Gavisiddeshwara Fair Festival ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು 2026ರ ಜನವರಿ 5ರಿಂದ ಆರಂಭವಾಗಿ 15 ದಿನಗಳ ಕಾಲ ಭವ್ಯವಾಗಿ ಜರುಗಲಿದೆ. ಈ ಬಾರಿಯ ಜಾತ್ರೆಯಲ್ಲಿ ಸುಮಾರು ಎಂಟು ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕಂತೆ ಜಿಲ್ಲಾಡಳಿತ ಹಾಗೂ ಗವಿಸಿದ್ದೇಶ್ವರ ಸಂಸ್ಥಾನವು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಸಂಸ್ಥಾನದ ಶ್ರೀ ಗವಿಮಠದ ಜಾತ್ರೆ ಪ್ರತಿವರ್ಷವೂ ವಿಭಿನ್ನ, ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿದ್ದು, ಈ ಬಾರಿ ಆಧುನಿಕತೆಯ ಸ್ಪರ್ಶದೊಂದಿಗೆ 2026ರ ಮಹಾಜಾತ್ರೆಯ ಆಹ್ವಾನವನ್ನು ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯಕ್ಕೆ ಕೈಹಾಕಲಾಗಿದೆ.
ಡಿಜಿಟಲ್ ತಂತ್ರಜ್ಞಾನದಲ್ಲಿ ಜಾತ್ರೆಯ ಆಹ್ವಾನ
ಜನವರಿ 05, 06 ಹಾಗೂ 07ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ದೃಶ್ಯವನ್ನು ಡ್ರೋನ್ ಕ್ಯಾಮರಾ ಮೂಲಕ ಸೆರೆಹಿಡಿದು, ಡಿಜಿಟಲ್ ತಂತ್ರಜ್ಞಾನ ಬಳಸಿ ತಯಾರಿಸಲಾದ ಟ್ರೇಲರ್ ಸಾಂಗ್ ಅನ್ನು ಇಂದು 19-12-2025 ಬೆಳಿಗ್ಗೆ 09:00 ಗಂಟೆಗೆ ಶ್ರೀಮಠದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಸೇವಕರಿಂದ ಬಿಡುಗಡೆಗೊಳಿಸಲಾಗಿದೆ. ಇದು ಈ ವರ್ಷದ ಜಾತ್ರೆಯ ವಿಶೇಷ ಆಕರ್ಷಣೆಯಾಗಿದೆ.
ಈ ಟ್ರೇಲರ್ ಸಾಂಗ್‌ನಲ್ಲಿರುವ “ಭಕ್ತಿಯ ಮನೆ ಮನಗಳಲ್ಲಿ ಮುಕ್ತಿಯ ಕೆನೆ ನೆನಹಿನಲ್ಲಿ ಓಂಕಾರವು ಕೋಟೆ ಕಟ್ಟಿ
ಬೆಟ್ಟಗಳು ಧ್ಯಾನದಲಿ ಸಿದ್ಧ ಪುರುಷ ಗವಿಸಿದ್ದನೇ ಇಷ್ಟ ಪ್ರಾಣ ಭಾವದಲ್ಲಿ ಜಾತ್ರೋತ್ಸವ ನಮ್ಮ ಯಾತ್ರೋತ್ಸವ”
ಎಂಬ ಅಧ್ಯಾತ್ಮಪೂರ್ಣ, ಭಕ್ತಿಭಾವ ತುಂಬಿದ ಸಾಹಿತ್ಯಕ್ಕೆ ಕೊಪ್ಪಳದ ಗಾಯಕ ಸದಾಶಿವ ಪಾಟೀಲರು ಜೀವ ತುಂಬಿದ್ದಾರೆ.
ಈ ಹಾಡಿನಲ್ಲಿ ಶ್ರೀ ಶಿವಶಾಂತವೀರ ಹಾಗೂ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಮೂರ್ತಿಶಿಲ್ಪಗಳು, ಚಿಕೇನಕೊಪ್ಪದ ಶರಣರ ದೀರ್ಘದಂಡ ನಮಸ್ಕಾರ, ಜಾತ್ರೆಯ ಮಹಾದಾಸೋಹದ ಸಿದ್ಧತೆ, ಪ್ರಸಾದ ಸೇವನೆ, ಹಾಗೂ ಶ್ರೀಗವಿಮಠದ ವಿವಿಧ ಸೇವಕರ ಸೇವಾ ಕಾರ್ಯಗಳು ಮನಮುಟ್ಟುವಂತೆ ಚಿತ್ರಿತವಾಗಿವೆ. ಜೊತೆಗೆ ಪ್ರಾಕೃತಿಕ ಬೆಟ್ಟ-ಗುಡ್ಡಗಳು, ಕೆರೆಗಳು ಮತ್ತು ಸಹಜ ವೈಭವದ ದೃಶ್ಯಗಳನ್ನು ಸಂಯೋಜಿಸಿ ಟ್ರೇಲರ್ ಸಾಂಗ್ ಮೂಲಕ ಭಕ್ತರಿಗೆ ಜಾತ್ರೆಯ ಆಹ್ವಾನ ನೀಡಲಾಗಿದೆ.
ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಗಳು
ಪ್ರತಿ ವರ್ಷದಂತೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ
ಕೃಷಿ ಮೇಳ, ತಾರಸಿ ತೋಟ (ಟೆರೇಸ್ ಗಾರ್ಡನ್), ಫಲ-ಪುಷ್ಪ ಪ್ರದರ್ಶನ
ರಕ್ತದಾನ ಶಿಬಿರ, ರಂಗೋಲಿ ಪ್ರದರ್ಶನ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಯಾಗಲಿದೆ.
Gavisiddeshwara Fair Festival ವಿಶೇಷ ಅನ್ನದಾಸೋಹ
ದೇಶದ ಅನೇಕ ಮಠಗಳು ಅನ್ನದಾಸೋಹಕ್ಕೆ ಹೆಸರುವಾಸಿಯಾಗಿದ್ದರೂ, ಶ್ರೀ ಗವಿಸಿದ್ದೇಶ್ವರ ಮಠವು ತನ್ನ ವಿಭಿನ್ನ ಮತ್ತು ವಿಶಿಷ್ಟ ಅನ್ನದಾಸೋಹದ ಮೂಲಕ ಖ್ಯಾತಿ ಪಡೆದಿದೆ. ಈ ಬಾರಿ ಸಹ ಸರಳ, ಸುರಕ್ಷಿತ ಮತ್ತು ಆರೋಗ್ಯಕರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನದಿಂದ ಕೊನೆಯ ದಿನದವರೆಗೂ ಮಠದ ವತಿಯಿಂದ ಹಾಗೂ ಭಕ್ತಾದಿಗಳ ಸಹಕಾರದಿಂದ ವಿಶೇಷ ಅನ್ನದಾಸೋಹ ನಡೆಯಲಿದೆ.ಪ್ರತಿ ವರ್ಷ ಕೀಪ್ಪಳ ಮತ್ತು ಸುತ್ತಮುತ್ತಲಿನ ಕಾರ್ಖಾನೆಗಳ ಸಹಕಾರದಿಂದ ನೆಡೆಸಲಾಗುತ್ತಿದ್ದ ಜಾತ್ರೆ ಈಬಾರ ಕಾರ್ಖಾನೆಗಳ ಸಹಕಾರ ಮತ್ತು ಧನ ಸಹಾಯಕ್ಕೆ ಮುಂದಾಗದಂತೆ ಶ್ರೀಗಳು ಭಕ್ತರಿಗೆ ತಿಳಿಸಿದ್ದರೆ.
ನೀರಿನ ವ್ಯವಸ್ಥೆ
70 ನಲ್ಲಿಇರುವ ಎರಡು ನೀರಿನ ಕಟ್ಟೆಗಳು, 50 ನಲ್ಲಿಇರುವ ಇನ್ನೊಂದು ಕಟ್ಟೆಯನ್ನು ಸಿದ್ಧಗೊಳಿಸಲಾಗಿದೆ. 250-300 ಭಕ್ತರು ಏಕಕಾಲಕ್ಕೆ ನೀರನ್ನು ಸೇವಿಸುವ ಬೃಹತ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಹಿ ಪದಾರ್ಥವಾದ ಮಾದಲಿ ಈ ನಾಡಿನ ವಿಶೇಷ ತಿನಿಸಾಗಿದೆ. ಜಾತ್ರೆಯ ವಿಶೇಷವೂ ಹೌದು ಅದಕ್ಕೆಂದೆ 166 ಅಡಿ ವಿಸ್ತೀರ್ಣದ 3, 206 ಅಡಿ ವಿಸ್ತೀರ್ಣದ 3 ಕಟ್ಟೆಗಳು ಒಟ್ಟು 6 ಮಾದಲಿ ಕಟ್ಟೆಗಳು ನಿರ್ಮಾಣಗೊಂಡಿವೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೆಕವಾಗಿ ಕೌಂಟರ್‌ಗಳನ್ನು ಪ್ರಸಾದ ನೀಡಿಸಿಕೊಳ್ಳಲಿಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ 4 ಪ್ರವೇಶ ದ್ವಾರಗಳು, 65 ಅಡಿಯ ಅನ್ನ ಸಂಗ್ರಹಣಾ ಕಟ್ಟೆ ನಿರ್ಮಿಸಲಾಗಿದೆ.
ಪೊಲೀಸ್ ಕಣ್ಗಾವಲು
ಪ್ರತಿದಿನ ಪ್ರಸಾದದ ಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರ ಇಲಾಖೆಯ ಅಧಿಕಾರಿಗಳು, ಪೊಲೀಸರು ಇರುತ್ತಾರೆ. ಪ್ರಸಾದ ನಿಲಯದ ಸುತ್ತಲೂ ಪೊಲೀಸ್ ಕಣ್ಗಾವಲು ಇದ್ದು, ತಂತಿ ಬೇಲಿ ಅಳವಡಿಸಲಾಗಿದೆ. ಮಹಾದಾಸೋಹದಲ್ಲಿಭಕ್ತರ ಸುರಕ್ಷತೆಗಾಗಿ ಹೊರ, ಓಳಾಂಗಣ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಾತ್ರಾಮಹೋತ್ಸವ ಮಹಾದಾಸೋಹದಲ್ಲಿಒಂದು ದಿನಕ್ಕೆ ಸುಮಾರು 300 ರಿಂದ 400ರವರೆಗೆ ಭಕ್ತರು ಪ್ರಸಾದ ತಯಾರಿಸಲಿದ್ದಾರೆ. ಪ್ರಸಾದ ವಿತರಣೆಯಲ್ಲಿಸುಮಾರು 500 ರಿಂದ 600 ಭಕ್ತರು ಪಾಲ್ಗೊಳ್ಳುವರು. ಜಾತ್ರಾಮಹೋತ್ಸವ ಪ್ರಾರಂಭದಿಂದ ಮುಕ್ತಾಯದ ವರೆಗೆ ಪ್ರಸಾದ ನಿಲಯದಲ್ಲಿಸುಮಾರು 25 ಸಾವಿರ ಭಕ್ತರು ನಾನ ಸೇವೆಯಲ್ಲಿಪಾಲ್ಗೊಳ್ಳುವರು. ಜಾತ್ರೆಯ ಪ್ರಾರಂಭದಿಂದ ಮುಕ್ತಾಯದವರೆಗೆ ಸುಮಾರು 15 ರಿಂದ 18 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ.
ಗವಿಮಠದ ಐತಿಹಾಸಿಕ ಹಿನ್ನೆಲೆ – ಗುಡದಯ್ಯನಿಂದ ಗವಿಸಿದ್ದನಾಗುವವರೆಗೆ
ಶಾಲಿವಾಹನ ಶಕ 1008ರಲ್ಲಿ ರುದ್ರಮುನಿ ಶಿವಯೋಗಿಗಳಿಂದ ಸ್ಥಾಪಿತವಾದ ಶ್ರೀ ಗವಿಮಠವು ಇದುವರೆಗೆ 18 ಪೀಠಾಧಿಪತಿಗಳನ್ನು ಕಂಡಿದೆ. 11ನೇ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ ಕಾಯಕ, ಪೂಜೆ ಹಾಗೂ ಅನುಷ್ಠಾನ ತತ್ವಗಳಿಂದ ಪ್ರಸಿದ್ಧರಾದವರು. ಲಿಂಗದ ಬೆಳಕಿನಲ್ಲೇ ಲೀನವಾಗಿ ಸಜೀವ ಸಮಾಧಿ ಹೊಂದಿದ ಗವಿಸಿದ್ದೇಶ್ವರರ ಗದ್ದುಗೆ ಮಠದ ಹೃದಯವಾಗಿದೆ.
ಮೂಲತಃ ಗುಡದಯ್ಯ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದ ಗವಿಸಿದ್ದೇಶ್ವರರು, ಮಳೆಮಲ್ಲೇಶ್ವರ ಬೆಟ್ಟದಲ್ಲಿ ಧ್ಯಾನಾಸಕ್ತರಾಗಿದ್ದರು. ಅವರ ಪವಾಡ ಶಕ್ತಿಯಿಂದ ಹಸುವನ್ನು ಬದುಕಿಸಿದ ಘಟನೆ ಅವರ ಮಹಿಮೆಯನ್ನು ಬೆಳಗಿಸಿದೆ. ಬಳಿಕ ಗವಿಮಠದ 11ನೇ ಪೀಠಾಧಿಪತಿಯಾಗಿ ನೇಮಕಗೊಂಡು ಸಮಾಜೋದ್ಧಾರ ಕಾರ್ಯಗಳಲ್ಲಿ ತೊಡಗಿದರು. ಕ್ರಿ.ಶ. 1816ರಲ್ಲಿ ಗುರುಗಳಿಗಾಗಿ ನಿರ್ಮಿಸುತ್ತಿದ್ದ ಸಮಾಧಿಯ ಮೇಲೆಯೇ ಧ್ಯಾನಗೈಯುತ್ತಲೇ ಲಿಂಗೈಕ್ಯರಾದರು. ಆ ದಿನವನ್ನೇ ಗವಿಸಿದ್ದೇಶ್ವರ ಜಾತ್ರೆಯಾಗಿ ಆಚರಿಸಲಾಗುತ್ತಿದೆ.
