ಥೈಲ್ಯಾಂಡ್ ದೇಶದಲ್ಲಿ ನಡೆದ ಪಂಜ ಕುಸ್ತಿಯಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಹಾಗೂ ನಾಡಿಗೆ ಕೀರ್ತಿ ತಂದ ತಾಲೂಕಿನ ಅಂಬಾರಕೊಪ್ಪ ನಿವಾಸಿ ವಿಕಲಚೇತನ ಗೌರಮ್ಮನಿಗೆ ಅದ್ಭುತ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.
ಉದ್ಯಮಿ ಮುಖಂಡ ವೀರೇಶ್ ರವರು ಈ ವೇಳೆ ಮಾತನಾಡಿ ಅತಿ ಕಡು ಬಡತನದಲ್ಲಿ ಇದ್ದರೂ ಕೂಡ ಗೌರಮ್ಮ ಅಂಗವಿಕಲೆ ಆಗಿದ್ದರೂ ಕೂಡ ಛಲ ಬಿಡದ ಪರಾಕ್ರಮಿಯಂತೆ ಹಲವು ಕ್ರೀಡೆಗಳಲ್ಲಿ ಸಾಧನೆ ಗಳಿಸುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ನಾನು ಥೈಲ್ಯಾಂಡ್ ದೇಶಕ್ಕೆ ಕಳುಹಿಸುವ ಮೂಲಕ ಸಣ್ಣ ಆರ್ಥಿಕ ಸಹಾಯ ಮಾಡಿರುತ್ತೇನೆ. ಆದರೆ ಗೌರಮ್ಮನವರು ಪದಕಗಳನ್ನು ಗೆಲ್ಲುವ ಮೂಲಕ ದೊಡ್ಡ ಕೀರ್ತಿಯನ್ನೇ ದೇಶಕ್ಕೆ ನಾಡಿಗೆ ತಾಲೂಕಿಗೆ ತಂದಿದ್ದಾರೆ ಎಂದು ಅಭಿನಂದಿಸಿದರು.
ತಾಲೂಕಿನ ಮುಖಂಡರಾದ ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್ ರವರು ಗೌರಮ್ಮನ ಸಾಧನೆಗೆ ಆರ್ಥಿಕ ಸಹಾಯದ ಹಾಗೂ ಉದ್ಯೋಗದ ಅವಶ್ಯಕತೆ ಇದ್ದು ಸನ್ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಜಯ ಕರ್ನಾಟಕ ಜನಪರ ವೇದಿಕೆಯ ಹುಲಿಗಿ ಕೃಷ್ಣರವರು ಮಾತನಾಡಿ ಕೈ ಕಾಲು ಗಟ್ಟಿ ಇದ್ದವರೇ ಸಾಧನೆ ಮಾಡದೆ ಸುಮ್ಮನಿದ್ದಾರೆ. ಆದರೆ ಗೌರಮ್ಮನವರು ತಮ್ಮ ಆರ್ಥಿಕ, ದೈಹಿಕ ತೊಂದರೆಗಳಿದ್ದರೂ ಕೂಡ ದೇಶಕ್ಕೆ ನಾಡಿಗೆ ಕೀರ್ತಿ ತಂದಿದ್ದಾರೆ.
ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ ಗುಣರಂಜನ್ ಶೆಟ್ಟಿ ರವರ ಹಾಗೂ ಸಂಘಟನೆಯ ನಮ್ಮ ನಾಯಕರದ ಶ್ರೀನಿವಾಸ್ ರವರ ಗಮನಕ್ಕೆ ಈ ಸಾಧಕೀಯ ಬಗ್ಗೆ ವಿವರ ನೀಡುವುದರೊಂದಿಗೆ ಮುಂದಿನ ಕ್ರೀಡೆಗೆ ಸಹಾಯ ಮಾಡಿಸುವುದಾಗಿ ಭರವಸೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌರಮ್ಮನವರು ನನಗೆ ಆರ್ಥಿಕ ತೊಂದರೆ ಇದ್ದರೂ ಕೂಡ ಏನಾದರೂ ಸಾಧಿಸಬೇಕು ಎಂಬುವ ಛಲ ನನ್ನಲ್ಲಿದೆ, ಇದನ್ನು ಗುರುತಿಸಿದ ವೀರೇಶ್ ರವರು ಹಾಗೂ ಎಲ್ಲಾ ಪತ್ರಕರ್ತರು ಮತ್ತು ಥಾಯ್ಲ್ಯಾಂಡ್ ದೇಶಕ್ಕೆ ಹೋಗಲು ನೆರವಾದ ಎಲ್ಲಾ ಮುಖಂಡರಿಗೂ ಅಭಿನಂದನೆ ಸಲ್ಲಿಸುವ ಮೂಲಕ ಈ ಗೌರವವನ್ನು ಅವರಿಗೆ ಸಲ್ಲಿಸುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ದೇಶಕ್ಕಾಗಿ ನಾಡಿಗಾಗಿ ಇನ್ನೂ ಹೆಚ್ಚಿನ ಕ್ರೀಡೆಯಲ್ಲಿ ಭಾಗವಹಿಸಿ ಗೆಲುವು ತರುವ ಭರವಸೆ ನನಗಿದೆ ಎಂದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ, ಗೋಣಿ ಸಂದೀಪ್, ಯುವ ನಿರ್ದೇಶಕ ಹಾಗೂ ಪತ್ರಕರ್ತ ವೈಭವ್, ಯುವರಾಜ್, ಚಂದ್ರಕಾಂತ್ ರೇವಣಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ನಾಯ್ಕ್, ಕುಮಾರಸ್ವಾಮಿ ಹಿರೇಮಠ್, ಜೆಸಿಐ ನೂತನ ಅಧ್ಯಕ್ಷ ಶಾಂತರಾಮ್, ವೆಂಕಟೇಶ್, ಅಅಗಡಿ ಪ್ರವೀಣ, ಹದಡಿ ಪ್ರವೀಣ್ ಸೇರಿದಂತೆ ಹಲವರಿದ್ದರು.
ವಿಕಲಚೇತನೆ ಗೌರಮ್ಮ ಥೈಲ್ಯಾಂಡ್ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೇ ಹೆಮ್ಮೆಯ ಪದಕ ಗೆದ್ದಿದ್ದಾರೆ
Date:
