ಮಹಾತ್ಮ ಗಾಂಧಿ ಅವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ವೋದಯ ಮಂಡಲ ರಾಜ್ಯಾಧ್ಯಕ್ಷ ಸುರೇಶ್ ಹೇಳಿದರು.
ಗಾಂಧೀಜಿಯವರ ಮಾಸ ಅಂಗವಾಗಿ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಸಮುದಾಯ ಸಂಸ್ಥೆಗಳಲ್ಲಿ ಆಯನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಭಾಷಣ ಸ್ಪರ್ಧೆ, ಜಾಗೃತಿ ಕಾರ್ಯಕ್ರಮ, ಚಿಂತನೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿ ಅವರ ತತ್ವ, ಆದರ್ಶ ಗುಣಗಳು, ತ್ಯಾಗ ಹಾಗೂ ಅಹಿಂಸಾ ಮಾರ್ಗಗಳನ್ನು ಇಂದಿನ ಯುವ ಜನತೆ, ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಸದೃಢವಾದ ಸಮಾಜ ನಿರ್ಮಾಣ ಮಾಡಬಹುದು. ರಾಮರಾಜ್ಯ ಆಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ಗಾಂಧೀಜಿ ಅವರ ನಡೆನುಡಿಯಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಜೀವನ ಮೌಲ್ಯ ಹಾಗೂ ಸಾತ್ವಿಕ ಮನೋಭಾವ ಮೂಡುತ್ತದೆ. ಮಹಾರಾಷ್ಟ್ರದಲ್ಲಿ ಕೈದಿಯೊಬ್ಬ ಗಾಂಧೀಜಿ ಅವರ ಜೀವನ ಚರಿತ್ರೆಯಿಂದ ಪ್ರೇರಣೆಗೊಂಡು ಮನಪರಿವರ್ತನೆಯಾಗಿದ್ದ ಎಂದರು.
ಕರ್ನಾಟಕ ಸರ್ವೋದಯ ಮಂಡಲದ ಜಿಲ್ಲಾಧ್ಯಕ್ಷ ಆರ್.ಮನೋಹರ್ ಮಾತನಾಡಿ, ಗಾಂಧೀಜಿ ಅವರ ಜೀವನವು ಎಂದೆಂದಿಗೂ ಪ್ರೇರಣಾದಾಯಕ. ಅವರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವುದರಿಂದ ನಮ್ಮ ಜೀವನವನ್ನು ಹಸನು ಮಾಡಿಕೊಳ್ಳಬಹುದು ಎಂದು ಹೇಳಿದರು.
ಸರ್ವೋದಯ ಮಂಡಲದ ಜಿಲ್ಲಾ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಶಿವಮೊಗ್ಗ ಜಿಲ್ಲಾದ್ಯಂತ ಕಾಲೇಜುಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಾಂಧೀಜಿ ಅವರ ಮೌಲ್ಯಗಳನ್ನು ಪ್ರಚಾರ ಮಾಡಲಾಗುವುದು. ವಿದ್ಯಾರ್ಥಿಗಳು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಗಣೇಶ್ ಭಟ್ ಮಾತನಾಡಿ, ಗಾಂಧೀಜಿ ಅವರ ಮೌಲ್ಯ ಆಧಾರಿತ ಜೀವನವು ನಮಗೆಲ್ಲ ಮಾದರಿಯಾಗಿದೆ. ಇಲ್ಲಿರುವ ಒಬ್ಬ ವಿದ್ಯಾರ್ಥಿಗಳು ಸಹ ಇಂತಹ ಪವಿತ್ರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೇಶಕ್ಕಾಗಿ ದುಡಿದ ಮಹನಿಯರ ಸ್ಮರಣೆಯಿಂದ ಇತಿಹಾಸದ ಪರಿಚಯವಾಗುತ್ತದೆ ಎಂದರು.
ಸಮಾರಂಭದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಶಿಲ್ಪಾ ಪಾಟೀಲ್, ದೈಹಿಕ ಶಿಕ್ಷಣ ಅಧಿಕಾರಿ ಡಾ. ರೋಹನ್ ಡಿಕಾಸ್ಟ, ಸಹಾಯಕ ಪ್ರಾಧ್ಯಾಪಕ ರಜತ್ ದೀಕ್ಷಿತ್, ಗೌರೀಶ್ ಬಾಡ್ಕರ್ ಮತ್ತಿತರರು ಇದ್ದರು.
