Shimoga News “ಪ್ರೀತಿ ವಿಶ್ವಾಸ ಕೊಡುವುದು ಸಹಾ ಸಮಾಜ ಸೇವೆ”
-ಶ್ರೀ ನಿಮಿಷಾಂಬಾ ದೇವಿ ಮಹೋತ್ಸವದಲ್ಲಿ ಎಸ್ ಪಿ ಉಮಾ ಪ್ರಶಾಂತ್-
” ಮೌಲ್ಯಗಳ ಬಗ್ಗೆ ಮಕ್ಕಳಿಗೆ ಮನೆಯಲ್ಲಿ ಹೇಳಬೇಕು” -ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ-
ದಾವಣಗೆರೆ.ನ. 3. ಪ್ರೀತಿ ವಿಶ್ವಾಸಗಳನ್ನು ಸಮಾಜಕ್ಕೆ ಕೊಡಬೇಕು, ಇದೂ ಸಹಾ ಸಮಾಜ ಸೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಅವರು ನಿನ್ನೆ ಸಂಜೆ ಶ್ರೀ ನಿಮಿಷಾಂಬಾ ದೇವಿ ದೇವಸ್ಥಾನದ 67ನೇ ವಾರ್ಷಿಕ ಮಹೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರಿಗೆ ಸಾಮಾಜಿಕ ಭದ್ರತೆ ದೊರೆತಾಗ ಅವರು ಮತ್ತಷ್ಟು ಉನ್ನತ ಸ್ಥಾನಕ್ಕೆ ಬರುತ್ತಾರೆ ಎಂದರು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಧಾನ ಭಾಷಣ ಮಾಡಿದ ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಭಾರತೀಯ ಮೌಲ್ಯಗಳು ವಿಶ್ವದಲ್ಲಿ ಉನ್ನತವಾಗಿದ್ದು ಇವುಗಳ ಮಹತ್ವವನ್ನು ಮನೆಯಲ್ಲಿನ ಹಿರಿಯರು ಮಕ್ಕಳಿಗೆ ಆಸಕ್ತಿದಾಯಕವಾಗಿ ಹೇಳುತ್ತಿರಬೇಕು, ಸನಾತನ ಧರ್ಮವು ಸಾಮರಸ್ಯದ ಬದುಕನ್ನೇ ಪ್ರತಿಪಾದಿಸುತ್ತಿದ್ದು ನಮ್ಮ ದೇವಾಲಯ ಸಂಸ್ಕೃತಿಯು ಕೇವಲ ಭಕ್ತಿ ಸಮರ್ಪಣೆಗೆ ಸೀಮಿತವಾಗದೆ ನಿತ್ಯವೂ ಅಧ್ಯಯನ, ಅಧ್ಯಾಪನ ಅಂದರೆ ಸದ್ವಿಚಾರಗಳ ಕಲಿಕೆ ಕಲಿಸುವಿಕೆ, ಸಂಗ್ರಹಣೆ ವಿತರಣೆ ಅಂದರೆ ಭಕ್ತರಿಂದ ಬಂದದ್ದನ್ನು ಅಗತ್ಯವಿರುವವರಿಗೆ ವಿತರಿಸುವುದು ಹಾಗೂ ತತ್ವಜ್ಞಾನ ಮತ್ತು ಸುಸಂಸ್ಕೃತ ಕಲೆಗಳ ರಚನೆ ಪ್ರಸ್ತುತಿ ಅಸ್ವಾದನೆಗೆ ಅವಕಾಶ ಮಾಡಿಕೊಡುವುದೇ ಆಗಮೋಕ್ತ ಸನಾತನ ದೇವಾಲಯ ಸಂಸ್ಕೃತಿಯ ಪರಮೋದ್ದೇಶವಾಗಿದೆ. ತಾಯಂದಿರು ಸಂಜೆ ವೇಳೆ ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಬಾಯಿ ಪಾಠದ ರೂಪದಲ್ಲಿ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸುತ್ತಿರಬೇಕು ಎಂದು ಕರೆ ಕೊಟ್ಟರು.
Shimoga News ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರ್ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರ ಬದುಕಿನ ಆದರ್ಶಗಳನ್ನು ವಿವರಿಸಿದರು.
ಶ್ರೀ ಸೋಮ ವಂಶ ಆರ್ಯ ವಂಶ ಕ್ಷತ್ರಿಯ ಸಮಾಜ ಹಾಗೂ ಮಹಿಳಾ ಸಮಾಜಗಳ ವತಿಯಿಂದ ನೆರವೇರಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಗಣೇಶ ರಾವ್ ಡೋಂಗರ್ ಸೋನೆ ವಹಿಸಿದ್ದರು. ಮಂಟಪ ಶಿಲ್ಪಿ ಹಾಗೂ ಸಾಧಕರಿಗೆ ಸನ್ಮಾನ, ಸಮಾಜದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಬಹುಮಾನ ವಿತರಣೆ, ಮಕ್ಕಳಿಂದ ಶಾಸ್ತ್ರೀಯ ನೃತ್ಯ ರೂಪಕ ಪ್ರದರ್ಶನ, ಸಹನಾ ಮಂಜುನಾಥ್ ಕವಿತಾ ಕಿರಣ್ ರಿಂದ ಗೀತ ಗಾಯನ ಮುಂತಾಗಿ ನೆರವೇರಿದ ಕಾರ್ಯಕ್ರಮದ ಪ್ರಾರ್ಥನೆಯನ್ನು ಕವಿತಾ ಕಿರಣ್ ಬಂಟ್ವಾಳ್ಕರ್ ಮಾಡಿದರೆ ಸ್ವಾಗತವನ್ನು ಸಮಾಜದ ಉಪಾಧ್ಯಕ್ಷ ಪಿಎಮ್ ಬಸವರಾಜ್ ಪೌರಾಣಕರ್ ಕೋರಿದರು. ಮಹಿಳಾ ಸಮಾಜದ ಅಧ್ಯಕ್ಷೆ ಇಂದುಮತಿ ಎಸ್ ಬಂಟ್ವಾಳಕರ್ ಪ್ರಾಸ್ತಾವಿಕ ನುಡಿಗಳನಾಡಿದರು. ಸೋಮ ವಂಶ ಆರ್ಯ ಕ್ಷತ್ರಿಯ ಸಮಾಜ ಹಾಗೂ ಮಹಿಳಾ ಸಮಾಜದ ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಕಾರ್ಯಕಾರಿ ಸದಸ್ಯರು ಮುಂತಾಗಿ ಎಲ್ಲರೂ ಉಪಸ್ಥಿತರಿದ್ದರು.ರೇಖಾ ವೈ ಶಂಕಪಾಳ್ ವಂದನೆ ಸಲ್ಲಿಸಿದರು.
