Kanakadasa Jayanti ನಮ್ಮ ನಾಡು ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳ, ಸಾಧು-ಸಂತರ ನೆಲೆವೀಡು. ಕನಕದಾಸರು ಸಂತರು, ಹರಿದಾಸರು ಮತ್ತು ಕವಿಗಳು. ಈ ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಇವರ ಕೊಡುಗೆ ಅನುಪಮವಾದದ್ದು.
ಇವರು ತಮ್ಮ ಕೀರ್ತನೆಗಳಲ್ಲಿ ಅನನ್ಯ ಭಕ್ತಿಯಿಂದ ಭಗವಂತನನ್ನು ಕೊಂಡಾಡಿ ದಾಸಶ್ರೇಷ್ಠರೆಂದು ಕರೆಯಿಸಿಕೊಂಡರು. ಅಲ್ಲದೆ ಅವರು ಹರಿಭಕ್ತಿಸಾರ, ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯಚರಿತೆಗಳಂತಹ ಉತ್ತಮ ಕೃತಿಗಳನ್ನು ರಚಿಸಿ ಕವಿಶ್ರೇಷ್ಠರೆಂದು ಪ್ರಸಿದ್ಧರಾದರು
. ಹುಟ್ಟಿನಿಂದ ಕೆಳವರ್ಗಕ್ಕೆ ಸೇರಿದ ಕನಕದಾಸರು ತಮ್ಮ ವಿಶಿಷ್ಟಗುಣಗಳಿಂದ, ಭಕ್ತಿ ವೈರಾಗ್ಯ ಕಾವ್ಯರಚನೆಯಿಂದ ವ್ಯಾಸರಾಯರ ಪ್ರಿಯಶಿಷ್ಯರಲ್ಲಿ ಒಬ್ಬರಾಗುವ ಯೋಗ್ಯತೆಯನ್ನು ಗಳಿಸಿಕೊಂಡು ದಾಸವರೇಣ್ಯರೆಂಬ ಗೌರವಕ್ಕೆ ಪಾತ್ರರಾದರು.
ಕನಕದಾಸರು ಜನಿಸಿದ್ದು ಬಾಡ ಎಂಬ ಗ್ರಾಮದಲ್ಲಿ. ನೆಲೆಸಿದ್ದು ಕಾಗಿನೆಲೆಯಲ್ಲಿ. ಆದಿಕೇಶವನ ಅಂಕಿತ. ಕುರುಬ ಜನಾಂಗಕ್ಕೆ ಸೇರಿದ ಇವರ ತಂದೆ ತಾಯಿ ಬೀರಪ್ಪ ಹಾಗೂ ಬಚ್ಚಮ್ಮ ವಿಭೂತಿ ಧರಿಸಿ ಶೈವಧರ್ಮವನ್ನು ಅನುಸರಿದರೂ ತಿರುಪತಿ ತಿಮ್ಮಪ್ಪನಲ್ಲಿ ಅಪಾರ ಭಕ್ತಿ. ತಿಮ್ಮಪ್ಪ ನಾಯಕನೆಂದೇ ಮಗನಿಗೆ ಹೆಸರಿಟ್ಟಿದ್ದರು.
ತಿಮ್ಮಪ್ಪ ನಾಯಕ ಕನಕನಾಯಕನಾದದ್ದು ಪವಾಡದ ರೀತಿಯಲ್ಲಿ. ತಮ್ಮ ಜೀವಿತದಲ್ಲಿಯೇ ವಿಜಯನಗರ ಸಾಮ್ರಾಜ್ಯದ ಏಳು-ಬೀಳುಗಳನ್ನು ಕಂಡವರು ಇವರು.
ಕನಕದಾಸರು ಸ್ವತಃ ಪಾಳೆಯಗಾರನಾಗಿ ಧನಸಂಪತ್ತನ್ನು, ವೈಭವವನ್ನು, ಅಧಿಕಾರವನ್ನು ಅನುಭವಿಸಿದರು.
ಆದರೆ ನಂತರದ ತಮ್ಮ ಜೀವನದಲ್ಲಿ ಇವುಗಳ ನಿಷ್ಪ್ರಯೋಜಕತೆಯನ್ನೂ, ಅನಿತ್ಯತೆಯನ್ನೂ ಮನಗಂಡು ಹರಿಗೆ ಶರಣಾಗಿ ಹರಿದಾಸರಾದರು.
Kanakadasa Jayanti ಕನಕದಾಸರ ಕೀರ್ತನೆಗಳು ಭಾವಪೂರ್ಣವಾಗಿವೆ. ಈ ಕೀರ್ತನೆಗಳ ಮೂಲಕ ಭಗವಂತನಲ್ಲಿ ಭಕ್ತಿಯನ್ನು ಸಾರುವುದರ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಕೆಲವು ಅಸಾಂಪ್ರದಾಯಿಕ ಆಚರಣೆಗಳನ್ನು ಒರೆಗಲ್ಲಿಗೆ ಹಚ್ಚಿ ಪ್ರಶ್ನಿಸಿದ್ದಾರೆ. ಸ್ವಸ್ಥಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿಯ ಅವಶ್ಯಕತೆ ಇದೆ. ಅದು ಭಗವದ್ಭಕ್ತಿಯಿಂದ ಲಭಿಸುವುದು.
