Kuvempu ಶಿವಮೊಗ್ಗ ಎಲ್ಲಾ ಸಮಾಜಗಳಿಗೆ ಹಾಗೂ ಎಲ್ಲಾ ಕಾಲಕ್ಕೂ ಸಲ್ಲುವ ವಿಶ್ವಮಾನ ಸಂದೇಶವನ್ನು ಕುವೆಂಪು ಅವರು ನೀಡಿದ್ದಾರೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಹೇಳಿದ್ದಾರೆ.
ಶಿವಮೊಗ್ಗ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನೇಟಿವ್ ಥಿಯೇಟರ್ ನ ʻಬಾ ಇಲ್ಲಿ ಸಂಭವಿಸುʼ ವಿಭಿನ್ನ ರಂಗ ಪ್ರಯೋಗಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುವೆಂಪು ಅವರ 121ನೇ ಜನ್ಮದಿನ ಹಾಗೂ ವಿಶ್ವಮಾನವ ದಿನಾಚರಣೆ ಅಂಗವಾಗಿ ಈ ಪ್ರದರ್ಶನ ಆಯೋಜನೆ ಮಾಡಲಾಗಿತ್ತು.
ನಮಗೆ ಬೇಕಾದುದು ಆ ಮತ ಈ ಮತ ಅಲ್ಲ, ಮನುಜ ಮತ. ಆ ಪಥ, ಈ ಪಥ ಅಲ್ಲ ವಿಶ್ವಪಥ. ನಮಗೆ ಬೇಕಾದದ್ದು ಸರ್ವರ ಉದಯ. ಸರ್ವೋದಯ ಎಂದು ಕುವೆಂಪು ಹೇಳಿದ್ದಾರೆ. ಇದು ವರ್ತಮಾನಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಚಿಂತನೆಯಾಗಿದೆ. ಇಂಥ ಆಶಯಗಳನ್ನು ಸಮಾಜದ ಎಲ್ಲಾ ವರ್ಗಗಳಿಗೂ ಮುಟ್ಟಿಸುವ ಪ್ರಯತ್ನ ನಿರಂತರವಾಗಬೇಕು ಎಂದರು.
Kuvempu ಕುವೆಂಪು ಅವರು ಎಲ್ಲಾ ಕಾಲಕ್ಕೂ ಎಲ್ಲಾ ಸಮಾಜಕ್ಕೂ ಪ್ರಸ್ತುತವಾಗುವ ಸಾಹಿತಿ. ಈ ನಿಟ್ಟಿನಲ್ಲಿ ಕುವೆಂಪು ಅವರ ಸಾಹಿತ್ಯ, ನಾಟಕ, ವಿಚಾರ ಸಾಹಿತ್ಯವನ್ನು ಯುವಜನತೆಗೆ ಮುಟ್ಟಿಸುವ ಪ್ರಯತ್ನಗಳು ಎಲ್ಲೇ ನಡೆಯುವ ಚಟುವಟಿಕೆಗಳನ್ನು ಪ್ರತಿಷ್ಠಾನ ಬೆಂಬಲಿಸುತ್ತದೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ರಂಗಾಯಣ ಸಹಕಾರದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿತ್ತು. ʻಬಾ ಇಲ್ಲಿ ಸಂಭವಿಸುʼ ಕುವೆಂಪು ಕೃತಿಗಳಲ್ಲಿನ ಪ್ರಮುಖ ಪಾತ್ರಗಳ ವಿಭಿನ್ನ ರಂಗಪ್ರಸ್ತುತಿಯನ್ನು ಪತ್ರಕರ್ತ ಆರ್.ಎಸ್. ಹಾಲಸ್ವಾಮಿ ನಿರ್ದೇಶನ ಮಾಡಿದ್ದರು. ತೀರ್ಥಹಳ್ಳಿಯ ಶ್ರೀಪಾದ್ ಹಾಗೂ ಶಿವಕುಮಾರ್ ಅವರು ಸಂಗೀತ ನೀಡಿದ್ದರು.
ಶಂಕರ್ ಬೆಳಲಕಟ್ಟೆ ಅವರು ರಂಗ ಸಜ್ಜಿಕೆ ಹಾಗೂ ಬೆಳಕಿನ ವಿನ್ಯಾಸ ರೂಪಿಸಿದ್ದರು. ಡಾ. ನಾಗಭೂಷಣ್, ಡಾ. ಭಾರತೀ ದೇವಿ, ಡಾ. ಹರ್ಷಿತಾ, ಭಾಗ್ಯ ಎಂ.ಟಿ. ಮಲ್ಲಿಕಾರ್ಜುನ ತುರವನೂರು, ಕೀರ್ತನಾ, ನದಿ ಹೆಚ್.ಪಿ. ಪ್ರಮುಖ ಪಾತ್ರ ನಿರ್ವಹಿಸಿದ್ದರು.
