Keladi Shivappanayaka University of Agricultural and Horticultural Sciences ರೈತ ವಿಜ್ಞಾನಿಯಾದಾಗ ಮತ್ತು ಉದ್ಯಮಿಯಾದಾಗ ಮಾತ್ರ ಲಾಭ ಗಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಹೊಸ ಬೆಳೆಗಳ ಬಗ್ಗೆ ತಿಳಿದುಕೊಂಡು ವೈಜ್ಞಾನಿಕವಾಗಿ ಬೆಳೆ ಬೆಳೆದು ಲಾಭ ಪಡೆಯಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರು ಮತ್ತು ಕುಲಸಚಿವರಾದ ಡಾ.ಬಿ. ಹೇಮ್ಲಾನಾಯ್ಕ ನುಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಅಡಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ, ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ದಿ ಮಂಡಳಿ, ಹುಬ್ಬಳ್ಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಇಂಡಿಯನ್ ಸೊಸೈಟಿ ಆಫ್ ಸ್ಪೈಸಸ್, ಕ್ಯಾಲಿಕಟ್ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ ಇವರ ಸಹಯೋಗದಲ್ಲಿ ‘ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ’ ಕುರಿತು ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಹೊಟ್ಟೆ ತುಂಬಾ ಆಹಾರ ನೀಡಲು ಮಾತ್ರ ಸಾಧ್ಯ. ಕೇವಲ ಕೃಷಿ ಬೆಳೆಗಳಿಂದ ರೈತ ಕೋಟ್ಯಾಧಿಪತಿ ಆಗಲಾರರು. ತೋಟಗಾರಿಕೆ ಬೆಳೆಗಳು ಆರ್ಥಿಕತೆಗೆ ಹೆಚ್ಚಿನ ಉತ್ತೇಜನ ನೀಡುತ್ತವೆ. ಹೊಸ ಬೆಳೆಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿದುಕೊಂಡು, ತಮ್ಮಲ್ಲಿರುವ ಸ್ವಾಭಾವಿಕ ಮೂಲಗಳನ್ನು ಬಳಸಿಕೊಂಡು ಮಿಶ್ರ ಬೆಳೆಗಳನ್ನು ಬೆಳೆದು ರೈತರು ಲಾಭ ಪಡೆಯಬಹುದು.
ಅಡಿಕೆ, ಕರಿಮೆಣಸು, ಸಾಂಬಾರು ಪದಾರ್ಥಗಳು, ಟೀ, ರಬ್ಬರ್ ನಂತಹÀ ತೋಟಗಾರಿಕೆ ಬೆಳೆಯಿಂದ ಆರ್ಥಿಕತೆ ಸುಧಾರಣೆ ಸಾಧ್ಯ. ನಮ್ಮ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಶೇ.70 ರಷ್ಟು ತೋಟಗಾರಿಕೆ ಬೆಳೆಗಳಿದ್ದರೆ ಶೇ. 12 ರಷ್ಟು ಕೃಷಿ ಬೆಳೆ ಮತ್ತು ಉಳಿದದ್ದು ಅರಣ್ಯ ಬೆಳೆ ಇದೆ.
ಅಡಿಕೆಗೆ ಈಗಾಗಲೇ ಸಾಕಷ್ಟು ರೋಗಗಳು ಬರುತ್ತಿವೆ. ಈಗ ಅಡಿಕೆಗೆ ಉತ್ತಮ ಬೆಲೆ ಇದೆ. ಆದರೆ ಮುಂದಿನ ದಿನಗಳಲ್ಲಿ ರೈತರ ಕೈ ಹಿಡಿಯಲು ಪರ್ಯಾಯವಾದ ಮಿಶ್ರಬೆಳೆಗಳನ್ನು ಬೆಳೆಯಬೇಕು.
ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ, ಡ್ರ‍್ಯಾಗನ್ ಫ್ರೂಟ್, ಮ್ಯಾಂಗೋಸ್ಟಿನ್, ಕೊಕೊ , ರಂಬುಟನ್ ಗಳಂತಹ ಬೆಳೆ ಬೆಳೆಯಲು ಅವಕಾಶವಿದ್ದು ಇದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವುದು ಸಹ ಮುಖ್ಯವಾಗುತ್ತದೆ. ನಮ್ಮಲ್ಲಿ ಅನೇಕ ಪ್ರಗತಿಪರ ರೈತರಿದ್ದು, ವೈಜ್ಞಾನಿಕವಾಗಿ ಮಿಶ್ರಬೆಳೆಯ ಬಗ್ಗೆ ತಿಳಿದು ಅಳವಡಿಸಿಕೊಳ್ಳಬೇಕಿದೆ.
