DVS College of Arts, Science and Commerce ಸಂತ ಶ್ರೇಷ್ಠ ಕನಕದಾಸರು ಕೀರ್ತನೆಗಳಲ್ಲಿ ನೀಡಿರುವ ಸಂದೇಶಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಸನ್ಮಾರ್ಗದಲ್ಲಿ ಜೀವನ ಮುನ್ನಡೆಸಬೇಕು ಎಂದು ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕ ನಮಗೆ ಜಾತಿಯಿಂದ ಮುಖ್ಯವಾಗಬಾರದು. ಅವರ ನಡೆ, ನುಡಿ, ಅವರ ಕೀರ್ತನೆಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕು. ಸಮಾನತೆಯ ಸಮಾಜದ ಕನಸು ಕಂಡು ಜಾಗೃತಿ ಮೂಡಿಸಿದರು ಎಂದು ತಿಳಿಸಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮೋಹನ್‌ಕುಮಾರ್ ಮಾತನಾಡಿ, ಕನಕದಾಸರು ಒಬ್ಬ ಸಂತ ಕವಿಯಾಗಿದ್ದು, ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಮಹಾತ್ಮರು ಎಂದು ತಿಳಿಸಿದರು.
ಅಲ್ ಮೊಹಮ್ಮದ್ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ. ಮೋಹನ್ ಎಸ್ ಮಾತನಾಡಿ, ನಮ್ಮ ಅರಿವಿನ ವಿಸ್ತಾರ ಮಾಡಿದವರಲ್ಲಿ ದಾಸಶ್ರೇಷ್ಠರು ಕನಕರು. ಇವರ ಸಾಹಿತ್ಯವು ಭಿನ್ನವಾಗಿದ್ದು ನಮ್ಮ ತಿಳುವಳಿಕೆ ನವಿಕರಿಸುತ್ತದೆ ಎಂದು ಹೇಳಿದರು. ಪತ್ರಕರ್ತ ಗಣೇಶ್ ಬಿಳಗಿ ಮಾತನಾಡಿ, ಕನಕದಾಸರ ಸಾಮಾಜಿಕ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಸಂಯೋಜಕ ಎನ್.ಕುಮಾರಸ್ವಾಮಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಕೇತನಾ ಆರ್ತಿ, ರಾಜೀವ್, ಕನ್ನಡ ವಿಭಾಗದ ಡಾ. ಡಿ.ಬಿ.ಶಿವರುದ್ರಪ್ಪ, ಡಾ. ಎಸ್.ಕೆ.ಮಂಜುನಾಥ್ ಉಪಸ್ಥಿತರಿದ್ದರು.
DVS College of Arts, Science and Commerce ಕನಕದಾಸರ ಕೀರ್ತನೆಗಳನ್ನು ವಿದ್ಯಾರ್ಥಿಗಳು ಮತ್ತು ಬೋಧಕೇತರ ವರ್ಗದವರು ಹಾಡಿದರು. ಸಹಾಯಕ ಪ್ರಾಧ್ಯಾಪಕರಾದ ಅಭಿನಯ ಮತ್ತು ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ಸ್ವಾಗತಿಸಿದರು. ರಮ್ಯಾ ವಂದನಾರ್ಪಣೆ ನಡೆಸಿಕೊಟ್ಟರು.
