Karnataka Rajyotsava 2025 ಕನ್ನಡ ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಅನಿವಾರ್ಯತೆ ಮತ್ತು ಹೊಸ ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಕುರಿತು ಹೊಸ ನೀತಿಯನ್ನು ತರುವ ಸಿದ್ಧತೆಯಲ್ಲಿದ್ದೇವೆ. ಕನ್ನಡ ನಾಡಿನ ಇತಿಹಾಸ, ಪರಂಪರೆಗಳ ನೆನಪುಗಳನ್ನು ಹೊಸ ತಲೆಮಾರಿಗೆ ಉಳಿಸಿ ಬೆಳೆಸುವ ಹಾಗೂ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಇಂದು ನಗರದ ಶ್ರೀ ಕಂಠೀರಣ ಹೊರಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾವಿರಾರು ವರ್ಷಗಳಷ್ಟು ಹಳೆಯ ಇತಿಹಾಸವುಳ್ಳ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ ಎಂದರು.
ಶಿಕ್ಷಣದಲ್ಲಿ ಕನ್ನಡ ಭಾಷೆಯ ನಿರ್ಲಕ್ಷ್ಯವು ಹಲವು ಸಮಸ್ಯೆಗಳನ್ನು ಹುಟ್ಟಿ ಹಾಕಿದೆ. ಜಗತ್ತಿನ ಮುಂದುವರೆದ ಭಾಷೆಗಳಿಗೆ ಇಲ್ಲದ ಬಿಕ್ಕಟ್ಟು ಇಂದು ಕನ್ನಡದಂಥ ಭಾಷೆಗೆ ಬಂದಿದೆ. ಮುಂದುವರೆದ ದೇಶಗಳ ಮಕ್ಕಳು ತಮ್ಮ ತಾಯಿ ನುಡಿಗಳಲ್ಲಿಯೆ ಯೋಚಿಸುತ್ತಾರೆ, ಕಲಿಯುತ್ತಾರೆ ಮತ್ತು ಕನಸು ಕಾಣುತ್ತಾರೆ. ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಿದೆ. ಇಂಗ್ಲೀಷು, ಹಿಂದಿಯಂಥ ಭಾಷೆಗಳು ನಮ್ಮ ಮಕ್ಕಳ ಪ್ರತಿಭೆಯನ್ನು ಭಾಷೆಯ ಕಾರಣಕ್ಕೆ ದುರ್ಬಲಗೊಳಿಸುತ್ತಿವೆ. ಹಾಗಾಗಿ ಮಾತೃಭಾಷೆಯಲ್ಲಿಯೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸೂಕ್ತ ಕಾನೂನುಗಳನ್ನು ತರಬೇಕಾದ ಅಗತ್ಯವಿದೆ.
ನಮಗಿರುವ ಸವಾಲುಗಳನ್ನೆ ಅವಕಾಶವಾಗಿ ಮಾರ್ಪಡಿಸುವ ಶಕ್ತಿ ನಮ್ಮ ಯುವ ತಲೆಮಾರಿಗಿದೆ. ಯುವ ತಲೆಮಾರು ಎದ್ದು ನಿಂತು ಕನ್ನಡ ಮತ್ತು ಕರ್ನಾಟಕವನ್ನು ಜಗತ್ತಿನ ಮುಂದುವರೆದ ಸಮಾಜಗಳ ಮಟ್ಟಕ್ಕೆ ನಿಲ್ಲಿಸಬೇಕಾಗಿದೆ ಎಂದರು.
