ಸರ್ವೋದಯ ಎಂದರೆ ಎಲ್ಲರ ಪ್ರಗತಿ. ವ್ಯಕ್ತಿಯ ಒಳಿತು ಎಲ್ಲರ ಒಳಿತಿನಲ್ಲಿ ಅಡಕವಾಗಿದೆ. ಮಹಾತ್ಮ ಗಾಂಧಿ ಅವರ ಬೋಧನೆಗಳು ಸರ್ವೋದಯ ತತ್ವಗಳ ಸಾರ್ವತ್ರಿಕ ಪ್ರಸ್ತುತತೆಯನ್ನು ಹೇಳುತ್ತದೆ. ಸಾಮಾಜಿಕ ನ್ಯಾಯ, ಸಮಾನತೆ , ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸ್ವಾತಂತ್ರ‍್ಯ ಸಾಧಿಸುವುದು ಎಂದು ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಮನೋಹರ್ ಹೇಳಿದರು.
ಮಹಾತ್ಮ ಗಾಂಧೀಜಿ ಅವರ ಮಾಸ ಪ್ರಯುಕ್ತ ರಾಜ್ಯ ಸರ್ವೋದಯ ಮಂಡಳಿ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಸಮುದಾಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುತ್ತಿರುವ ಗಾಂಧಿ ಚಿಂತನೆ ಕುರಿತು ಜಾಗೃತಿ, ಸಂವಾದ ಭಾಷಣ ಸ್ಪರ್ಧೆ ಕಾರ್ಯಕ್ರಮದ ಅಂಗವಾಗಿ ಮತ್ತೂರಿನ ಶಾರದ ವಿಲಾಸ ಪ್ರೌಢಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧಿಕಾರದ ರಾಜಕೀಯದ ಬದಲಿಗೆ ಸಹಕಾರ ರಾಜಕೀಯವನ್ನು ಉತ್ತೇಜಿಸುವುದು. ಗ್ರಾಮ ಸ್ವಾವಲಂಬನೆಯ ಮೇಲೆ ಗಮನಹರಿಸುವುದು. ಸಾಮೂಹಿಕ ಯೋಗಕ್ಷೇಮ, ದುಡಿಮೆಯಲ್ಲಿ ಘನತೆ, ಸಮಾನ ಸಂಪತ್ತು ಹಂಚಿಕೆ ಮತ್ತು ಸಮುದಾಯ ಸ್ವಾವಲಂಬನೆಗೆ ಒತ್ತು ನೀಡುತ್ತದೆ. ಒಟ್ಟಾರೆಯಾಗಿ ಮಾನವೀಯತೆ ಮತ್ತು ಪ್ರಪಂಚದ ಸಮಗ್ರ ಕಲ್ಯಾಣದ ಕಡೆಗೆ ಆಶಯ ಹೊಂದಿದೆ ಎಂದು ತಿಳಿಸಿದರು.
ಎಲ್ಲಾ ವೃತ್ತಿಗಳು ಸಮಾನ ಮೌಲ್ಯವನ್ನು ಹೊಂದಿವೆ. ಶ್ರಮದಾಯಕ ಜೀವನವು ಬದುಕಲು ಯೋಗ್ಯವಾದ ಜೀವನವಾಗಿದೆ. ಸರ್ಕಾರದ ಪ್ರಗತಿಯ ಪ್ರಯೋಜನಗಳು ಸಮಾಜದ ಬಡ ಜನರಿಗೆ ತಲುಪಬೇಕು ಎಂದರು.
ರಾಜ್ಯ ಸರ್ವೋದಯ ಮಂಡಳಿ ರಾಜ್ಯಾಧ್ಯಕ್ಷ ಡಾ. ಎಚ್.ಎಸ್.ಸುರೇಶ್ ಮಾತನಾಡಿ, ಸರ್ವೋದಯ ಮಂಡಳಿ ಉದ್ಡೇಶ ಸಾಮಾಜಿಕ ನ್ಯಾಯ, ಸಮಾನತೆ, ಮತ್ತು ಅಹಿಂಸೆಯನ್ನು ಉತ್ತೇಜಿಸುವ ಮೂಲಕ ಎಲ್ಲರ ಕಲ್ಯಾಣವನ್ನು ಸಾಧಿಸುವುದು. ಇದು ಸಾಮೂಹಿಕ ಯೋಗಕ್ಷೇಮ ಮತ್ತು ಸ್ವಾವಲಂಬನೆಯ ಮೇಲೆ ಒತ್ತು ನೀಡುತ್ತದೆ ಎಂದರು.
ಸರ್ವೋದಯ ಮಂಡಳಿ ಜಿಲ್ಲಾ ಕಾರ್ಯದರ್ಶಿ ಜಿ.ವಿಜಯ್ ಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ಅವರ ಸತ್ಯ, ಶಾಂತಿ ಮತ್ತು ಸರಳತೆ, ಅಹಿಂಸೆ, ಸ್ವರಾಜ್ಯ ಮತ್ತು ಸ್ವದೇಶಿ ಬೋಧನೆಗಳ ಮೂಲಕ ಬದುಕಲು ಶಾಲಾ ಮಕ್ಕಳನ್ನು ಪ್ರೇರೇಪಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಘುನಾಥ್ ಮಾತನಾಡಿ, ಗಾಂಧಿ ಆದರ್ಶಗಳು ಮರೆಯಾಗುತ್ತಿರುವ ಆಗುತ್ತಿರುವ ಸಂದಂರ್ಭದಲ್ಲಿ ಮಕ್ಕಳಲ್ಲಿ ಗಾಂಧೀಜಿ ಅವರ ಸರ್ವೋದಯ ತತ್ವದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಉಪಯುಕ್ತ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೋದಯ ಮಂಡಳಿಯ ಸದಸ್ಯರಾದ ಬಸವರಾಜಪ್ಪ, ಶಾರದ ವಿಲಾಸ ಪ್ರೌಢಶಾಲೆಯ ಅನೇಕ ಶಿಕ್ಷಕರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ಸ್ಫರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
