಗಳನ್ನು ಬೃಹತ್ ಧಾರ್ಮಿಕ ಕಟ್ಟಡಗಳು ಮತ್ತು ಪ್ರತಿಮೆಗಳಿಗಾಗಿ ವ್ಯಯಿಸುತ್ತಿರುವಾಗ, ಬಸವಣ್ಣನವರ ಈ ವಚನವು ಸಂವಿಧಾನದ ‘ಸಾರ್ವಜನಿಕ ಶ್ರೇಯೋಭಿವೃದ್ಧಿ’ (Public Welfare) ಎಂಬ ಆಶಯದೊಂದಿಗೆ ಮುಖಾಮುಖಿಯಾಗುತ್ತದೆ.

ಜೀವಂತ ಮನುಷ್ಯನ ಹಸಿವು ಮತ್ತು ನೋವಿಗೆ ಸ್ಪಂದಿಸದ ಧರ್ಮವು ಕೇವಲ ‘ಸ್ಥಾವರ’ವಾಗುತ್ತದೆ; ಅದು ಕಾಲಕ್ರಮೇಣ ನಶಿಸಿಹೋಗುತ್ತದೆ. ಆದರೆ ಚಲನಶೀಲ ಸಮಾಜ ಮತ್ತು ಮನುಷ್ಯತ್ವಕ್ಕೆ ಸಾವಿಲ್ಲ ಎಂಬ ಸತ್ಯವು ಇಲ್ಲಿ ಅನಾವರಣಗೊಂಡಿದೆ. ಇದು ಕೇವಲ ಧಾರ್ಮಿಕ ಸುಧಾರಣೆಯಲ್ಲ, ಬದಲಾಗಿ ಸಂಪನ್ಮೂಲಗಳು ಕಟ್ಟಡಗಳ ಮೇಲೆ ವ್ಯರ್ಥವಾಗದೆ ಮನುಷ್ಯನ ಅಭಿವೃದ್ಧಿಗೆ ಬಳಕೆಯಾಗಬೇಕು ಎಂಬ ಒಂದು ಪ್ರಖರವಾದ ರಾಜಕೀಯ-ಆರ್ಥಿಕ ನಿಲುವು ಕೂಡ ಹೌದು.

ಬಸವ ಮತ್ತು ಕನಕರ ದರ್ಶನವು ನಮಗೆ ಧರ್ಮ ಎಂಬುದು ಮನುಷ್ಯರ ನಡುವೆ ಗೋಡೆ ಕಟ್ಟುವ ಸಾಧನವಾಗಬಾರದು, ಬದಲಾಗಿ ಅದು ಸಂವಿಧಾನದ ಪೀಠಿಕೆಯು ಆಶಿಸುವ ‘ಭ್ರಾತೃತ್ವ’ವನ್ನು ಗಟ್ಟಿಗೊಳಿಸುವ ದಾರಿಯಾಗಬೇಕು ಎನ್ನುವುದನ್ನು ಕಲಿಸುತ್ತದೆ. ದೇವರ ಹೆಸರಿನಲ್ಲಿ ನಡೆಯುವ ಮೌಢ್ಯಗಳನ್ನು ವಿರೋಧಿಸಿ, ಮನುಷ್ಯತ್ವವನ್ನು ಗೌರವಿಸುವ ಇವರ ‘ಧರ್ಮನಿರಪೇಕ್ಷ’ ನಿಲುವುಗಳು ಭಾರತದ ಸಂವಿಧಾನದ ಆತ್ಮಕ್ಕೆ ಅತ್ಯಂತ ಹತ್ತಿರವಾಗಿವೆ. ಇದು ಕೇವಲ ಮತಗಳ ಸಮಾನತೆಯಲ್ಲ, ಬದಲಾಗಿ ಮಾನವ ಕುಲದ ಅಖಂಡತೆಯನ್ನು ಸಾರುವ ಒಂದು ಜಾಗತಿಕ ಸಿದ್ಧಾಂತವಾಗಿದೆ.

“ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ, ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ” ಎಂಬ ವಚನವು ಸಾಮಾಜಿಕ ಒಳಗೊಳ್ಳುವಿಕೆಯ ಮನೋವಿಜ್ಞಾನವನ್ನು ಬಿಂಬಿಸುತ್ತದೆ. ಬಸವಣ್ಣನವರು ಇಲ್ಲಿ ಉತ್ತಮಕುಲದಲ್ಲಿ ಹುಟ್ಟುವುದನ್ನು ಒಂದು ‘ಹೊರೆ’ ಎಂದು ಕರೆಯುವ ಮೂಲಕ, ಮೇಲ್ವರ್ಗದವರು ತಮ್ಮ ಅಹಂಕಾರವನ್ನು ತ್ಯಜಿಸಿದಾಗ ಮಾತ್ರ ಸಮಾನತೆ ಸಾಧ್ಯ ಎಂಬ ಸತ್ಯವನ್ನು ಸಾರುತ್ತಾರೆ. ಅಂದರೆ, ಒಳಗೊಳ್ಳುವಿಕೆ ಎನ್ನುವುದು ಕೇವಲ ಶೋಷಿತರನ್ನು ಮೇಲಕ್ಕೆತ್ತುವುದಲ್ಲ, ಅದು ಸವಲತ್ತು ಹೊಂದಿದವರು ತಮ್ಮ ಪಟ್ಟಭದ್ರ ಹಿತಾಸಕ್ತಿಯನ್ನು ಬಿಟ್ಟುಕೊಡುವ ಪ್ರಕ್ರಿಯೆಯೂ ಹೌದು. ಈ ಮೂಲಕ ಅವರು ಸಮಾಜದಲ್ಲಿ ಸಮಾನತೆಯ ಹಾದಿಯನ್ನು ಸುಗಮಗೊಳಿಸಿದರು. “ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ” ಎನ್ನುವ ನಿಲುವು ಇಂದಿನ ಅಂತರ್ಗತ ಅಭಿವೃದ್ಧಿಯ(Inclusive Development) ಮೂಲರೂಪವಾಗಿದ್ದು, ಇದು ವ್ಯಕ್ತಿಯ ಹುಟ್ಟನ್ನು ಸಂಪೂರ್ಣವಾಗಿ ಗೌಣಗೊಳಿಸುತ್ತದೆ.

ಇಂದು ನಾವು ಜಾತಿಯನ್ನು ರಾಜಕೀಯ ‘ಅಸ್ಮಿತೆ’ಯನ್ನಾಗಿ (Identity Politics) ಬಳಸಿಕೊಳ್ಳುತ್ತಿರುವುದು ಒಂದು ದೊಡ್ಡ ವಿಪರ್ಯಾಸ. ಅಂದು ಜಾತಿಯನ್ನು ಕಳಚಿಕೊಳ್ಳಲು ಶರಣರು “ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ” ಎಂದು ಅಸ್ಮಿತೆಗಳನ್ನು ವಿಸ್ತರಿಸಿಕೊಂಡರೆ, ಇಂದು ನಾವು ಜಾತಿಯನ್ನು ಮತಬ್ಯಾಂಕ್‍, ಟಿಕೆಟ್ ಮತ್ತು ಮಂತ್ರಿ ಸ್ಥಾನದ ಸರಕನ್ನಾಗಿ ಮಾಡಿಕೊಂಡಿದ್ದೇವೆ. ಇದು ಸಂವಿಧಾನದ ಜಾತಿ ವಿನಾಶದ ಆಶಯಕ್ಕೆ ದೊಡ್ಡ ಸವಾಲಾಗಿದೆ.

ಬಸವಣ್ಣನವರು ‘Why’ (ಏಕೆ?) ಅನ್ನು ವ್ಯಾಖ್ಯಾನಿಸಿದರೆ, ಕನಕದಾಸರು ‘What’ (ಏನು?) ಅನ್ನು ಬಯಲಿಗೆಳೆಯುತ್ತಾರೆ. “ಆವ ಕರ್ಮವೊ ಇದು ಆವ ಧರ್ಮವೊ” ಎಂಬ ಕೀರ್ತನೆಯಲ್ಲಿ ಗಯಾ ಕ್ಷೇತ್ರದ ಪಿಂಡ ಕರ್ಮದ ಅಪ್ರಯೋಜಕತೆಯನ್ನು “ಎಳ್ಳು ಮೀನು ನುಂಗಿ ಹೋಯಿತು, ದರ್ಭೆ ನೀರೊಳು ಹರಿದು ಹೋಯಿತು” ಎಂಬ ಮಾತಿನಲ್ಲಿ ಬಯಲಿಗೆಳೆಯುತ್ತಾರೆ. “ಹೇಳುವವನು ಅವಿವೇಕಿ, ಕೇಳುವವನು ಅಜ್ಞಾನಿ” ಎಂದು ಸಾರುವ ಮೂಲಕ ಅವರು ಸಮಾಜದ ಬೌದ್ಧಿಕ ಜಡತ್ವವನ್ನು ಲೇವಡಿ ಮಾಡುತ್ತಾರೆ. ಇದು ಕೇವಲ ಧಾರ್ಮಿಕ ವಿಡಂಬನೆಯಲ್ಲ; ಇದು ವೈಜ್ಞಾನಿಕ ಮನೋಭಾವವನ್ನು ಜನ ಸಮುದಾಯದಲ್ಲಿ ಬಿತ್ತುವ ಪ್ರಯತ್ನವಾಗಿದೆ. ಕನಕದಾಸರ “ನೇಮವಿಲ್ಲದ ಹೋಮವೇತಕೆ” ಮತ್ತು “ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ” ಎಂಬ ಪ್ರಶ್ನೆಗಳು ಬಾಹ್ಯ ಆಚರಣೆಗಳಿಗಿಂತ ಅಂತರಂಗದ ಮತ್ತು ವೈಚಾರಿಕ ಪ್ರಾಮಾಣಿಕತೆಯ ಮಹತ್ವವನ್ನು ಸಾರುತ್ತವೆ.

ಬಸವಣ್ಣನವರು “ನೂರನೋದಿ ನೂರಕೇಳಿ ಏನು… ಮಾತಿನಂತೆ ಮನವಿಲ್ಲದ ಜಾತಿಡಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ” ಎನ್ನುವ ಮೂಲಕ ಬೌದ್ಧಿಕ ಪ್ರಾಮಾಣಿಕತೆಯಿಲ್ಲದ ಆಚರಣೆಗಳನ್ನು ಅಣಕಿಸುತ್ತಾರೆ. ಅವರು “ವೇದಭಾರಭರಾಕ್ರಾಂತಾ ಬ್ರಾಹ್ಮಣಾಃ ಗರ್ದಭಾಃ” ಎಂದು ಕಟುವಾಗಿ ಟೀಕಿಸುವ ಮೂಲಕ ಜ್ಞಾನವು ಬದುಕನ್ನು ಹಗುರಾಗಿಸುವ ಬೆಳಕಾಗಬೇಕೇ ಹೊರತು ಅದು ಹೊರೆಯಾಗಬಾರದು ಎಂದು ಪ್ರತಿಪಾದಿಸುತ್ತಾರೆ. ಹಾಗೆಯೇ, ಕನಕದಾಸರ “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ” ಎಂಬ ಜಿಜ್ಞಾಸೆಯು ಪ್ರತಿಯೊಂದನ್ನೂ ಪ್ರಶ್ನಿಸಿ ಸತ್ಯವನ್ನು ಕಂಡುಕೊಳ್ಳುವ ‘ವೈಜ್ಞಾನಿಕ ಮನೋಭಾವ’ದ ಪರಮಾವಧಿಯಾಗಿದೆ. ಈ ಇಬ್ಬರು ದಾರ್ಶನಿಕರು ಧರ್ಮವನ್ನು ದೇವಾಲಯದ ಕತ್ತಲಕೋಣೆಯಿಂದ ಹೊರತಂದು ಬದುಕಿನ ಬೆಳಗಿನ ಅಂಗಳದಲ್ಲಿ ನಿಲ್ಲಿಸಿದರು.

ಇಂದಿನ ಕಾಲಘಟ್ಟದಲ್ಲಿ ಟಿವಿ ಮಾಧ್ಯಮಗಳಲ್ಲಿ ನಡೆಯುವ ಜ್ಯೋತಿಷ್ಯ, ಪವಾಡಗಳ ಅಬ್ಬರದ ನಡುವೆ ಬಸವಣ್ಣನವರ “ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ” ಎಂಬ ಮಾತು ಅತ್ಯಂತ ಪ್ರಸ್ತುತವಾಗಿದೆ. ಶಕುನ ಮತ್ತು ಕಾಲದ ಭಯವನ್ನು ಹೋಗಲಾಡಿಸಲು “ನಾಳೆ ಬಪ್ಪುದು ನಮಗಿಂದೆ ಬರಲಿ” ಎಂಬ ಅವರ ಧೈರ್ಯ ಪ್ರತಿಯೊಬ್ಬ ನಾಗರಿಕನಿಗೂ ಅವಶ್ಯಕ. “ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ” ಎಂದು ಸಮಾಜದ ನಾಯಕರನ್ನು ಪ್ರಶ್ನಿಸುವ ಕನಕದಾಸರ ಧೈರ್ಯವು ಪ್ರಜಾಪ್ರಭುತ್ವದ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಅಸ್ತ್ರವಾಗಿದೆ.

