ಮನಸ್ಸು ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಭಾವಸಾರ ವಿಜನ್ ಇಂಡಿಯಾ ವೈಭವ್ ಶಿವಮೊಗ್ಗ ಸಂಸ್ಥೆಯಿಂದ ನಗರದ ರೋಟರಿ ಮಿಡ್ ಟೌನ್ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಸಭೆ ಕಾರ್ಯಕ್ರಮದಲ್ಲಿ 60ರ ನಂತರ ನಮ್ಮ ಜೀವನಶೈಲಿ ವಿಷಯ ಕುರಿತು ಮಾತನಾಡಿದರು.
60ರ ನಂತರ ಶರೀರದ ಶಕ್ತಿ ಕಡಿಮೆಯಾಗಬಹುದು. ಆದರೆ ಸರಿಯಾದ ಅಭ್ಯಾಸಗಳಿಂದ ನೀವು ಸಂತೋಷವಾಗಿ ಆರೋಗ್ಯವಾಗಿ ಬದುಕಬಹುದು. ಪೋಷಕಾಂಶ ತುಂಬಿದ ಆಹಾರ ಸೇವನೆ ಮಾಡಬೇಕು. ಹಣ್ಣು, ತರಕಾರಿ, ಸಂಪೂರ್ಣ ಧಾನ್ಯ, ಕಾಳು, ಹಾಲು ಸೇವಿಸಬೇಕು. ಸಾಕಷ್ಟು ನೀರು ಕುಡಿಯಬೇಕು ಎಂದು ತಿಳಿಸಿದರು.
ಪ್ರತಿ ದಿನ 30 ನಿಮಿಷ ವಾಕ್ ಅಥವಾ ಯೋಗ ಮಾಡುವುದು ಒಳ್ಳೆಯದು. ಹೃದಯದ ಆರೋಗ್ಯಕ್ಕೆ ಸರಿಯಾದ ವ್ಯಾಯಾಮ ಅಗತ್ಯ. ಪ್ರತಿದಿನ 7–8 ಗಂಟೆ ನಿದ್ರೆ ಮಾಡಬೇಕು. ನಿದ್ರೆ ಸರಿಯಾಗದಿದ್ದರೆ ಧ್ಯಾನ ಅಥವಾ ಲಘು ಪ್ರಾಣಾಯಾಮ ಪ್ರಯತ್ನಿಸಬೇಕು. ಧ್ಯಾನ, ಪಾಠ, ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಹೇಳಿದರು.
ಭಾವಸಾರ ವಿಜನ್ ಇಂಡಿಯಾ ಕಾರ್ಯ ಮಂಡಳಿ ಸದಸ್ಯ ಶಾಂತಕುಮಾರ್ ಸಾಕ್ರೆ, ವಿಜಯಕುಮಾರ್ ಬೇದ್ರೆ ಅವರನ್ನು ಸನ್ಮಾನಿಸಲಾಯಿತು. ವಿಜಯ ಬೇದ್ರೆ ಅವರು ಇತ್ತೀಚೆಗೆ ಅತ್ಯಂತ ಕಡಿಮೆ ದರದಲ್ಲಿ 15 ದಿನ 34 ಯಾತ್ರಾರ್ಥಿಗಳಿಗೆ ಚಾರ್‌ದಾಮ್ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿ ಹಿಂದಿರುಗಿರುತ್ತಾರೆ.
ಭಾವಸಾರ ವಿಜನ್ ಇಂಡಿಯಾ ವೈಭವ್ ಶಿವಮೊಗ್ಗ ಸಂಸ್ಥೆ ಅಧ್ಯಕ್ಷ ಹರೀಶ್ ಶಂಕರ್ ತೇಲ್ಕರ್, ಕಾರ್ಯದರ್ಶಿ ಎಂ.ಎನ್.ರಮೇಶ್, ಭಾವಸಾರ ಸಮಾಜ ಶಿವಮೊಗ್ಗ ಅಧ್ಯಕ್ಷ ಟಿ.ವಿ.ಗಜೇಂದ್ರನಾಥ್, ಸಂತೋಷ್ ಸಾಕ್ರೆ ಮತ್ತಿತರರು ಉಪಸ್ಥಿತರಿದ್ದರು.
ಮನಸ್ಸು, ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ
Date:
