Rotary Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಚಂದ್ರಶೇಖರ್ ಹೇಳಿದರು.
ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ರೋಟರಿ ಜಿಲ್ಲಾ ಮಲೆನಾಡು ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆ, ಫಿಟ್‌ನೆಸ್, ಆರೋಗ್ಯ ಹಾಗೂ ರೋಟರಿಯ ಸೇವಾ ಮೌಲ್ಯಗಳ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಸೊಗಾನೆ ಗ್ರಾಮದ ಬಾಸ್ಕೆಟ್‌ಬಾಲ್ ತಾರೆ ಸಹನಾ ಗೌಡ ಅವರನ್ನು ಎಲ್ಲ ಸ್ಪರ್ಧಾಳುಗಳ ಸಮ್ಮುಖದಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಕ್ರೀಡೆಯನ್ನೇ ಜೀವನ ಗುರಿಯನ್ನಾಗಿ ಮಾಡಿಕೊಂಡಿರುವ ಸಹನಾ ಅವರು ಮಹಿಳಾ ಏಷ್ಯಾ ಕಪ್ 2021 ಹಾಗೂ 19ನೇ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ರಾಷ್ಟ್ರೀಯ ಚಾಂಪಿಯನ್‌ಶಿಪ್, ಖೇಲೋ ಇಂಡಿಯಾ ಯೂತ್ ಗೇಮ್ಸ್ ಮತ್ತು ಆಲ್ ಇಂಡಿಯಾ ಟೂರ್ನಮೆಂಟ್‌ಗಳಲ್ಲಿ ಕರ್ನಾಟಕ ಪರವಾಗಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಶಿಸ್ತು ಮತ್ತು ಪರಿಶ್ರಮದ ಗೌರವವಾಗಿ ಭಾರತ ಸರ್ಕಾರ ಇನ್‌ಕಮ್ ಟ್ಯಾಕ್ಸ್ ಆಫೀಸರ್ ಆಗಿ ನೇಮಕ ನೀಡಿರುವುದು ವಿಶೇಷ.
Rotary Shivamogga ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್, ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ನಾಗರಾಜ್ ಎಸ್.ಆರ್, ಜಿಲ್ಲಾ ಸ್ಪೋರ್ಟ್ಸ್ ಚೇರ್ಮನ್ ರವಿ ಕೋಟೋಜಿ, ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ವಿಶ್ವನಾಥ ನಾಯಕ, ಇವೆಂಟ್ ಚೇರ್ಮನ್ ಸಿ.ಎನ್.ಮಲ್ಲೇಶ್, ಶಂಕರ್, ಆನಂದ್ ಮೂರ್ತಿ, ಸರ್ಜಾ ಜಗದೀಶ್ ಉಪಸ್ಥಿತರಿದ್ದರು.