ಬಸವಣ್ಣನವರ ರಾಜಕೀಯ ಪ್ರಜ್ಞೆಯು ಪ್ರಭುತ್ವಕ್ಕಿಂತಲೂ ಪ್ರಜೆಯ ಅಂತಃಶಕ್ತಿ ದೊಡ್ಡದು ಎಂಬ Moral Sovereignty(ನೈತಿಕ ಸಾರ್ವಭೌಮತ್ವ)ವನ್ನು ಪ್ರತಿಪಾದಿಸುತ್ತದೆ. “ಅರಸು ಮುನಿದಡೆ ನಾಡೊಳಗಿರಬಾರದಯ್ಯಾ… ಜಂಗಮ ಮುನಿದಡೆ ನಾನೆಂತು ಬದುಕುವೆ” ಎಂಬ ವಚನವು ಅತ್ಯಂತ ಕ್ರಾಂತಿಕಾರಿಯಾದುದು. ಇಲ್ಲಿ ಅರಸನು ಅಥವಾ ಸರ್ಕಾರವು ಮುನಿದರೆ(ಅನ್ಯಾಯ ಮಾಡಿದರೆ) ಒಬ್ಬ ನಾಗರಿಕನು ಬೇರೆ ರಾಜ್ಯಕ್ಕೆ ಹೋಗಿ ಬದುಕಬಹುದು, ಆದರೆ ‘ಜಂಗಮ’ ಅಂದರೆ ಸಮಾಜ ಅಥವಾ ಆತ್ಮಸಾಕ್ಷಿ ಮುನಿದರೆ ಬದುಕು ಅಸಾಧ್ಯ ಎಂಬ ತತ್ವವಿದೆ. ಬಸವಣ್ಣನವರು ರಾಜಪ್ರಭುತ್ವದ ಕಾಲಘಟ್ಟದಲ್ಲಿದ್ದರೂ, ಪ್ರಭುತ್ವದ ಅಧಿಕಾರವನ್ನು ಗೌಣವಾಗಿಸಿ, ನೈತಿಕತೆಯ ಅಧಿಕಾರವನ್ನು ಎತ್ತಿಹಿಡಿಯುತ್ತಾರೆ. “ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ” ಎನ್ನುವ ಎಚ್ಚರಿಕೆ ಅಧಿಕಾರವು ಕ್ಷಣಿಕವೆಂಬ ಸತ್ಯವನ್ನು ಸಾರುವ ಮೂಲಕ ಇಂದಿನ ರಾಜಕಾರಣಿಗಳಿಗೆ ಅತ್ಯಗತ್ಯವಾದ Humility(ವಿನಯ) ಮತ್ತು Accountability(ಉತ್ತರದಾಯಿತ್ವ)ವನ್ನು ನೆನಪಿಸುತ್ತದೆ.

ಕನಕದಾಸರ ಆಡಳಿತಾತ್ಮಕ ವಿಮರ್ಶೆಯು ಅವರ ವೈಯಕ್ತಿಕ ಅನುಭವದ ಕಹಿ ಮತ್ತು ಸಿಹಿಯಾದ ಪಾಠಗಳಿಂದ ಮೂಡಿಬಂದಿದೆ. “ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು” ಎಂಬ ಅವರ ರೂಪಕವು Rule of Law ತತ್ವದ ಅತ್ಯಂತ ತೀಕ್ಷ್ಣವಾದ ಅಭಿವ್ಯಕ್ತಿಯಾಗಿದೆ. ನ್ಯಾಯ ಮತ್ತು ಕರ್ತವ್ಯವನ್ನು ಕೈಬಿಟ್ಟ ಅರಸನಿಗೆ ಸಮಾಜದಲ್ಲಿ ಯಾವ ಬೆಲೆಯೂ ಇಲ್ಲ, ಆತ ಕೇವಲ ಮುರಿದ ಕಾಲಿನ ನಿರುಪಯೋಗಿ ಎಂಬುದು ಅವರ ನಿಷ್ಠುರವಾದ ನಿಲುವು. “ಮನ್ನಣಿಂದೆ ನಡೆಸದಿರುವ ದೊರೆಯು ಯಾತಕೆ” ಎಂಬ ಅವರ ಪ್ರಶ್ನೆಯು ಪ್ರಜೆಗಳ ಮನ್ನಣೆ ಅಥವಾ ಸಮ್ಮತಿಯೇ ಆಡಳಿತದ ಜೀವಾಳ ಎಂಬ Consent of the Governed ತತ್ವಕ್ಕೆ ದಾರಿದೀಪವಾಗಿದೆ. ಇದು ಕೇವಲ ಆಜ್ಞೆ ಮಾಡುವ ಪ್ರಭುತ್ವವಲ್ಲ, ಜನರ ವಿಶ್ವಾಸ ಗಳಿಸುವ ಪಾರದರ್ಶಕ ಆಡಳಿತದ(Transparent Governance) ಕರೆಯಾಗಿದೆ.

