ಅಂಬಾರಿಯ ಪ್ರತಿ ಕೃತಿಯಲ್ಲಿ ಕನ್ನಡ ಕಳಶವನ್ನು ಸ್ಥಾಪಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಬಾಪೂಜಿ ವಿದ್ಯಾ ಸಂಸ್ಥೆಯ ಲೇಕ್ ವ್ಯೂನ ಹೈಟೆಕ್ ಕಾಲೇಜಿನಲ್ಲಿಂದು ನೆರವೇರಿಸಿದ್ದು ಆಕರ್ಷಣೀಯವಾಗಿತ್ತು.
ಕಾಲೇಜಿನ ಪ್ರಾಚಾರ್ಯ ಡಾ. ಬಿ. ವೀರಪ್ಪನವರು ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ, ಮುಖ್ಯ ಅತಿಥಿಗಳಾದ ಕನ್ನಡ ಉಪನ್ಯಾಸಕ ಹಾಲಸ್ವಾಮಿ ಬೆಳ್ಳಿಗನೋಡು ಹಾಗೂ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ ಒಡಗೂಡಿ ವಿದ್ಯಾರ್ಥಿಗಳೇ ನಿರ್ಮಿಸಿದ ಅಂಬಾರಿಯ ಪ್ರತಿಕೃತಿಯಲ್ಲಿ ಕನ್ನಡ ಕಳಶ ಸ್ಥಾಪಿಸಿದರು.
ಬಾಪೂಜಿ ಎಂಬಿಎ ಕಾಲೇಜಿನ ಸಭಾಂಗಣದಲ್ಲಿಂದು ಭುವನೇಶ್ವರಿ ಪೂಜೆಯ ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಉಪನ್ಯಾಸಕ ಹಾಲಸ್ವಾಮಿ ಬೆಳ್ಳಿಗನೋಡು ಪ್ರತಿಯೊಬ್ಬರೂ ದಿನನಿತ್ಯ ತಾವೆಷ್ಟು ಶುದ್ಧ ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹುಟ್ಟುವಾಗ ವಿಶ್ವಮಾನವರಾದ ನಾವು ಬೆಳೆಯುತ್ತಾ ಸ್ವಾರ್ಥದಿಂದಾಗಿ ಅಲ್ಪ ಮಾನವರಾಗುತ್ತಿದ್ದೇವೆ ಎಂದರು.
ಸ್ವಾಗತ ಕೋರುತ್ತಾ ಪ್ರಾಸ್ತಾವಿಕ ನುಡಿಗಳನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ ಕನ್ನಡ ಅಭಿಮಾನವು ಕೇವಲ ನವೆಂಬರ್ ತಿಂಗಳಿಗೆ ಮೀಸಲಾಗದೆ ನಿರಂತರವಾಗಿ ಇರಬೇಕು ಎಂದರು. ಅಧ್ಯಕ್ಷೀಯ ನುಡಿಗಳ ನಾಡಿದ ಪ್ರಾಂಶುಪಾಲ ಡಾ ಬಿ ವೀರಪ್ಪನವರು ನೆರೆ ರಾಜ್ಯಗಳು ಹಾಗೂ ಹೊರದೇಶದವರನ್ನು ಆತ್ಮೀಯತೆಯಿಂದ ಪ್ರೀತಿಸುವ ಮನೋಭಾವ ನಮ್ಮ ಕನ್ನಡಿಗರದ್ದು ಎಂದರು.
ಜಿ.ರಕ್ಷಿತಾ ಮತ್ತು ತನ್ಮಯಿ ನಿರೂಪಿಸಿದರೆ ಕನ್ನಡ ನುಡಿ ನಾದ ನಮನವನ್ನು ಮಾನಸ ಬಿ ಎಂ ಮತ್ತು ತಂಡದವರು ಸಮರ್ಪಿಸಿದರು. ಸಂಜನಾ, ಅನುಷಾ, ಸಿಂಧು ಮತ್ತು ಪ್ರಾರ್ಥನಾ ತಂಡದವರು ಕನ್ನಡ ನೃತ್ಯಗಳನ್ನು ಪ್ರಸ್ತುತಪಡಿಸಿದರು. ವರದಿಯನ್ನು ವಂದನಾ ಟಿ ವಾಚಿಸಿದರು. ಶ್ರಾವಣಿ ವಿ ರಾಜ್ಯೋತ್ಸವದ ಹಿನ್ನೆಲೆ ಕುರಿತಾಗಿ ಮಾತನಾಡಿದರು. ಅತಿಥಿಗಳ ಪರಿಚಯವನ್ನು ದೀಪಾ ಎಚ್ ಎಸ್ ಹಾಗೂ ಶ್ರೇಯಾ ಟಿ ಮಾಡಿದರು. ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ನಿರ್ವಹಣೆಯನ್ನು ಸಿಂಚನಾ ಬಿ ಮತ್ತು ಸೃಷ್ಟಿ ಎ ಜೈನ್ ಮಾಡಿದರೆ ಮಾನಸ ಎಸ್ ವಂದನೆ ಸಲ್ಲಿಸಿದರು. ಮೈಸೂರು ಅರಮನೆ,ವಿಜಯನಗರದ ಗೋಳಗುಮ್ಮಟ, ಹಂಪಿ ದೇವಾಲಯ ಗೋಪುರ,ರಾಜ್ಯದ ಜಿಲ್ಲೆಗಳ ವಿಶೇಷತೆಗಳ ಮಾದರಿಗಳಲ್ಲದೇ ಆಕರ್ಷಕ ರಂಗೋಲಿಗಳನ್ನೂ ವಿದ್ಯಾರ್ಥಿಗಳು ನಿರ್ಮಿಸಿದ್ದರು.
-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತರು-