ಒಂದು ನಾಡನ್ನು ಕಟ್ಟುವುದು ಸರಳವಾದ ಸಂಗತಿಯಲ್ಲ. ನಾಡೊಂದರ ಸಮಗ್ರ ಅಭಿವೃದ್ಧಿಯೆಂದರೆ ರಸ್ತೆ, ಸೇತುವೆ, ವಿದ್ಯುತ್, ರೈಲು, ವಿಮಾನ, ಸುಸಜ್ಜಿತ ಕಟ್ಟಡಗಳಷ್ಟೇ ಅಲ್ಲ. ಆ ನಾಡಿನ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ, ತಮ್ಮ ಜೊತೆಯಲ್ಲಿನ ಮಕ್ಕಳ ಭಾಷೆ, ಬದುಕು, ಧರ್ಮ, ಜಾತಿ ಹಾಗೂ ಇನ್ನಿತ್ಯಾದಿ ಭಿನ್ನತೆಗಳನ್ನು ಸಹನೆಯಿಂದ ನೋಡುವುದನ್ನು ಕಲಿಸುವುದೂ ಮುಖ್ಯ.
ಜಗತ್ತಿನ ಮುಖ್ಯ ದೇಶಗಳಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಅನ್ವೇಷಣೆಗಳಿಗೆ ಸರಿಸಾಟಿಯಾಗಿ ನಿಲ್ಲುವಂಥ ರೀತಿಯಲ್ಲಿ ಆಲೋಚನೆಗಳನ್ನು ಕಲಿಸುವ ವಾತಾವರಣವೂ ಬಹಳ ಮುಖ್ಯ. ಈ ವರ್ಷ ಕನ್ನಡಕ್ಕೆ ಬೂಕರ್ ಪ್ರಶಸ್ತಿಯನ್ನು ಶ್ರೀಮತಿ ಬಾನು ಮುಸ್ತಾಕ್ ಮತ್ತು ದೀಪಾ ಭಾಸ್ತಿಯವರು ತಂದುಕೊಡುವ ಮೂಲಕ ನಮ್ಮ ಭಾಷೆಯ ಶಕ್ತಿಯನ್ನು ವಿಶ್ವ ವೇದಿಕೆಗೆ ಕೊಂಡೊಯ್ದಿದ್ದಾರೆ. ಅವರನ್ನೂ ಈ ಸಂದರ್ಭದಲ್ಲಿ ಹೃದಯ ಪೂರ್ವಕವಾಗಿ ಅಭಿನಂದಿಸಿದರು.
Karnataka Rajyotsava 2025 ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ನಮ್ಮ ಸರ್ಕಾರ ಬದ್ದ- ಸಿ.ಎಂ.ಸಿದ್ದರಾಮಯ್ಯ:
ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಆರ್ಟಿಫಿಷಿಯಲ್ ತಂತ್ರಜ್ಞಾನದಿಂದ ಉದ್ಯೋಗ ನಷ್ಟವಾಗಬಹುದು ಎಂಬ ಆತಂಕ ಎದುರಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ತಂತ್ರಜ್ಞಾನ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ. ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಿ ಎಂದು ಕರೆ ನೀಡಿದರು.
1956 ರಂದು ಏಕೀಕರಣಗೊಂಡ ನಮ್ಮ ಕರ್ನಾಟಕ ರಾಜ್ಯ ಉದಯವಾಗಿ ನವೆಂಬರ್ 1, 2025 ಕ್ಕೆ 69 ವರ್ಷ ಪೂರೈಸಿ 70 ನೇ ವರ್ಷಕ್ಕೆ ಮುನ್ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಎಲ್ಲ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಮೈಸೂರಿನ ವಿದ್ಯಾರ್ಥಿ ರಾಮಸ್ವಾಮಿ, ಬಳ್ಳಾರಿಯ ರಂಜಾನ್ ಸಾಬ್ ಮುಂತಾದವರಿಗೆ ತಲೆಬಾಗಿ ನಮಿಸುತ್ತೇನೆ. ಏಕೀಕರಣ ಚಳುವಳಿಯ ಬೀಜಗಳನ್ನು ಬಿತ್ತಿ, ಅದನ್ನು ಮುನ್ನಡೆಸಿದ ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್.ಎಚ್. ದೇಶಪಾಂಡೆ, ಕೌಜಲಗಿ ಶ್ರೀನಿವಾಸ ರಾವ್, ಕೆಂಗಲ್ ಹನುಮಂತಯ್ಯ ಮುಂತಾದ ಮಹನೀಯರನ್ನು ಹೃದಯ ತುಂಬಿ ಸ್ಮರಿಸಿ, ಇವರೆಲ್ಲರ ಹೋರಾಟದ ಫಲವೆ ಇಂದಿನ ಕರ್ನಾಟಕ. ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದ ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಕನ್ನಡದ ಸಾಹಿತ್ಯ ಸಂಪತ್ತು ಸಾಕಷ್ಟು ಸಮೃದ್ಧಗೊಂಡಿದೆ. ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿದೆ.