ಒಬ್ಬ ಸಾಮಾನ್ಯ ಪ್ರಜೆಗೂ ರಾಜನನ್ನಾಗಲಿ, ಧಾರ್ಮಿಕ ಮುಖಂಡನನ್ನಾಗಲಿ ಪ್ರಶ್ನಿಸುವ ಹಕ್ಕು ಇರಬೇಕು ಎಂಬುದು ಈ ಇಬ್ಬರು ದಾರ್ಶನಿಕರ ಸಾರವಾಗಿತ್ತು. ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿದ್ದರೂ “ಬಿಜ್ಜಳನ ಭಂಡಾರವೆನಗೇಕಯ್ಯಾ” ಎಂದು ಹೇಳುವ ಮೂಲಕ ರಾಜಾಶ್ರಯ ಮೀರಿದ ನೈತಿಕ ಸ್ವಾಭಿಮಾನವನ್ನು ತಳೆದಿದ್ದರು. ಪ್ರಭುತ್ವವು ಪ್ರಜಾಹಿತವನ್ನು ಮರೆತಾಗ ಅದು ಪತನಗೊಳ್ಳುವುದು ಅನಿವಾರ್ಯ ಎಂಬುದಕ್ಕೆ ಅವರು ಚಾಳುಕ್ಯರಾಯನ ಉದಾಹರಣೆ ನೀಡುತ್ತಾರೆ. ಮನುಷ್ಯನ ಘನತೆಗೆ ಧಕ್ಕೆ ತರುವ ಯಾವುದೇ ವ್ಯವಸ್ಥೆಯನ್ನು, ಅದು ಎಷ್ಟೇ ಪವಿತ್ರವೆಂದು ಕರೆಸಿಕೊಂಡರೂ ಧಿಕ್ಕರಿಸಬೇಕು ಎಂಬ ಅವರ ನಿಲುವು ಆಧುನಿಕ ಪ್ರಜಾಪ್ರಭುತ್ವದ ಆತ್ಮವಾಗಿದೆ. ಹೀಗೆ ಬಸವ ಮತ್ತು ಕನಕರ ರಾಜಕೀಯ ದರ್ಶನವು ನಮಗೆ ಕಲಿಸುವುದು ಒಂದೇ: ಅಧಿಕಾರ ಎನ್ನುವುದು ಜನರ ಸೇವೆಯ ಸಾಧನವಾಗಿ ಸತ್ಯ ಮತ್ತು ಧರ್ಮದ ದಾರಿಯಲ್ಲಿ ನಡೆದಾಗ ಮಾತ್ರ ಅದಕ್ಕೊಂದು ಸಾರ್ಥಕತೆ ದೊರೆಯುತ್ತದೆ.

ಬಸವಣ್ಣನವರು ಒಂದು ‘ಆದರ್ಶ ಸಮಾಜ’ ಅಥವಾ ‘ಕಲ್ಯಾಣ ರಾಜ್ಯ’ವನ್ನು(Kalyana Rajya) ‘ನಿರ್ಮಿಸಲು’(Construction) ಹೊರಟರು. ಅಂದರೆ, ಅವರು ಅಸ್ತಿತ್ವದಲ್ಲಿದ್ದ ವ್ಯವಸ್ಥೆಯನ್ನು ಕೇವಲ ಟೀಕಿಸದೆ, ಅದಕ್ಕೆ ಪರ್ಯಾಯವಾದ ಒಂದು ಹೊಸ ವ್ಯವಸ್ಥೆಯನ್ನೇ ಸೃಷ್ಟಿಸಿದರು. ಇದಕ್ಕೆ ಪ್ರತಿಯಾಗಿ ಕನಕದಾಸರು ಅಂತಹ ಸಮಾಜದಲ್ಲಿನ ಲೋಪದೋಷಗಳನ್ನು ‘ತಿದ್ದಲು’(Correction) ಶ್ರಮಿಸಿದರು. ಪ್ರಜಾಪ್ರಭುತ್ವದ ಸುಸ್ಥಿರತೆಗೆ ಈ ಎರಡೂ ಶಕ್ತಿಗಳು ಅನಿವಾರ್ಯ; ಒಂದು ವ್ಯವಸ್ಥೆಯನ್ನು ರೂಪಿಸಿದರೆ, ಮತ್ತೊಂದು ಆ ವ್ಯವಸ್ಥೆಯು ದಾರಿ ತಪ್ಪದಂತೆ ಎಚ್ಚರಿಸುತ್ತದೆ. ಬಸವಣ್ಣನವರು ‘ಕಾಯಕ’ ಮತ್ತು ‘ದಾಸೋಹ’ದಂತಹ ಆರ್ಥಿಕ ಮಾದರಿಗಳ ಮೂಲಕ ಸಮಾಜದ ಭೌತಿಕ ತಳಹದಿಯನ್ನು ಬದಲಿಸಲು ಪ್ರಯತ್ನಿಸಿದರೆ, ಕನಕದಾಸರು ‘ನೈತಿಕತೆ’ ಮತ್ತು ‘ಅಂತರಂಗ ಶುದ್ಧಿ’ಯ ಮೂಲಕ ವ್ಯಕ್ತಿಯ ಚಾರಿತ್ರ್ಯವನ್ನು ಪರಿವರ್ತಿಸಲು ಒತ್ತು ನೀಡಿದರು. ಬಸವಣ್ಣನವರನ್ನು ‘ಸಂಘಟನಾ ರಾಜಕಾರಣ’ದ(Organized Politics) ಪ್ರವರ್ತಕರೆಂದು ಕರೆದರೆ, ಕನಕದಾಸರನ್ನು ‘ಸಾಂಸ್ಕೃತಿಕ ರಾಜಕಾರಣ’ದ(Cultural Politics) ಅಪ್ರತಿಮ ಮಾದರಿ ಎಂದು ಗುರುತಿಸಬಹುದು.

ಬಸವಣ್ಣ ಮತ್ತು ಕನಕದಾಸರ ಅಂಕಿತನಾಮಗಳು ಕೇವಲ ದೈವಿಕ ಸಂಕೇತಗಳಾಗಿ ಉಳಿಯದೆ, ಒಂದು ಆದರ್ಶ ಸಮಾಜದ ತಾತ್ವಿಕ ಕೇಂದ್ರಬಿಂದುಗಳಾಗಿ ಮಾರ್ಪಡುತ್ತವೆ. ಬಸವಣ್ಣನ ‘ಕೂಡಲಸಂಗಮದೇವ’ ಎಂಬ ಅಂಕಿತವು ಕೇವಲ ದೇವರ ಹೆಸರಲ್ಲ; ಅದು ಸಮುದಾಯಗಳ ಸಂಗಮ, ಧರ್ಮಗಳ ಸಂಗಮ, ವಿಚಾರದ ಸಂಗಮ ಮತ್ತು ಕ್ರಿಯೆಗಳ ಸಂಗಮದ ಸಂಕೇತವಾಗಿ ಕಾಣುತ್ತದೆ. ಪ್ರಜಾಪ್ರಭುತ್ವದ ಯಶಸ್ಸು ಇರುವುದೇ ಇಂತಹ ವೈವಿಧ್ಯಮಯ ಸಂಗಮಗಳಲ್ಲಿ. ಬಸವಣ್ಣನವರ ಈ ಅಂಕಿತವು ವ್ಯಕ್ತಿಗತ ಅಹಂಕಾರವನ್ನು ಕಳಚಿಕೊಂಡು ‘ಸಮೂಹ ಪ್ರಜ್ಞೆ’ಯೊಂದಿಗೆ ಬೆರೆಯುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಸಂವಿಧಾನವು “ಭಾರತದ ಜನಗಳಾದ ನಾವು” ಎಂದು ಹೇಳುವಾಗ ಯಾವ ಸಾಮೂಹಿಕ ಶಕ್ತಿಯನ್ನು ಉದ್ದೇಶಿಸುತ್ತದೋ, ಆ ಶಕ್ತಿಯೇ ಬಸವಣ್ಣನವರ ‘ಕೂಡಲಸಂಗಮ’. ಇದು ಕೇವಲ ಭಕ್ತಿಯಲ್ಲ, ಬದಲಾಗಿ ವಿಚಾರ ಮತ್ತು ಕ್ರಿಯೆಗಳು ಒಂದಾಗಿ ಸಮಾಜದ ಹಿತಕ್ಕಾಗಿ ಶ್ರಮಿಸುವ ಒಂದು ‘ಸಂಗಮ ತತ್ವ’.

ಅದೇ ರೀತಿ, ಕನಕದಾಸರು ಕಂಡ ‘ಕಾಗಿನೆಲೆಯ ಆದಿಕೇಶವ’ ಕೇವಲ ಒಬ್ಬ ದೇವನಲ್ಲ; ಅವನು ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಆತ್ಮಸಾಕ್ಷಿ ಮತ್ತು ಸತ್ಯದ ಸಂಕೇತ. ಸಂವಿಧಾನವು ನಮಗೆ ನೀಡುವ ವೈಚಾರಿಕ ಸ್ವಾತಂತ್ರ್ಯ ಮತ್ತು ನೈತಿಕ ಹೊಣೆಗಾರಿಕೆಗಳು ಈ ‘ಆತ್ಮಸಾಕ್ಷಿ’ಯ ಮೇಲೆಯೇ ನಿಂತಿವೆ. ಕನಕದಾಸರ ಆದಿಕೇಶವನು ಹೊರಗಿನ ಗುಡಿಯಲ್ಲಿಲ್ಲ, ಬದಲಾಗಿ ಅನ್ಯಾಯವನ್ನು ಪ್ರಶ್ನಿಸುವ ಮತ್ತು ಸತ್ಯದ ಪರ ನಿಲ್ಲುವ ಪ್ರತಿಯೊಬ್ಬ ನಾಗರಿಕನ ಅಂತರಂಗದಲ್ಲಿದ್ದಾನೆ. ಇದು ಪ್ರಜಾಪ್ರಭುತ್ವದಲ್ಲಿ ಅತ್ಯಗತ್ಯವಾದ ‘ಆತ್ಮಾವಲೋಕನ’ದ ಮಾದರಿಯಾಗಿದೆ.

ಈ ಅಂಕಿತನಾಮಗಳು ಸೂಚಿಸುವ ‘ಸಂಗಮ’ ಮತ್ತು ‘ಸತ್ಯ’ದ ಹಾದಿಯೇ ನಮ್ಮ ಸಂವಿಧಾನದ ಅಲಿಖಿತ ಆತ್ಮವಾಗಿದೆ. ಪ್ರಜಾಪ್ರಭುತ್ವವು ಕೇವಲ ಅಧಿಕಾರ ಚಲಾಯಿಸುವ ವ್ಯವಸ್ಥೆಯಾಗದೆ,

