Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿರ್ಲಕ್ಷ್ಯ ಬೇಡ ಎಂದು ವೈದ್ಯ ಡಾ. ಅರವಿಂದ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾಯಿ ಕಡಿತ ಮಾರಣಾಂತಿಕ ಆಗಬಹುದು. ಕಡಿತಕ್ಕೆ ಒಳಗಾದ ವ್ಯಕ್ತಿಗಳು ತಕ್ಷಣ ಗಾಯವನ್ನು ನೀರು ಹಾಗೂ ಸಾಬೂನಿನಿಂದ 15 ನಿಮಿಷ ತೊಳೆಯಬೇಕು. ಮನೆಯಲ್ಲೇ ಇರುವ ಡೆಟಾಲ್ ಹಾಗೂ ಅಯೋಡಿನ್ ಅಂತ ಆಂಟಿಸೆಪ್ಟಿಕ್ ಹಚ್ಚಬೇಕು. ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ ರೇಬಿಸ್ ಲಸಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಕಡಿತಕ್ಕೆ ಒಳಗಾದ ವ್ಯಕ್ತಿ ವೈದ್ಯರ ನಿರ್ದೇಶನದ ಮೇರೆಗೆ ಹಾಗೂ ತೀವ್ರ ಕಡಿತದ ಸಂದರ್ಭದಲ್ಲಿ ಗಾಯಕ್ಕೆ ರೇಬಿಸ್ ಇಮ್ಯೂನೋ ಗ್ಲೋಬಿಲಿನ್ ಕೊಡಬೇಕು. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಹೇಳಿದರು.
ನಾವು ಸಾಕಿದ ಪ್ರಾಣಿಗಳಿಗೆ ರೇಬೀಸ್ ಇಂಜೆಕ್ಷನ್ ಕೊಡಿಸಿದರೂ ಸಹ ಅದು ಕಚ್ಚಿದಾಗ ನಾವು ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು ತುಂಬಾ ಅಗತ್ಯ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಒಂದು ವರ್ಷದೊಳಗಿನ ಮಕ್ಕಳು ಮತ್ತು ವಯಸ್ಕರು ಸಹ ರೇಬಿಸ್ ವಿರುದ್ಧದ ಲಸಿಕೆ ತೆಗೆದುಕೊಳ್ಳಬಹುದು. ಸಾಕು ನಾಯಿಗಳಿಗೆ ತಪ್ಪದೇ ಚುಚ್ಚುಮದ್ದನ್ನು ಹಾಕಿಸಬೇಕು ಎಂದರು.
ರೇಬೀಸ್ ಒಂದು ವೈರಾಣುವಿನಿಂದ ಹರಡುವ ಸೊಂಕು ಆಗಿದ್ದು, ಸೋಂಕಿರುವ ಪ್ರಾಣಿಗಳ ಜೊಲ್ಲಿನ ಸಂಪರ್ಕದಿಂದ, ತೆರೆದ ಚರ್ಮದ ಮೇಲೆ ನೆಕ್ಕುವುದರಿಂದ, ಪರಚುವುದು ಹಾಗೂ ಕಚ್ಚುವುದರಿಂದ ಮನುಷ್ಯನಿಗೆ ಹರಡುತ್ತದೆ. ರೇಬೀಸ್ ಕಾಯಿಲೆಯಿಂದ ವರ್ಷದಲ್ಲಿ 30,000ಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ ಎಂದು ತಿಳಿಸಿದರು.
Rotary Shivamogga ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ನೆಪ್ಚೂನ್ ಕಿಶೋರ್ ಮಾತನಾಡಿ, ಸಾಕುಪ್ರಾಣಿ ಅಥವಾ ಬೀದಿ ನಾಯಿಗಳು ಇರಬಹುದು, ಅವುಗಳಿಂದ ನಾವು ಜಾಗೃತ ಆಗಿರಬೇಕು. ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಗಳಿಂದ ಜನರಿಗೆ ಅರಿವು ಮೂಡುತ್ತದೆ ಎಂದು ಹೇಳಿದರು.
ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಚಂದ್ರಹಾಸ್ ಪಿ.ರಾಯ್ಕರ್, ಡಾ. ಗುಡದಪ್ಪ ಕಸಬಿ, ಅರುಣ್ ದೀಕ್ಷಿತ್, ಶಶಿಕಾಂತ್ ನಾಡಿಗ್, ಡಾ. ಧನಂಜಯ ರಾಂಪುರ, ಮಂಜುನಾಥ್ ರಾವ್ ಕದಂ, ಗಣೇಶ್, ಕೇಶವಪ್ಪ, ರಮೇಶ್ ಭಟ್, ಸುರೇಶ್, ಕೃಷ್ಣಮೂರ್ತಿ, ಎ.ಒ.ಮಹೇಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