ಜಾಯಿಕಾಯಿ ಒಂದು ಸಾಂಬಾರು ಬೆಳೆಯಾಗಿದ್ದು, ಔಷಧೀಯ ಗುಣವಿರುವ ಕಾರಣ ಉತ್ತಮ ಬೇಡಿಕೆಯೂ ಇದೆ. ಘಮಘಮಿಸುವ ಎಣ್ಣೆಯನ್ನು ತೆಗೆಯಬಹುದು. ಔಷಧೀಯ ಗುಣಗಳಿರುವ ಕಾರಣ ಫಾರ್ಮಾಸಿಟಿಕಲ್ ಉದ್ದಿಮೆ ಹಾಗೂ ಆಯುರ್ವೇದದಲ್ಲಿಯೂ ಇದಕ್ಕೆ ಬೇಡಿಕೆ ಇದೆ. ಇದು ಜೀರ್ಣಕ್ರಿಯೆ ಶಕ್ತಿ ಹೆಚ್ಚಿಸುತ್ತದೆ. ಮೆದುಳನ್ನು ಚುರುಕುಗೊಳಿಸುತ್ತದೆ. ಈಗಾಗಲೇ ಕೇರಳ,ಮಹಾರಾಷ್ಟ್ರ ತಮಿಳುನಾಡಿನಲ್ಲಿ ಬೆಳೆಯಲಾಗುತ್ತಿದೆ.
ರೈತ ಕೃಷಿಕನಾಗಬೇಕು, ವಿಜ್ಞಾನಿಯಾಗಬೇಕು ಜೊತೆಗೆ ವ್ಯಾಪಾರಿಯೂ ಆಗಬೇಕು. ಆಗ ಮಾತ್ರ ಮಾತ್ರ ಲಾಭ ಸಿಗಲು ಸಾಧ್ಯ. ಉಪ ಕಸುಬುಗಳನ್ನು ಮಾಡಬೇಕು ಹಾಗೂ ವ್ಯವಸಾಯ ಉತ್ಪನ್ನ ಸಂಘಗಳ ಸಂಪರ್ಕದಲ್ಲಿರಬೇಕು ಎಂದ ಅವರು ಜಾಯಿಕಾಯಿ ವೈಜ್ಞಾನಿಕ ಬೇಸಾಯ ಕ್ರಮಗಳ ಬಗ್ಗೆ ತಿಳಿಯಲು ಹಲವಾರು ರೈತರು ಮುಂದಾಗಿರುವುದು ಸಂತಸದ ವಿಷಯವಾಗಿದ್ದು ಈ ತರಬೇತಿಯ ಸದುಪಯೋಗ ಪಡೆಯಬೇಕು ಎಂದರು.
ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ದಿ ಮಂಡಳಿ, ಹುಬ್ಬಳ್ಳಿಯ ಪ್ರಧಾನ ವ್ಯವಸ್ಥಾಪಕರಾದ ಡಾ.ರಾಮಚಂದ್ರ ಕೆ ಮಡಿವಾಳ ಮಾತನಾಡಿ, ಭಾರತ ಸಾಂಬಾರು ಪದಾರ್ಥಗಳ ಶ್ರೀಮಂತ ದೇಶ. ಪ್ರಸ್ತುತ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಡಿಕೆಯೊಂದಿಗೆ ಪೂರಕ ಬೆಳೆ ಬಗ್ಗೆಯೂ ಚಿಂತಿಸಬೇಕಿದೆ. ಯಾವುದೇ ರೀತಿಯ ಆರ್ಥಿಕ ನಷ್ಟವಾಗದಂತೆ ಮಿಶ್ರಬೆಳೆಗೆ ಒತ್ತು ನೀಡಿ, ಆರ್ಥಿಕತೆ ಸುಧಾರಣೆ ಮಾಡಿಕೊಳ್ಳಬೇಕು. ರೈತ ಹೊಸ ಹೊಸ ಬೆಳೆಗಳ ಬಗ್ಗೆ ತಿಳಿದುಕೊಳ್ಳಬೇಕು. ಸಂದರ್ಭಕ್ಕನುಸಾರ ಬದಲಾವಣೆ ತಂದುಕೊಂಡು ಲಾಭ ಹೊಂದಬೇಕು. ರೈತ ಕೇವಲ ಕೃಷಿ ಮಾಡಿದರೆ ಸಾಲದು, ಒಬ್ಬ ಉದ್ದಿಮೆದಾರನಾಗಿ ಹೊರ ಹೊಮ್ಮಬೇಕಿದೆ.
ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿಯನ್ನು ವೈಜ್ಞಾನಿಕವಾಗಿ ಬೆಳೆಯುವ ಕುರಿತು ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ರೈತರಿಗೆ ಕೂಲಂಕಷವಾಗಿ ಪರಿಚಯ ಮಾಡಿಕೊಡಬೇಕು. ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ನಾಗರಾಜಪ್ಪ ಅಡಿವಪ್ಪರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯದ 30 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ದೇಶದ 79% ಅಡಿಕೆ ನಮ್ಮ ರಾಜ್ಯದಲ್ಲಿದೆ. ರೋಗ ಬಂದಾಗ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ನಷ್ಟದಿಂದ ಪಾರಾಗಲು ಅಡಿಕೆಯೊಂದಿಗೆ ಮಿಶ್ರ ಬೆಳೆಗಳನ್ನು ಬೆಳೆಯುವ ಬಗ್ಗೆ ಮಾಹಿತಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಈಗಾಗಲೇ ಜಾಯಿಕಾಯಿ ಬೆಳೆದ ರೈತರು ತಮ್ಮ ಅನುಭವ ಹಂಚಿಕೊಳ್ಳುವರು ಎಂದರು.
ಕಾಯಕ್ರಮದಲ್ಲಿ ಅಡಿಕೆಯಲ್ಲಿ ಲಾಭದಾಯಕ ಮಿಶ್ರಬೆಳೆಯಾಗಿ ಜಾಯಿಕಾಯಿ ಕುರಿತಾದ ಮಡಿಕೆಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ತಾಂತ್ರಿಕ ಗೋಷ್ಟಿ: ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ ಉತ್ಪಾದನಾ ತಾಂತ್ರಿಕತೆಗಳು ವಿಷಯ ಕುರಿತು ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅಡಿವಪ್ಪರ್, ಜಾಯಿಕಾಯಿಯಲ್ಲಿ ನರ್ಸರಿ ತಾಂತ್ರಿಕತೆಗಳ ಕುರಿತು ಸಹಾಯಕ ಪ್ರಾಧ್ಯಾಪಕ ಡಾ.ಸುದೀಪ್ ಹೆಚ್.ಪಿ, ಜಾಯಿಕಾಯಿಯಲ್ಲಿ ಕೀಟಗಳ ನಿರ್ವಹಣೆ ಕುರಿತು ಸಹಾಯಕ ಪ್ರಾಧ್ಯಾಪಕಿ ಡಾ.ಸ್ವಾತಿ, ಜಾಯಿಕಾಯಿಯಲ್ಲಿ ರೋಗಗಳ ನಿರ್ವಹಣೆ ಕುರಿತು ಸಹಾಯಕ ಪ್ರಾಧ್ಯಾಪಕ ಡಾ.ಕಿರಣ್ ಕುಮಾರ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಲಕ್ಷ್ಮಿಕಾಂತ ಬೊಮ್ಮಣ್ಣನವರ, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಹೆಚ್ ಡಿ ದೇವಿಕುಮಾರ್, ಶಶಾಂಕ್, ಸಂಶೋಧನಾ ನಿರ್ದೇಶಕ ಡಾ.ದುಷ್ಯಂತ್ ಕುಮಾರ್, ಕಾಲೇಜಿನ ಡೀನ್ ಡಾ.ಡಿ.ತಿಪ್ಪೇಶ್, ಸಹ ಸಂಶೋಧನಾ ನಿರ್ದೇಶಕ ಡಾ.ಪ್ರದೀಪ್, ಹಿರಿಯ ವಿಜ್ಞಾನಿ ಡಾ.ಪಿ.ಸುನಿಲ್, ಹಳ್ಳಿಕೆರೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಡಾ. ಮಮತಾ ಬಿ. ಆರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಉಲ್ಲಾಸ್ ಮೆಸ್ತಾ ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು, ರೈತರು ಹಾಜರಿದ್ದರು.
Keladi Shivappanayaka University of Agricultural and Horticultural Sciences ರೈತರು ವಿಜ್ಞಾನಿ ಮತ್ತು ಉದ್ಯಮಿಯಾಗಿ ಕೃಷಿ ಮಾಡಿದಾಗ ಲಾಭ ಪಡೆಯಲು ಸಾಧ್ಯ- ಡಾ.ಬಿ.ಹೇಮ್ಲಾನಾಯಕ್
Date:
