DVS College of Arts, Science and Commerce ಸಸ್ಯ ವೈವಿಧ್ಯತೆಯ ಅರಿವು ಮೂಡಿಸುವುದರಿಂದ ಸಸ್ಯಗಳ ರಕ್ಷಣೆ ಹಾಗೂ ಸಂಶೋಧನೆಗೆ ನೆರವಾಗುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಅವಶ್ಯಕ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಕೆ.ಕೇಶವ್ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಸಸ್ಯ ವರ್ಗೀಕರಣ, ಸಸ್ಯ ಗುರುತಿಸುವುದು ಹಾಗೂ ಹರ್ಬೇರಿಯಂ ತಯಾರಿಕಾ ತಂತ್ರಗಳು ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಸ್ಯಗಳ ವರ್ಗೀಕರಣದಿಂದ ಗಿಡಗಳನ್ನು ಸರಿಯಾಗಿ ಗುರುತಿಸಲು ಸಹಕಾರಿಯಾಗುತ್ತದೆ. ವೈಜ್ಞಾನಿಕ ಹೆಸರುಗಳನ್ನು ತಿಳಿದುಕೊಳ್ಳುವುದರಿಂದ ಜಾಗತಿಕವಾಗಿ ಗುರುತಿಸಲು ನೆರವಾಗುತ್ತದೆ. ವಿದ್ಯಾರ್ಥಿಗಳು ಸಸ್ಯಶಾಸ್ತ್ರದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದುವುದು ಅವಶ್ಯಕ. ಪ್ರಾಯೋಗಿಕ ಜ್ಞಾನ ಹೊಂದುವುದು ಮುಖ್ಯ ಎಂದು ತಿಳಿಸಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ದಿನನಿತ್ಯ ಪಠ್ಯದ ಜತೆಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ವಿಷಯಗಳ ಜ್ಞಾನ ವಿಸ್ತಾರವಾಗಲು ಅನುಕೂಲವಾಗುತ್ತದೆ. ಡಿವಿಎಸ್ ಸಂಸ್ಥೆಯು ಪಠ್ಯ ಚಟುವಟಿಕೆಗಳ ಜತೆಯಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ವೈವಿಧ್ಯ ಚಟುವಟಿಕೆಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.
ಭಾರತೀಯ ಸಸ್ಯಶಾಸ್ತ್ರ ಸಮೀಕ್ಷೆಯ ಪಶ್ಚಿಮಘಟ್ಟ ಪ್ರಾದೇಶಿಕ ಕೇಂದ್ರದ ರಿಸರ್ಚ್ ಅಸೋಸಿಯೇಟ್ ಡಾ. ಜಗದೀಶ್ ವಿಷ್ಣು ದಳವಿ ಮತ್ತು ಶೃಂಗೇರಿ ಜೆಸಿಬಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಇ.ಎಸ್.ಕುಮಾರಸ್ವಾಮಿ ಉಡುಪ ಅವರು ಕಾರ್ಯಾಗಾರದ ಮಾಹಿತಿ ನೀಡಿದರು.
DVS College of Arts, Science and Commerce ತರಬೇತಿಯಲ್ಲಿ ಸಸ್ಯ ಗುರುತಿಸುವಿಕೆ, ಮಾದರಿ ಸಂಗ್ರಹಣೆ, ಒಣಗಿಸುವಿಕೆ, ಹರ್ಬೇರಿಯಂ ತಯಾರಿಕೆ ಹಾಗೂ ಟ್ಯಾಕ್ಸಾನಾಮಿಕ್ ಕೀ ಬಳಕೆಯ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಯಿತು.
ದೇಶೀಯ ವಿದ್ಯಾ ಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಕೋರಿದರು. ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಲಮಾಣಿ, ಇತರರಿದ್ದರು.