ಕೈಲಾಸ ಮಂಟಪ ಮತ್ತು ಜಾತ್ರೆಯ ವೈಭವ
ಕೈಲಾಸ ಮಂಟಪದಲ್ಲಿ ನಾಡಿನ ಹರ-ಗುರು-ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿದ್ದು, ಪರಿಸರ ಸ್ನೇಹಿ ಮತ್ತು ನೈಸರ್ಗಿಕ ವೇದಿಕೆ ಇದರ ವಿಶೇಷತೆ.
ಜಾತ್ರೆಯ ಸಂದರ್ಭದಲ್ಲಿ ನಡೆಯುವ ಕಡುಬಿನ ಕಾಳಗ (ಮದ್ದು ಸುಡುಮದು), ಗವಿಮಠದ ಕೆರೆಯಲ್ಲಿ ನಡೆಯುವ ತೆಪ್ಪೋತ್ಸವ, ಹಾಗೂ ಪ್ರತಿದಿನ ವಿಭಿನ್ನ ಪ್ರಸಾದ ವ್ಯವಸ್ಥೆಗಳು ಭಕ್ತರನ್ನು ಆಕರ್ಷಿಸುತ್ತವೆ.
ಒಟ್ಟಾರೆ, ಪರಿಸರ, ಆರೋಗ್ಯ ಮತ್ತು ಭಕ್ತರ ಮೇಲಿನ ಕಾಳಜಿಯನ್ನು ಪ್ರಧಾನವಾಗಿಟ್ಟುಕೊಂಡ ಗವಿಸಿದ್ದೇಶ್ವರ ಜಾತ್ರೆ ಈ ಭಾಗದ ನಡದಾಡುವ ದೈವದಂತೆ ಪರಿಣಮಿಸಿದೆ.
ಕೊಪ್ಪಳದ ಗವಿಸಿದ್ದೇಶ್ವರ (ಅಜ್ಜನ ಜಾತ್ರೆ) ಜಾತ್ರೆಯ ಮಹಾರಥೋತ್ಸವ ಜನವರಿ 5, 2026 ರಂದು ನಡೆಯಲಿದೆ, ಇದು ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧವಾಗಿದೆ, ಲಕ್ಷಾಂತರ ಭಕ್ತರು ಸೇರಿ ದಾಸೋಹ ಸ್ವೀಕರಿಸುತ್ತಾರೆ ಮತ್ತು ಅದ್ಧೂರಿ ಮೆರವಣಿಗೆಗಳು, ಕಲಾ ಕಾರ್ಯಕ್ರಮಗಳು ಇರುತ್ತವೆ. ಜಾತ್ರೆಯ ಸಮಯದಲ್ಲಿ ನಿರಂತರವಾಗಿ 15 ದಿನಗಳ ಕಾಲ ಉಚಿತ ಪ್ರಸಾದ (ದಾಸೋಹ) ನೀಡಲಾಗುತ್ತದೆ.
5-6 ಸಾವಿರ ಭಕ್ತರಿಗೆ ಏಕಕಾಲದಲ್ಲಿ ಪ್ರಸಾದ ಸ್ವೀಕರಿಸಲು 6 ಎಕರೆ ವಿಸ್ತೀರ್ಣದ ವ್ಯವಸ್ಥೆ, 76 ಕೌಂಟರ್‌ಗಳು, ದೊಡ್ಡ ಅಡುಗೆ ಕೋಣೆಗಳು, ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಯಾವುದೇ ಔಪಚಾರಿಕ ಸಮಿತಿಯಿಲ್ಲದೆ ಭಕ್ತರಿಂದಲೇ ಆಯೋಜಿಸಲ್ಪಡುತ್ತದೆ.
ಕಾಶಿಗೆ ಹೋಗಲಾಗದವರು ಕೊಪ್ಪಳದ ಅಜ್ಜನ ಜಾತ್ರೆಗೆ ಬನ್ನಿ – ಕಣ್ಣು ತುಂಬಿಸಿಕೊಂಡು ಅಜ್ಜನ ಆಶೀರ್ವಾದ ಪಡೆಯಿರಿ.
ಮುರಳೀಧರ್ ನಾಡಿಗೇರ್
9008017727