ಇಲ್ಲಿ ಒಂದು ಪ್ರಶ್ನೆಯನ್ನು ನಾವು ಎದುರಿಸಬೇಕಾಗುತ್ತದೆ: ಈ ಇಬ್ಬರ ಕ್ರಾಂತಿ ಸಂಪೂರ್ಣಗೊಂಡಿತೇ? ವಾಸ್ತವವಾಗಿ, ಬಸವಣ್ಣನವರ ಕಲ್ಯಾಣ ಕ್ರಾಂತಿಯ ಸ್ವಪ್ನವು ಅರ್ಧ ಸಾಕಾರಗೊಂಡು ಉಳಿದರ್ಧ ಅಪೂರ್ಣವಾಗಿ ಉಳಿಯಿತು. ಅಂದು ಮಾದಾರ ಚೆನ್ನಯ್ಯ ಮತ್ತು ಕಿನ್ನರ ಬೊಮ್ಮಯ್ಯನವರನ್ನು ಅಪ್ಪಿಕೊಂಡ ಸಮಾಜ, ಶರಣರ ನಿಧನಾನಂತರ ಮತ್ತೆ ಜಡತ್ವಕ್ಕೆ ಮರಳಿತು. ಕನಕದಾಸರ ಜಾತಿ ವಿರೋಧಿ ನಿಲುವಿಗೆ ಅಂದು ಉಡುಪಿ ದೇವಸ್ಥಾನ ಪ್ರವೇಶ ನಿರಾಕರಿಸಲ್ಪಟ್ಟಿತು. ಆದರೆ ಈ ‘ಅಪೂರ್ಣ ಕ್ರಾಂತಿ’ಯೇ(Incomplete Revolution) ಅವರ ಸಂದೇಶದ ಶಾಶ್ವತತೆಗೆ ಕಾರಣವಾಗಿದೆ. ಯಾವ ಕ್ರಾಂತಿ ಸಂಪೂರ್ಣಗೊಳ್ಳುತ್ತದೆಯೋ ಅದು ಇತಿಹಾಸದ ಒಂದು ಅಧ್ಯಾಯವಾಗಿ ಮ್ಯೂಸಿಯಂ ಸೇರುತ್ತದೆ; ಆದರೆ ಅಪೂರ್ಣ ಕ್ರಾಂತಿ ಮಾತ್ರ ಪ್ರತಿ ತಲೆಮಾರಿನ ಆಯ್ಕೆ ಮತ್ತು ಜವಾಬ್ದಾರಿಯಾಗಿ ನಿರಂತರವಾಗಿ ಉಳಿಯುತ್ತದೆ. ಇಂದಿನ ಸಂವಿಧಾನ ಕೂಡ ಈ ‘ಅಪೂರ್ಣ ದಾಖಲೆ’ಯನ್ನು ಕಾನೂನುಬದ್ಧಗೊಳಿಸಿ, ಹಕ್ಕುಗಳನ್ನು ನೀಡುವ ಮೂಲಕ ಪೂರ್ಣತೆಯ ಹಾದಿಯಲ್ಲಿ ಸಾಗುತ್ತಿದೆ. ಆದರೆ ಅವುಗಳು ಪ್ರತಿ ನಾಗರಿಕನ ಬದುಕಿನಲ್ಲಿ ನೈಜ ಘನತೆಯಾಗಿ ಮಾರ್ಪಡಲು ಇನ್ನೂ ದೀರ್ಘ ಹಾದಿ ಕ್ರಮಿಸಬೇಕಿದೆ.

ಇಂದಿನ ಸಂವಿಧಾನದ ಮೌಲ್ಯಗಳು ಬಿಕ್ಕಟ್ಟಿನಲ್ಲಿವೆ. ಅಂದು ಬಸವಣ್ಣನವರ ಸಮಾನತೆಯ ತತ್ವವನ್ನು ವಿರೋಧಿಸಿದ ಪಟ್ಟಭದ್ರ ಹಿತಾಸಕ್ತಿಗಳೇ ಇಂದು ಸಂವಿಧಾನದ ಆಶಯಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ ಎಂಬುದು ಕಟು ಸತ್ಯ. ಶ್ರೇಣೀಕೃತ ವ್ಯವಸ್ಥೆಯನ್ನು(Hierarchical System) ಬಯಸುವವರು ಅಂದು ಬಸವಣ್ಣನವರನ್ನು ದ್ವೇಷಿಸಿದ್ದರು, ಇಂದು ಸಂವಿಧಾನವನ್ನು ದ್ವೇಷಿಸುತ್ತಿದ್ದಾರೆ. ಅಂದು ಕಲ್ಯಾಣದಲ್ಲಿ ಹರಿಯಬಿಟ್ಟ ರಕ್ತದ ಕಲೆಗಳು ಇಂದು ಸಂವಿಧಾನದ ಮೂಲ ಆಶಯಗಳನ್ನು ಬುಡಮೇಲು ಮಾಡುವ ಪ್ರಯತ್ನಗಳ ರೂಪದಲ್ಲಿ ಗೋಚರಿಸುತ್ತಿವೆ. ಆದ್ದರಿಂದ ಸಂವಿಧಾನವನ್ನು ರಕ್ಷಿಸುವುದೆಂದರೆ ಬಸವಣ್ಣ ಮತ್ತು ಕನಕದಾಸರ ತತ್ವಗಳನ್ನು ರಕ್ಷಿಸಿದಂತೆ.

