Shri Shivaganga Yoga Kendra ಆನಾಪಾನಸತಿ ಧ್ಯಾನ ಅಂದರೆ ನಮ್ಮ ದೇಹದ ಒಳಗೆ ಸಹಜವಾಗಿ ಬರುವ ಉಸಿರು ಮತ್ತು ದೇಹದಿಂದ ಹೊರಗೆ ಹೋಗುವ ಸಹಜವಾದ ಉಸಿರನ್ನು ಗಮನಪೂರ್ವಕವಾಗಿ ಬಹುಎಚ್ಚರಿಕೆಯಿಂದ ಅರಿಯುವುದು ಎಂದು ವಿರಕ್ತಮಠದ ಹಾಲಯ್ಯ ಹೇಳಿದರು.
ಶಿವಗಂಗಾ ಯೋಗಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆನಾಪಾನಸತಿ ಧ್ಯಾನ ಪದ್ಧತಿಯು ಈಗಲೂ ಸಹ ಹಲವಾರು ಧ್ಯಾನ ಕ್ರಮಗಳಿಗೆ ಮೊದಲ ಮೆಟ್ಟಿಲಾಗಿದೆ. ಧ್ಯಾನದಲ್ಲಿ 112ಕ್ಕಿಂತಲೂ ಜಾಸ್ತಿ ವಿಧಾನಗಳು ಇವೆ ಎಂದು ತಿಳಿಸಿದರು.
ಗೌತಮ ಬುದ್ಧ ಸಂಶೋಧಿಸಿದ ಹೊಸ ಧ್ಯಾನದ ದಾರಿ ಎಂದರೆ ಅದು ವಿಪಶ್ಯನ. ವಿಪಶ್ಯನ ಎನ್ನುವುದು ಪಾಳಿ ಶಬ್ಧದ ಮೂಲ ರೂಪ. ಪಶ್ಯನ ಎಂದರೆ ನೋಡುವುದು ವಿಪಶ್ಯನ ಅಂದ್ರೆ ವಿಶೇಷವಾಗಿ ನೋಡುವುದು. ನಮ್ಮ ದೇಹದಲ್ಲಿ ಉಂಟಾಗುವ ಸಂವೇದನೆಗಳನ್ನ ನಿರಂತರವಾಗಿ ಗಮನಪೂರ್ವಕವಾಗಿ ದೃಷ್ಟ ಭಾವದಿಂದ ಗಮನಿಸುವುದೇ ಆಗಿದೆ. ಅದನ್ನು ವಿಪಶ್ಯನ ಧ್ಯಾನ ಎನ್ನುತ್ತಾರೆ ಎಂದರು.
Shri Shivaganga Yoga Kendra ಧ್ಯಾನ ಮಾಡುವುದರಿಂದ ನಮ್ಮ ಮನೋಮಂದಿರದ ಆಳದಲ್ಲಿ ಹುದುಗಿರುವ ಎಲ್ಲ ತರದ ಮನೋಕ್ಲೇಶಗಳು, ಭ್ರಾಂತಿಗಳು, ಅಸುರಿ ಗುಣಗಳು ಮಾಯವಾಗುತ್ತ ಬೇರು ಸಮೇತ ಹೊರಗೆ ಬರುತ್ತವೆ. ಅಂದರೆ ನಮ್ಮ ಮನಸ್ಸು ಸಂಪೂರ್ಣವಾಗಿ ನಿರ್ಮಲವಾಗುತ್ತದೆ. ತನ್ಮೂಲಕ ನಮ್ಮ ದೇಹದ ಮತ್ತು ಮನಸ್ಸಿನ ಮೇಲಾಗುವ ಕಾಯಿಲೆಗಳ ಪ್ರಭಾವವು ಕಡಿಮೆಯಾಗುತ್ತದೆ. ನಮ್ಮ ಆರೋಗ್ಯ ಸಹಜವಾಗಿ ಸುಧಾರಣೆಯಾಗುತ್ತದೆ. ಎಲ್ಲ ತರದ ಮನೋದೈಹಿಕ ಕಾಯಿಲೆಗಳು ಮನೋ ಮೂಲ ಹೊಂದಿರುವ ತೊಂದರೆಗಳು ನಿವಾರಣೆಯಾಗುತ್ತವೆ.
ಇಂತಹ ಅಮೂಲ್ಯವಾದ ಮತ್ತು ಅತಿ ಸರಳವಾದ, ಎಲ್ಲಾ ಜಾತಿ, ಮತ, ಪಂಥ, ಧರ್ಮ, ಭಾಷೆ, ದೇಶ, ಜನಾಂಗದವರು ಸಹ ಅನುಸರಿಸಬಹುದಾಗಿದೆ. ಸಾರ್ವಕಾಲಿಕ ಧ್ಯಾನದ ಕ್ರಮವನ್ನ ನಾವು ಅನುಸರಿಸುತ್ತ ನಮ್ಮ ಎಲ್ಲ ಕಷ್ಟ ಸಂಕೋಲೆಗಳಿಂದ ಮುಕ್ತಿಯನ್ನು ಹೊಂದಬೇಕು ಎಂದು ಹೇಳಿದರು.
ಶಿವಗಂಗಾ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಧ್ಯಾನ ದಿನಾಚರಣೆಯಲ್ಲಿ ಜಿ.ವಿಜಯಕುಮಾರ್, ಕಾಟನ್ ಜಗದೀಶ್, ಜಿ.ಎಸ್.ಓಂಕಾರ್, ವಿಜಯ ಬಾಯರ್, ಟ್ರಸ್ಟಿ ಹಾಲಪ್ಪ, ಶಿವಗಂಗಾ ಯುವ ಕೇಂದ್ರದ ಕಾರ್ಯದರ್ಶಿ ಚಂದ್ರಶೇಖರಯ್ಯ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
38 ಶಾಖೆಗಳಿಂದ ಯೋಗ ಶಿಬಿರಾರ್ಥಿಗಳು ಧ್ಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದು ಗಂಟೆ ಧ್ಯಾನ ಮಾಡುವುದರ ಜೊತೆಗೆ ವಿಶ್ವ ಧ್ಯಾನ ದಿನಾಚರಣೆಯ ಮಹತ್ವವನ್ನು ಅರಿತರು. ಕಾರ್ಯಕ್ರಮದಲ್ಲಿ ಎಲ್ಲಾ ಶಾಖೆಗಳ ಯೋಗ ಶಿಕ್ಷಕರು ಪಾಲ್ಗೊಂಡಿದ್ದರು.