ಶಿಕ್ಷಣ ಕ್ಷೇತ್ರದ ಬಲವರ್ಧನೆ- ಸಿ.ಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಶತಮಾನ ಪೂರೈಸಿರುವ ಸುಮಾರು 3000 ಸರ್ಕಾರಿ ಶಾಲೆಗಳಿವೆ. ರಾಜ್ಯದಲ್ಲಿ ಶಾಲಾ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಸಲುವಾಗಿ ರಾಜ್ಯಾದ್ಯಂತ 2,500 ಕೋಟಿ. ರೂ. ವೆಚ್ಚದಲ್ಲಿ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸಿ ಪ್ರತಿ ಶಾಲೆಯನ್ನು 4 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಅಲ್ಪಸಂಖ್ಯಾತ ಸಮುದಾಯಗಳು ಮುಖ್ಯವಾಹಿನಿಗೆ ಬರುವ ಜೊತೆಗೆ ಸುಲಭವಾಗಿ ಸಮಾಜದಲ್ಲಿ ಬೆರೆಯುವಂತೆ ಪ್ರಾಥಮಿಕ ಕನ್ನಡವನ್ನು ಮದರಸಾ ಶಿಕ್ಷಣದ ಭಾಗವಾಗಿ ಕಲಿಸಲು ಪ್ರಸ್ತುತ ವರ್ಷದಲ್ಲಿ 180 ಮದರಸಾಗಳಲ್ಲಿ ಕನ್ನಡ ಕಲಿಸಲಾಗುತ್ತಿದೆ. ಇದನ್ನು ರಾಜ್ಯದಲ್ಲಿರುವ 1500 ಮದರಸಾಗಳಿಗೆ ವಿಸ್ತರಿಸಲಾಗುವುದು. ಇದಕ್ಕಾಗಿ ರೂ.483 ಕೋಟಿ ವೆಚ್ಚದಲ್ಲಿ 100 ಉರ್ದು ಶಾಲೆಗಳನ್ನು ಕೆ.ಪಿ.ಎಸ್. ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶಿಕ್ಷಣ ಕ್ಷೇತ್ರದ ಬಲವರ್ಧನೆಗಾಗಿ ಈ ವರ್ಷ 65,000 ಕೋಟಿ ರೂ.ಗಳಿಗೂ ಹೆಚ್ಚಿನ ಸಂಪನ್ಮೂಲಗಳನ್ನು ನಮ್ಮ ಸರ್ಕಾರ ವಿನಿಯೋಗಿಸುತ್ತಿದೆ. ನಮ್ಮ ವಸತಿ ಶಾಲೆಗಳು, ವಸತಿ ನಿಲಯಗಳಲ್ಲಿ 8.36 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ವಸತಿ ಶಾಲೆಗಳು, ವಸತಿ ನಿಲಯಗಳನ್ನು ಸ್ಥಾಪಿಸುತ್ತಿದ್ದೇವೆ. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಪ್ರತ್ಯೇಕ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಕ್ಯಾನ್ಸರ್ ನಿಂದ ಬಾಧಿತರಾದ ಮಕ್ಕಳಿಗೆ ವೈದ್ಯಕೀಯ ಬೆಂಬಲದೊಂದಿಗೆ ಶಿಕ್ಷಣವನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿ ಮತ್ತು ತರಬೇತಿಗಳನ್ನು ನಡೆಸಲಾಗುತ್ತಿದೆ. 2024ರಲ್ಲಿ 14,499 ಪದವಿ ಪ್ರಾಥಮಿಕ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5,267 ಮತ್ತು ಇತರೆ ಪ್ರದೇಶಗಳಲ್ಲಿ 5,000 ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. 800 ಹೊಸ ಪಿಯು ಉಪನ್ಯಾಸಕರ ನೇಮಕಾತಿ ಮಾಡಲಾಗಿದೆ. ಹೊಸದಾಗಿ 18000 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ಅನುದಾನಿತ ಶಾಲೆಗಳಿಗೆ 5,000 ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಲು ಅನುಮತಿ ನೀಡಲಾಗಿದೆ ಎಂದರು.