ಬಸವಣ್ಣ-ಕನಕದಾಸರನ್ನು ಕೇವಲ ಒಂದೊಂದು ಜಾತಿಗೆ ಸೀಮಿತಗೊಳಿಸದೆ, ಅವರನ್ನು ‘ಸಂವಿಧಾನದ ಆದ್ಯ ಪ್ರವರ್ತಕ’ರನ್ನಾಗಿ ಕಾಣಬೇಕಾದ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಾಗಿದೆ.

ಪ್ರಜಾಪ್ರಭುತ್ವ ಎಂದರೆ ಕೇವಲ ಮತ ಚಲಾಯಿಸುವ ಹಕ್ಕಲ್ಲ; ಅದು ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿ ಮಾನವ ಘನತೆಯನ್ನು(Human Dignity) ಹೊಂದಿರಬೇಕು ಎಂಬ ನಿರಂತರ ಆಶಯ. ಬಸವಣ್ಣನವರ ವಚನಗಳ ನೆಲೆಯಲ್ಲಿ ಪ್ರಜಾಪ್ರಭುತ್ವ ಎಂದರೆ ‘ಅರಿವಿನ ಸಮಾನತೆ’ ಮತ್ತು ‘ಅಸ್ತಿತ್ವದ ಮನ್ನಣೆ’. ಸಂವಿಧಾನವು ಕಾಗದದ ಮೇಲಿನ ಅಕ್ಷರಗಳಾದರೆ, ವಚನ ಮತ್ತು ಕೀರ್ತನೆಗಳು ಮಾನವ ಆತ್ಮದ ಮೇಲಿನ ಬರಹಗಳಾಗಿವೆ.

(ನೆನ್ನೆ ಜಮಖಂಡಿಯಲ್ಲಿ “ಬಸವಣ್ಣ-ಕನಕದಾಸರಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು” ಎಂಬ ವಿಷಯ ಕುರಿತು ಆಡಿದ ಕೆಲವು ಮಾತುಗಳ ಬರೆಹ ರೂಪ. ಇಪ್ಪತ್ತು ಪುಟಗಳ ದೀರ್ಘ ಬರೆಹವನ್ನೂ ಸಿದ್ಧಪಡಿಸಿದ್ದೇನೆ. ಅದರಿಂದ ಆಯ್ದ ಕೆಲವು ಪ್ಯಾರಾಗಳನ್ನು ಇಲ್ಲಿ ಹಾಕಿರುವೆ.)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಊರಗಡೂರಿನ ಮೃತ ವಿದ್ಯಾರ್ಥಿ ಸಂಕೇತ್ ಮನೆಗೆ ಸಂಸದ ರಾಘವೇಂದ್ರ ಭೇಟಿ. ಕುಟುಂಬಸ್ಥರಿಗೆ ಸಾಂತ್ವನ.

B. Y. Raghavendra ಶಿವಮೊಗ್ಗದ ಊರುಗಡೂರಿನ ಸೂಳೆಬೈಲಿನಲ್ಲಿ ಗಾಂಜಾ ನಶೆಯಲ್ಲಿದ್ದ ಮತಾಂಧ...

Prof. K. Ramakrishnaiah ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿಯ ನೂತನ ಕುಲಪತಿಗಳಾಗಿ ಪ್ರೊ.ಕೆ.ರಾಮಕೃಷ್ಣಯ್ಯ ನೇಮಕ.

Prof. K. Ramakrishnaiah ನಾಡಿನ ಖ್ಯಾತ ರಂಗಕರ್ಮಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ...

BMTC ಬೆಎಂಟಿಸಿ ಸಂಸ್ಥೆಯ ಮೃತ ನೌಕರರ ಅವಲಂಬಿತರಿಗೆ ಅನುಕಂಪಾಧಾರಿತ ನೇಮಕಾತಿ ಆದೇಶ,ಪರಿಹಾರ ವಿತರಣೆ.

BMTC ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ದಿನಾಂಕ 21 ಫೆಬ್ರವರಿ...

JNNCE ವಿಶ್ವದರ್ಜೆಯ ಮೂಳೆ ಚಿಕಿತ್ಸೆ ನೀಡಿದ ಕಲ್ಬುರ್ಗಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ವೈದ್ಯರ ತಂಡ.

JNNCE ಪ್ರತಿಷ್ಠಿತ ನಾರಾಯಣ ಹೆಲ್ತ್ ಸಿಟಿಯು ಕಳೆದ ಮೂರು ವರ್ಷಗಳಲ್ಲಿ 10,000...