Amruthapura ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಹೆಮ್ಮೆಯ ಅರಸರು ಎಂದರೆ ಹೊಯ್ಸಳ ಸಾಮ್ರಾಜ್ಯದ ಅರಸರು. ಆಡಳಿತದ ಜೊತೆ ಜೊತೆಗೆ, ಶಿಲ್ಪಕಲೆ, ಸಂಸ್ಕೃತಿಗಳ ಪೋಷಕರೂ, ಆಗಿದ್ದವರು ಹೊಯ್ಸಳ ದೊರೆಗಳು, ತಮ್ಮನ್ನು ತಾವು ವಾಸಂತಿಕಾದೇವಿವರಲಬ್ಧ ಪ್ರಸಾದರೆಂದೂ, ದ್ವಾರಾಪುರಾವರಾಧೀಶ್ವರರೆಂದೂ (ಯಾದವಕುಲತಿಲಕ ಶ್ರೀಕೃಷ್ಣನಿಗೆ ಸಮೀಕರಿಸಿಕೊಂಡವರು,) ಛಲದಲ್ಲೂ, ಬಲದಲ್ಲೂ, ಏಕಮೇವಾದ್ವಿತೀಯರೆನಿಸಿಕೊಂಡವರು ಹೊಯ್ಸಳ ರು. ಹೊಯ್ಸಳರ ಅರಸರಲ್ಲಿ ಎರಡನೇ ಬಲ್ಲಾಳರು ನೂರಾರು ದೇವಾಲಯಗಳನ್ನು ನಿರ್ಮಿಸಿದವರು ಅಲ್ಲದೇ ಅಗ್ರಹಾರಗಳನ್ನೂ, ಯಾತ್ರಿನಿವಾಸಗಳನ್ನೂ, ಯಾತ್ರಿಕರಿಗೆ ಸುಂಕವನ್ನು ವಿಧಿಸದೆ ದೇವಾದಾಯ, ರಾಜಾದಾಯಗಳಿಂದ ಕರ್ನಾಟಕದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು(ಇದರ ಬಗ್ಗೆ ಹೆಬ್ಬಾಲೆ ಶಾಸನವನ್ನು ಅಧ್ಯಯನ ಮಾಡಿ) ಹೊಯ್ಸಳ ದೊರೆ ಗಳು. ದೊರೆಗಳಲ್ಲದೆ ದೊರೆಗಳ ಖಾಸಾ ವ್ಯಕ್ತಿಗಳು, ಆಶ್ರಿತ ಕವಿಗಳೂ, ದಂಡನಾಯಕರೂ ಸಹ ಕರ್ನಾಟಕದ ಮೂಲೆಮೂಲೆಗಳಲ್ಲಿ ದೇವಾಲಯಗಳನ್ನೂ, ಅಗ್ರಹಾರಗಳನ್ನೂ, ಅರವಟಿಗೆಗಳನ್ನೂ ನಿರ್ಮಿಸಿದ್ದು ಅದರಲ್ಲಿ ಭದ್ರಾ ನದಿಯ ದಡದಲ್ಲಿರುವ ತರೀಕೆರೆಯ ಅಮೃತಾಪುರದ ಅಮೃತೇಶ್ವರ ದೇವಾಲಯವೂ ಒಂದು. ಅಮೃತೇಶ್ವರ ದೇವಾಲಯವನ್ನು ಎರಡನೇ ವೀರಬಲ್ಲಾಳನ ದಂಡನಾಯಕನಾದ ಅಮೃತೇಶ್ವರ ನು ಕ್ರಿ.ಶ.1196 ರಲ್ಲಿನಿರ್ಮಿಸಿ ಇದಕ್ಕಾಗಿ ಭೂ ದಾನವನ್ನೂ ಮಾಡಿದ್ದನೆಂದು, ಶಾಸಗಳಿಂದ ತಿಳಿಯಬಹುದು. ಶಿಲ್ಪಕಲೆಗೆ ಹೆಸರಾದ ಪ್ರಮುಖ ದೇವಾಲಯ ಇದಾಗಿದ್ದು ದೇವಾಲಯದ ಹೊರ ಭಿತ್ತಿ ಯಲ್ಲಿ ರಾಮಾಯಣ, ಮಹಾಭಾರತ, ಭಾಗವತದ ಎಲ್ಲ ಬಗೆಯ ಶಿಲ್ಪಗಳನ್ನು ಕೆತ್ತಲಾಗಿದ್ದು, ದೇವಾಲಯದ ಸುಖನಾಸಿಯ ಮೇಲ್ಭಾಗದಲ್ಲಿ ನಟರಾಜನ ನೃತ್ಯಭಂಗಿಯ ಕೆತ್ತನೆಯಂತೂ ಶಿಲ್ಪಿಯ ನೈಪುಣ್ಯತೆಯನ್ನು, ಸೂಕ್ಷ್ಮತೆಯನ್ನು ಕಾಣಬಹುದು. ಹೊರಭಾಗದ ಭಿತ್ತಿಯ ಲ್ಲಿ ಕೃಷ್ಣನಿಗೆ ಸಂಬಂಧಿಸಿದ ಕೆತ್ತನೆಗಳು ಕಣ್ಮನ ಸೆಳೆಯುತ್ತದೆ. ಶ್ರೀಕೃಷ್ಣನ ಜನ್ಮಸಮಯದಲ್ಲಿ ವಸುದೇವನು ಕತ್ತೆಯ ಕಾಲನ್ನು ಹಿಡಿದು ಅರಚದಂತೆ ಬೇಡಿಕೊಳ್ಳುವ ಕೆತ್ತನೆಯಂತೂ ಶಿಲ್ಪಿಯ ಕಲೆಯ ನೈಪುಣ್ಯತೆ ಬಗ್ಗೆ ಅಚ್ಚರಿ ಮೂಡಿಸುತ್ತದೆ. (ದೇವಕಿ, ವಸುದೇವರಿಗೆ ಜನಿಸುವ ಮಕ್ಕಳನ್ನು ಕಂಸನು ಕೊಲ್ಲುತ್ತಿದ್ದದ್ದು ಅವನಿಗೆ ಮಕ್ಕಳು ಜನಿಸುವ ವಿಚಾರ ತಿಳಿಯುತ್ತಿದ್ದದ್ದು ಕತ್ತೆಯ ಅರಚುವಿಕೆಯಿಂದಾಗಿ, ಹಾಗಾಗಿ ಕಾರ್ಯವಾಸಿ ಕತ್ತೆಕಾಲು ಹಿಡಿಯಬೇಕೆಂಬ ಗಾದೆ ಜನಜನಿತವಾಗಿದೆ). ಪುಟ್ಟ ಶ್ರೀಕೃಷ್ಣ ಬೆಣ್ಣೆ ಕದಿಯಂತೆ ಬೆಣ್ಣೆ ಕಡೆಯುವ ಕೋಲಿಗೂ, ಒರಳಿಗೂ ಹಗ್ಗದಿಂದ ಕಟ್ಟಿ ಹಾಕುವ ದೇವಕಿಯ ಶಿಲ್ಪ ಕೆತ್ತನೆಯಂತೂ ಬಾಲ ಕೃಷ್ಣನ ಲೀಲೆಗಳನ್ನು ಕಣ್ತುಂಬಿಸಿಕೊಳ್ಳಬಹುದು. (ಜಾತ್ರೆಗಾಗಿ ಜಾತಕ ಪಕ್ಷಿಯಂತೆ ಕಾಯಬೇಕು, ಭಗವಂತನ ದರ್ಶನಕ್ಕೆ ನಂದಿಯಂತೆ ಸಹನೆ ಇರಬೇಕು, ಭಗವಂತನಿಗೆ ಪ್ರದಕ್ಷಿಣೆ ಹಾಕಲು ಗರುಡನಂತೆ ಏಕತಾನತೆ ಇರಬೇಕು.)
Amruthapura ಈ ಅಮೃತೇಶ್ವರನ ಮೂರ್ತಿಯು ದೂರದ ನೇಪಾಳದ ಗಂಡಕೀ ನದಿಯಿಂದ ತಂದಂತಹ ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದ್ದು ಒಂದೇ ಶಿಲೆಯಲ್ಲಿ ಬ್ರಹ್ಮ, ವಿಷ್ಣು, ಶಿವನನ್ನು ಕಾಣಬಹುದು. ಇಲ್ಲಿ ಅಮೃತೇಶ್ವರ ಪ್ರಮುಖನಾದರೂ ಬ್ರಹ್ಮನಿಗೆ ಅಗ್ರಸ್ಥಾನ ವಿದ್ದು (ಪ್ರಖಾಂಡ ಪಂಡಿತರು, ಅಧ್ಯಾಪಕರು, ಶಿಕ್ಷಣಾರ್ಥಿಗಳೂ 24 ಬ್ರಾಹ್ಮಣ ಕುಟುಂಬಗಳು ಇದ್ದ ಕಾರಣಕ್ಕಾಗಿ ಅಮೃತೇಶ್ವರ ದಂಡನಾಯಕನು ಇಂದಿನ ಅಮೃತಾಪುರಕ್ಕೆ ಬ್ರಹ್ಮಪುರಿ ಅಗ್ರಹಾರವೆಂದು ನಾಮಕರಣ ಮಾಡಿದ್ದನೆಂದು ಶಾಸನದಿಂದ ತಿಳಿದುಬರುತ್ತದೆ.) ಅದಕ್ಕಾಗಿ ಈಶ್ವರನ ಜೊತೆಗೆ ಪಾರ್ವತಿ ಇರದೆ ಶಾರದೆಯನ್ನು ಸ್ಥಾಪಿಸಲಾಗಿದ್ದು, ಈ ಶಾರದೆಯ ಅನುಗ್ರಹದಿಂದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಆರಂಭಿಸಲು, ಮದುವೆಯಾಗದವರು ಶಾರದೆಗೆ ಬಳೆಗಳನ್ನು ಕೊಡುವ ಹರಕೆ ಹೊತ್ತರೆ ಮದುವೆಯಾಗುವುದೆಂದು ಪ್ರತೀತಿ ಇದೆ..
ದೇವಾಲಯದ ರಚನೆಯು ಹೊಯ್ಸಳ ಶೈಲಿಯ ನಕ್ಷತ್ರಾಕಾರದ ಜಗತಿಯ ಮೇಲೆ ರಚಿತವಾಗಿದ್ದು ಗೋಪುರದಲ್ಲಿ ಹೊಯ್ಸಳನ ಲಾಂಛನವಿದ್ದು ಒಟ್ಟು 52 ಕಂಬಗಳಿಂದ ನಿರ್ಮಿತವಾಗಿದ್ದು ಪ್ರತಿಯೊಂದೂ ಕಂಬವೂ ವಿಭಿನ್ನತೆಯನ್ನು ಹೊಂದಿದೆ. ಒಟ್ಟು 250 ಗೋಪುರವನ್ನು ನಿರ್ಮಿಸಲಾಗಿದೆ. ಅಮೃತೇಶ್ವರನ ಸನ್ನಿಧಿಯಲ್ಲಿ (ಹಲವು ಈಶ್ವರನ ದೇವಾಲಯಗಳಲ್ಲಿದ್ದಂತೆ) ಮಕರಸಂಕ್ರಾಂತಿಯಂದು ಸೂರ್ಯನ ಮೊದಲ ಕಿರಣವು ತ್ರಿಮೂರ್ತಿ ಗಳ ಪಾದಸ್ಪರ್ಶಮಾಡುತ್ತಾನೆ.
ಅದ್ಭುತ ಶಿಲ್ಪಕಲೆಯನ್ನು ಹೊಂದಿರುವ ಅಮೃತೇಶ್ವರ ದೇವಾಲಯದ ಛಾವಣಿಯ ಕೆತ್ತನೆ ಕೆಲಸವನ್ನು ಮಾಡುವ ಮೂಲಕ ತನ್ನ ಮೊದಲ ಶಿಲ್ಪಕಲೆಯ ವೃತ್ತಿಯನ್ನು ಅಪ್ರತಿಮನೂ ಪ್ರಾತಃಸ್ಮರಣೀಯ ಶಿಲ್ಪಿ ಯೂ ಆಗಿದ್ದ ಮಲ್ಲಿತಮ್ಮನು ಆಭಿಸಿದನೆಂದು ತಿಳಿಯುತ್ತದೆ. ಈ ದೇವಾಲಯದ ನಾಲ್ಕೂ ದಿಕ್ಕನ್ನು ವೀಕ್ಷಿಸಿದರೆ ಶಿಲ್ಪಿ (ಸ್ಥಪತಿ) ಗೆ ಇದ್ದ ಗಣಿತ ಸೂತ್ರ, ಸೂರ್ಯಚಲನೆಯ ಸಿದ್ಧಾಂತ, ವಿಜ್ಞಾನದ ಬಗ್ಗೆ ಇದ್ದ ಜ್ಞಾನವನ್ನು ಅರಿಯಬಹುದು. ಇದರ ಬಗ್ಗೆ ಕನ್ನಡದ ಕವಿ ಜನ್ನನು ರಚಿಸಿದ ಶಾಸನದಿಂದ ತಿಳಿದುಬರುತ್ತದೆ. ದೇವಾಲಯದ ಇನ್ನೊಂದು ವಿಶೇಷವೆಂದರೆ 200 ವರ್ಷಗಳಿಂದ ನಿರಂತರವಾಗಿ ಉರಿಯುತ್ತಿರುವ ನಂದಾದೀಪವಿದ್ದು ದೇವಾಲಯದ ಸೌಂದರ್ಯವನ್ನು, ಪೂರ್ವಿಕರ ಭಕ್ತಿ, ಭಾವಗಳನ್ನು ಅರಿಯಬಹುದಾಗಿದೆ.ನಮ್ಮ ಹೆಮ್ಮೆ ನಮ್ಮ ಸಂಸ್ಕೃತಿ ನಮ್ಮ ಕರ್ನಾಟಕ ನಮ್ಮಹೆಮ್ಮೆ, ನಮ್ಮದೇವಾಲಯಗಳುನಮ್ಮ ಹೆಮ್ಮೆ, ನಮ್ಮಶಿಲ್ಪಿಗಳು ಅಮರಶಿಲ್ಪಿಗಳು.
ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಆದ್ಯಯನ ವೇದಿಕೆ,(ನೋಂ) ಶಿವಮೊಗ್ಗ.
6361124316