ಇತ್ತೀಚೆಗೆ ಪ್ರೊ.ಸುಖ್ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗವು ವರದಿಯನ್ನು ನೀಡಿದೆ. ವರದಿಯನ್ನು ಗಂಭೀರವಾಗಿ ಪರಿಶೀಲಿಸಿ ಅದರ ಪೂರ್ಣ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಜೊತೆಗೆ ಮಕ್ಕಳ ಬದುಕು ರೂಪುಗೊಳ್ಳಲು ಪೋಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಹೊಸ ತಲೆಮಾರು ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಮೊಬೈಲ್ ಫೋನು, ಇಂಟರ್‍ನೆಟ್, ಆರ್ಟಿಫೀಷಿಯಲ್ ಇಂಟೆಲಿಜೆನ್ಸುಗಳು ಇಬ್ಬಾಯ ಖಡ್ಗದಂತೆ ಕೆಲಸ ಮಾಡುತ್ತಿವೆ.
ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ನಲ್ಲಿ 2024-25 ರಲ್ಲಿ ಕರ್ನಾಟಕವು ಮಹಾರಾಷ್ಟ್ರವನ್ನು ಹಿಂದೆ ಹಾಕಿ, ಮೊದಲ ಸ್ಥಾನಕ್ಕೆ ಏರಿದೆಯೆಂದು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಅಂಕಿ ಅಂಶಗಳು ಹೇಳುತ್ತಿವೆ. 50,107 ಕೋಟಿ ರೂ.ಗಳಿಗೂ ಹೆಚ್ಚಿನ ವಿದೇಶಿ ನೇರ ಹೂಡಿಕೆಯು ರಾಜ್ಯದಲ್ಲಿ ಆಗಿದೆ. ಇಡೀ ದೇಶದ ಹೂಡಿಕೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಲು ಶೇ.51 ರಷ್ಟಿದೆ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದರು.
ಕನ್ನಡವನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ರಕ್ಷಿಸಬೇಕು- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರ್ನಾಟಕ ಸಂಸ್ಕೃಯ ಬೀಡಾಗಿದ್ದು, ಕನ್ನಡ ಕೇವಲ ನುಡಿಯಲ್ಲ ನಮ್ಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನಡೆದವರಿಗೆ ನೆರಳು, ದಾರಿದೀಪ. ಕನ್ನಡ ಎನ್ನುವುದು ಜೀವನದ ವಿಧಾನ. ಇಂತಹ ಕನ್ನಡವನ್ನು ಇಂಗ್ಲೀಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆದಿಕವಿ ಪಂಪ, ಬಸವಣ್ಣ, ಅಲ್ಲಮಪ್ರಭು, ಕನಕದಾಸರು, ಪುರಂದರದಾಸರು, ಕುವೆಂಪು, ಬೇಂದ್ರೆ, ಮಾಸ್ತಿ ಹೀಗೆ ದೊಡ್ಡ ಪರಂಪರೆ ಹೊಂದಿರುವ ನಮ್ಮ ಸಾಹಿತ್ಯವನ್ನು ಇಂದಿನ ಮಕ್ಕಳು ಓದಬೇಕು ಎಂದರು.
ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಈ ನೆಲದಲ್ಲಿ ವೈಶಿಷ್ಟ್ಯ ಅಡಗಿದೆ. ಇಲ್ಲಿಗೆ ಬಂದವರು ಯಾವುದೇ ಕಾರಣಕ್ಕೂ ಮರಳಿ ಹೋಗುವುದಿಲ್ಲ. ಎಲ್ಲರನ್ನೂ ಒಳಗೊಂಡಿರುವ ನಮ್ಮ ಕರ್ನಾಟಕ ಶಾಂತಿಯಿಂದ ಕೂಡಿದೆ. ಹೊರಗಿನಿಂದ ಬಂದವರು ಸಹ ಊಟ, ವಸತಿ ಗಳಿಸಿಕೊಂಡಿದ್ದಾರೆ. ಇದೇ ನಮ್ಮ ಕನ್ನಡ ತಾಯಿ, ಭೂಮಿಯ ವಿಶೇಷ. ಕರ್ನಾಟಕದಲ್ಲಿರುವ ವಾತಾವರಣ ದೇಶದ ಯಾವ ಭಾಗದಲ್ಲಿಯೂ ಇಲ್ಲ. ನಮ್ಮ ಸಂಸ್ಕøತಿ ಹಾಗೂ ನೆಲ, ಜಲಕ್ಕೆ ಎಲ್ಲರನ್ನೂ ಆಕರ್ಷಿಸುವ ಗುಣವಿದೆ ಎಂದರು.
ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಲು ವಾಣಿಜ್ಯ ಮಳಿಗೆಗಳು, ಅಂಗಡಿಗಳು ಸೇರಿದಂತೆ ಎಲ್ಲಾ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಸಲು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ ಎಂದರು.
ಕನ್ನಡಿಗರ ತ್ಯಾಗ, ಬಲಿದಾನ, ಶ್ರಮವನ್ನು ನಾವು ಸ್ಮರಿಸಬೇಕು. ಅನೇಕ ಹಿರಿಯರು ಈ ನೆಲ, ಜಲ, ಭಾಷೆ, ಬಾವುಟದ ಗೌರವವನ್ನು ಕಾಪಾಡಿದ್ದಾರೆ. ದೇಶದ ಯಾವ ರಾಜ್ಯವೂ ಧ್ವಜ, ನಾಡಗೀತೆ ಹೊಂದಿಲ್ಲ. ಆದರೆ ನಾವು ಇವೆರಡನ್ನೂ ಹೊಂದಿದ್ದೇವೆ. ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆಯನ್ನೂ ಸ್ಥಾಪಿಸಿರುವುದು ಹೆಮ್ಮೆಯ ವಿಷಯ ಎಂದರು.
ಕುವೆಂಪು ಅವರು ಹೇಳಿರುವಂತೆ ಕರ್ನಾಟಕ ಶಾಂತಿಯ ತೋಟ. ನಾವೆಲ್ಲರೂ ಜಾತಿ, ಧರ್ಮಗಳನ್ನು ಬಿಟ್ಟು ಸಹಬಾಳ್ವೆಯಿಂದ ಕರ್ನಾಟಕದ ಏಳಿಗೆಗೆ ದುಡಿಯಬೇಕು. ಜಾಗತಿಕವಾಗಿ ಬೆಂಗಳೂರು ಬೆಳೆಯುತ್ತಿದೆ. ಪ್ರಪಂಚದ ಜನರು ಕರ್ನಾಟಕವನ್ನು ಗಮನಿಸುತ್ತಿದ್ದಾರೆ. ಕನ್ನಡ, ಕರ್ನಾಟಕವನ್ನು ಜಾಗತಿಕ ಮಟ್ಟಕ್ಕೆ ನಾವೆಲ್ಲರೂ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಶಾಲಾ ಮಕ್ಕಳ ಪಥಸಂಚಲನ ನೋಡುತ್ತಿದ್ದರೆ ತಮ್ಮ ಬಾಲ್ಯದ ದಿನಗಳು ನೆನಪಾಗುತ್ತದೆ ಎಂದ ಅವರು ತಮ್ಮ ಪ್ರೌಢಶಾಲೆಯ ದಿನಗಳ ಮೆಲುಕು ಹಾಕುತ್ತಾ, ಕರ್ನಾಟಕದ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.
ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ಸಂಸ್ಕøತಿ ನಮ್ಮ ಉಸಿರು- ಸಚಿವ ಮಧು ಬಂಗಾರಪ್ಪ:
ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದು.. ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ನಮ್ಮ ಸಂಸ್ಕøತಿ ನಮ್ಮ ಉಸಿರು. ಕನ್ನಡಕ್ಕೆ ಮಾತ್ರ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ಸಂಗತಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು 51,000 ಅತಿಥಿ ಶಿಕ್ಷಕರನ್ನು ಒಂದೇ ಬಾರಿಗೆ ನೇಮಕ ಮಾಡಿಕೊಳ್ಳಲಾಗಿದೆ. ಅತಿಥಿ ಶಿಕ್ಷಕರ ಗೌರವ ಧನವನ್ನು ರೂ. 2000/-ಗಳಿಗೆ ಹೆಚ್ಚಿಸಿದೆ. 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮೂರು ಪರೀಕ್ಷಾ ಮಾದರಿಯನ್ನು ಪರಿಚಯಿಸಿದ್ದರಿಂದ ಶೇಕಡಾ 79.71ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪಿ.ಯು.ಸಿಯಲ್ಲಿ ಶೇಕಡಾ 85.19ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದರು.
ಶಾಲಾ ಕೊಠಡಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ರೂ, 850 ಕೋಟಿಗಳ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಇಲಾಖೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಕ್ಕಳ ಹಿತದೃಷ್ಠಿಯಿಂದ ದಿನಾಂಕ: 14-11-2025ರಂದು ಮಕ್ಕಳ ದಿನಾಚರಣೆ ಅಂಗವಾಗಿ ಮೆಗಾ ಪೋಷಕರ-ಶಿಕ್ಷಕರ ಸಭೆಯನ್ನು ಏಕಕಾಲಕ್ಕೆ ನಡೆಸಲಾಗುವುದು ಎಂದರು.
2026-27ನೇ ಶೈಕ್ಷಣಿಕ ಸಾಲಿನಿಂದ ಬೆಳಗಾವಿ ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ 07 ಸರ್ಕಾರಿ ಶಾಲೆಗಳ ಆವರಣದಲ್ಲಿ ಹೆಚ್ಚುವರಿಯಾಗಿ ಕನ್ನಡ ಮಾಧ್ಯಮ ವಿಭಾಗಗಳನ್ನು ಪ್ರಾರಂಭಿಸಲು ಹಾಗೂ 02 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳಾಗಿ ಉನ್ನತೀಕರಿಸಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಗಡಿಭಾಗಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಗೆ ಸಂಪೂರ್ಣ ಆದ್ಯತೆ ನೀಡಲಾಗುವುದು ಎಂದರು.
ವಿವಿಧ ಶಾಲಾ ಮಕ್ಕಳು ಪಥಸಂಚಲನ ಮಾಡಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಸ್ವಾಗತಿಸಿದರು ಹಾಗೂ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಬಿ.ಆರ್.ಪಾಟೀಲ್, ಗೋವಿಂದರಾಜು ಹಾಗೂ ಪೊಲೀಸ್ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷರಾದ ಡಾ.ಎಂ.ಎ. ಸಲೀಂ ಮತ್ತಿತರರು ಉಪಸ್ಥಿತರಿದ್ದರು