ನಾಸ್ತಿಕತೆಯು ಮನುಷ್ಯನಲ್ಲಿ ತಲ್ಲಣವನ್ನು, ನಿರಾಸೆಯನ್ನು, ಭ್ರಮೆಯನ್ನು, ಹತಾಶೆಯನ್ನು ಉಂಟು ಮಾಡುತ್ತದೆ. ದೇವರಲ್ಲಿ ಅನನ್ಯ ಭಕ್ತಿಯನ್ನು ಸಾರುವ- ’ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’, ಮಂತಾದ ಅನೇಕ ಕೀರ್ತನೆಗಳನ್ನು ಕಾಣಬಹುದು. ಆದರೆ ಡಾಂಬಿಕ ಭಕ್ತಿಯನ್ನು ಅವರು ಎಂದೂ ಒಪ್ಪುತ್ತಿರಲಿಲ್ಲ. ‘ಜಪವಮಾಡಿದರೇನು ತಪವಮಾಡಿದರೇನು, ವಿಪರೀತ ಕಪಟಗುಣಕಲುಷವಿದ್ದವರು’ ಎಂದು ದೂಷಿಸಿದ್ದಾರೆ.
ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ.
ನೀ ದೇಹದೊಳಗೋ, ನಿನ್ನೊಳು ದೇಹವೋ?
ಗಂಧದಲಿ ಕುಸುಮವೋ, ಕುಸುಮದಲಿ ಗಂಧವೋ, ಗಂಧ, ಕುಸುಮಗಳೆರೆಡೂ ಆಘ್ರಾಣದೊಳಗೋ,
ಅಸಮಭವ “ಕಾಗಿನೆಲೆಯಾದಿಕೇಶವ” ಉಸುರಳವೆಲ್ಲಾ ನಿನ್ನೊಳಗೋ.
ಹಲವು ಜೀವವ ಒಂದೆಲೆ ನುಂಗಿತು, ಒಂದೆಲೆಯು ನುಂಗಿತು, ಗಿಡವ ನುಂಗಿತು, ಗಿಡದೊಡ ತೊಟ್ಟ ನುಂಗಿತು, ಗಿಡದ ತಾಯಿ, ತಂದೆಯ ನುಂಗಿತು, ಬಡಗ ಬಲ್ಲರೇ ಹೇಳಿ ಕನಕದಾಸ, ಕಾಗಿನೆಲೆಯಾದಿಕೇಶವ ಬಲ್ಲನೀ ಬೆಡಗ.
ನೂರು ಕನ್ಯಾದಾನವನು, ಭಾಗೀರಥಿ ಸ್ನಾನವನು, ಮಿಗೆ ಕೈಯಾರೆ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು ಊರುಗಳ ನೂರು ಅಗ್ರಹಾರಗಳ ಧಾರೆಯೆರೆದೆತ್ತಂತೆ ಫಲ ಕೈ ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ವವರಿಗೆ,
ಮೇರುಮಂದರನಿಭಸುವರ್ಣವ ವಾರಿಮಧ್ಯದೊಳಿರುವ ಅವನಿಯ ನಾರಿಯರ ಗಾಯತ್ರಿ ಪಶುಗಳನಿತ್ತ ಫಲಹವುದು ಧಾರುಣೀಯೊಳೀ ಹರಿಭಕ್ತಿಸಾರವನಾರು ಓದುವವರನುದಿನ ಚಾರು ವರಗಳನಿತ್ತು ರಕ್ಷಿಪನಾದಿಕೇಶವನು
ಲೋಕದೊಳಗತ್ಯಧಿಕವೆನಿಸುವ ಕಾಗಿನೆಲೆಸಿರಿಯಾದಿಕೇಶವ ತಾ ಕೃಪೆಯೊಳಗೆ ನುಡಿಸಿದನು ಈ ಹರಿಭಕ್ತಿಸಾರವನು, ಜೋಕೆಯಲಿ ಬರೆದೋದಿ ಕೇಳ್ವರ ನಾ ಕುಲದಿ ಮಾಧವನು ಕರುಣಿಪ ಶ್ರೀ ಕಮಲವಲ್ಲಭನು ಮಿಗೆ ಬಡದಾದಿಕೇಶವನು, ಬಡದಾದಿಕೇಶವನು.
ಕನಕದಾಸ ಜಯಂತಿಯ ಶುಭಾಶಯ.
ಕನಕದಾಸರಂತಹ ಮಹಾಮಹಿಮರ ಜನ್ಮನೆಲೆಯನ್ನು ಸಂಶೋಧಿಸಿ ಜಗತ್ತಿಗೆ ಪರಿಚಯಿಸಿದ್ದು ಇತಿಹಾಸ ಸಂಶೋಧಕರೂ, ಅಧ್ಯಯನಕಾರರು, ಶಿವಮೊಗ್ಗದವರೇ ಆದ ಶ್ರೀಯುತ ಡಾ.ಶಾಂತಾರಾಮ ಸಾಮಕರು, ಮೂರುವರ್ಷಗಳ ಕಾಲ ಅಮೂಲಾಗ್ರವಾಗಿ ಬಾಡದ ನೆಲೆಯಲ್ಲಿ ಕನಕದಾಸರ ಅರಮನೆಯನ್ನು ನೆಲದಾಳದಿಂದ ಹುಡುಕಿ ತೆಗೆದವರು ಜೊತೆಗೆ ಬಾರ್ಕೂರಿನ ರಾಜ್ಯಪಾಲರ ಅರಮನೆಯನ್ನೂ, ಹಿರಿಯ ಸಂಶೋಧಕರ ಜೊತೆಗೆ ತಾಳಗುಂದದ ಉತ್ಖನನದಲ್ಲೂ ಪಾತ್ರವಹಿಸಿದವರು. ಬಾಡದಲ್ಲಿ ಕನಕದಾಸರ ಅರಮನೆಯನ್ನು ಶೋಧಿಸುವಾಗ ಸ್ಥಳೀಯರಿಂದ ಹಲವಾರು ತೊಂದರೆಗಳನ್ನೂ ಅನುಭವಿಸಿದ ಕೆಟ್ಟ ಅನುಭವವಂತೂ ಹೇಳತೀರದು.
ಇಂತಹ ಸಾಧಕರನ್ನು ಕರ್ನಾಟಕ ಸರ್ಕಾರವಿರಲಿ, ಕನಕಪೀಠವೂ ಗೌರವಿಸದಿರುವುದು ಇತಿಹಾಸಕ್ಕೇ ಮಾಡಿದ ಅವಮಾನವೆಂದೇ ಹೇಳಬೇಕು. ಸ್ಥಳೀಯ ಕನ್ನಡ ಸಂಘಟನೆ, ಸಂಸ್ಥೆಗಳೂ ಸಹ ಇದರಿಂದ ಹೊರತಾಗಿಲ್ಲ. ಆದರೆ ಕನಕದಾಸರಂತಹ ಮಹಾಮಹಿಮ ದಾಸಶ್ರೇಷ್ಠರ ಜನ್ಮನೆಲೆಯನ್ನು ಜಗತ್ತಿನ ಎದುರಿನಲ್ಲಿ ತೆರೆದಿಟ್ಟ ಆತ್ಮಸಂತೋಷವೂ, ಅಭಿಮಾನವೂ ಇವರಿಗಿದೆ.
ಇದೀಗ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ (ನೋಂ) ಯ ತಂಡದೊಂದಿಗೆ ಇನ್ನೋರ್ವ ದಾಸಶ್ರೇಷ್ಠ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರೆಂದೂ, ಐದು ಲಕ್ಷ ಕೀರ್ತನೆಗಳನ್ನು, ಉಗಾಭೋಗಗಳನ್ನೂ, ಮುಂಡಿಗೆಗಳನ್ನೂ ರಚಿಸಿದ್ದ ಮಲೆನಾಡಿನವರಾದ ಅದರಲ್ಲೂ ವಿಜಯನಗರದ ಅರಸರ ಕಾಲದಲ್ಲಿ ತೀರ್ಥಹಳ್ಳಿ(ತೀರ್ಥರಾಜಪುರ ಅಗ್ರಹಾರ)ಯಆರಗ ಹದಿನೆಂಟು ಕಂಪಣವೆಂದೇ ಹೆಸರಾಗಿದ್ದ ಆರಗದ ನವಕೋಟಿ ನಾರಾಯಣರೆಂದೇ ಬಿರುದಾಂಕತರಾಗಿದ್ದು, ಭಗವಂತನ ದರ್ಶನ ದಿಂದ ವೈರಾಗ್ಯಭರಿತರಾಗಿ ತಮ್ಮೆಲ್ಲಾ ಆಸ್ತಿಯನ್ನು ದಾನಮಾಡಿ ಆದದ್ದೆಲ್ಲಾ ಒಳಿತೇ ಆಯಿತು ಎಂದು ಭಕ್ತಿ ಚಳುವಳಿಗೆ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮುನ್ನುಡಿ ಬರೆದ ಶ್ರೀ ಪುರಂದರ ದಾಸರ ಜನ್ಮ ನೆಲೆಯ ಶೋಧಕ್ಕೆ ತಮ್ಮ ಶಿಷ್ಯವೃಂದದೊಡನೆ ಸಜ್ಜಾಗಿದ್ದಾರೆ. ಇವರ ಸಂಶೋಧನೆಗೆ ದಾಸವರೇಣ್ಯರ, ಭಗವಂತನ ಆಶೀರ್ವಾದ ವಿರಲಿ, ಪುರಂದರದಾಸರ ಜನ್ಮನೆಲೆಯು ಐತಿಹಾಸಿ ದಾಖಲೆಯಿಂದ ಜಗತ್ತಿಗೆ ಪ್ರಚಾರವಾಗೆಲೆಂದು ಆಶಿಸೋಣ.
ಲೇಖನ:
ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ(ನೋಂ), ಶಿವಮೊಗ್ಗ.
6361124316
