(ಬೆಂಗಳೂರು ಪ್ರತಿನಿಧಿಯಿಂದ) CM Siddharamaiah ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ತಾಯಿ ಭುವನೇಶ್ವರಿ ಪ್ರತಿಮೆಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಸಂಭ್ರಮದ ಕನ್ನಡದ ಹಬ್ಬ ರಾಜ್ಯೋತ್ಸವಕ್ಕೆ ಚೈತನ್ಯಶಾಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಈ ದಿನ ಹೆಮ್ಮೆಯಿಂದ ಸ್ಮರಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.
CM Siddharamaiah ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಶಿಕ್ಷಣ, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಇಲ್ಲಿ ನೆಲೆಸಿರುವ, ಬದುಕು ಕಟ್ಟಿಕೊಂಡಿರುವ ಎಲ್ಲರೂ ಕನ್ನಡಿಗರೇ, ನಮ್ಮವರೇ. ನಾವು – ನೀವು ಎಲ್ಲರೂ ಸೇರಿ ಕನ್ನಡವನ್ನು ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ.
ನೆಲದ ಭಾಷೆ ಮನದ ಭಾಷೆಯಾಗಲಿ, ಕನ್ನಡದ ಚಿಗುರು ಎಲ್ಲರೆದೆಯೊಳಗೆ ಮೊಳಕೆಯೊಡೆಯಲಿ.
ನಾಡಬಂಧುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಜೈ ಭುವನೇಶ್ವರಿ, ಜೈ ಕರ್ನಾಟಕ ಎಂದಿದ್ದಾರೆ.
