ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ನ ವೈದ್ಯರು ಕೈಫೋಸಿಸ್ (ಬೆನ್ನುಮೂಳೆ ಮುಂದಕ್ಕೆ ಬಾಗಿರುವ ಸಂಕೀರ್ಣ ಸಮಸ್ಯೆ) ಸಮಸ್ಯೆ ಹೊಂದಿದ್ದ 66 ವರ್ಷದ ಪುರುಷ ರೋಗಿಗೆ ಅತ್ಯಂತ ಸಂಕೀರ್ಣ ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಸಾಧನೆ ಮಾಡಿದೆ.
ಈ ಸಮಸ್ಯೆ ಹೊಂದಿರುವವರಲ್ಲಿ ಬೆನ್ನುಮೂಳೆ ಮುಂದಕ್ಕೆ ಬಾಗಿ ವಕ್ರವಾಗಿರುವುದರಿಂದ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ಚಿಕಿತ್ಸಾ ಪ್ರಕ್ರಿಯೆ ಕಷ್ಟಕರವಾಗುತ್ತದೆ. ಆದರೆ ಹಿರಿಯ ಕಾರ್ಡಿಯೊಥೊರಾಸಿಕ್ ಸರ್ಜನ್ ಡಾ. ಬಾಲಸುಬ್ರಮಣಿ ಆರ್ ನೇತೃತ್ವದ ವೈದ್ಯಕೀಯ ತಂಡವು ಸುಮಾರು ಆರು ಗಂಟೆಗಳ ಕಾಲ ಈ ಅಪರೂಪದ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.
ರೋಗಿಯು ಗಂಭೀರ ತ್ರಿವಳಿ ನಾಳ ಸಮಸ್ಯೆದಿಂದ ಬಳಲುತ್ತಿದ್ದರು. ಜೊತೆಗೆ ಹೈಪರ್‌ಟೆನ್ಷನ್ ಇತಿಹಾಸವೂ ಇತ್ತು. ಅಸ್ಥಿರ ಆಂಜೈನಾ ಮತ್ತು ಉಸಿರಾಟದ ತೊಂದರೆಗಳನ್ನೂ ಹೊಂದಿದ್ದ ಅವರ ಹೃದಯದ ಕಾರ್ಯ ದಕ್ಷತೆ ಕಡಿಮೆಯಾಗಿದ್ದು, ಡಯಾಸ್ಟೊಲಿಕ್ ಡಿಸ್‌ಫಂಕ್ಷನ್ ಸಮಸ್ಯೆ ಕಂಡುಬಂದಿತ್ತು. ಶಸ್ತ್ರಚಿಕಿತ್ಸೆ ಮಾಡುವುದು ಅವಶ್ಯವಾಗಿತ್ತು.
ವೈದ್ಯರಿಗೆ ಸವಾಲೊಡ್ಡಿದ ಪ್ರಕರಣ
ಕೈಫೋಸಿಸ್ ರೋಗಿಯ ಮೇಲೆ ಶಸ್ತ್ರಚಿಕಿತ್ಸೆ ನಡೆಸಲು ಭಾರಿ ಶಸ್ತ್ರಚಿಕಿತ್ಸಾ ಪರಿಣತಿ ಬೇಕು. ಕೈಫೋಸಿಸ್‌ನಿಂದ ಉಂಟಾಗುವ ಬೆನ್ನುಮೂಳೆಯ ವಕ್ರತೆಯು ಪಕ್ಕೆಲುಬುಗಳು ಮತ್ತು ಎದೆ ಕುಹರದ ಸಹಜ ಸಾಲನ್ನು ಬದಲಾಯಿಸುತ್ತದೆ. ಹೃದಯ ಶಸ್ತ್ರಚಿಕಿತ್ಸೆಗೆ ಸವಾಲೊಡ್ಡುತ್ತದೆ. ಬೆನ್ನುಮೂಳೆಯ ವಕ್ರತೆಯ ಕಾರಣದಿಂದ ಶಸ್ತ್ರಚಿಕಿತ್ಸಾ ಟೇಬಲ್‌ನಲ್ಲಿ ರೋಗಿಯನ್ನು ಸರಿಯಾಗಿ ಇರಿಸುವುದು ಕೂಡ ಕಷ್ಟಕರವಾಗುತ್ತದೆ. ಹೃದಯದ ಮೇಲೆ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ರೋಗಿಯ ಎದೆ ಮತ್ತು ತಲೆಯನ್ನು ಹೆಚ್ಚುವರಿ ಬೆಂಬಲ ನೀಡಿ ಎತ್ತಿಹಿಡಿಯಬೇಕು. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಬೇಕಿರುತ್ತದೆ.
ಈ ಕುರಿತು ಮಾತನಾಡಿದ ಡಾ. ಬಾಲಸುಬ್ರಮಣಿ ಅವರು, “ಕೈಫೋಸಿಸ್ ಸಮಸ್ಯೆಯು ಮನುಷ್ಯನ ಸಾಮಾನ್ಯ ಥೊರಾಸಿಕ್ ರಚನೆಯನ್ನೇ ಬದಲಾಯಿಸುತ್ತದೆ. ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಕಷ್ಟಗೊಳಿಸುತ್ತದೆ. ರೋಗಿಯ ವಿಶಿಷ್ಟ ದೇಹರಚನೆಗೆ ತಕ್ಕಂತೆ ಶಸ್ತ್ರಚಿಕಿತ್ಸಾ ಯೋಜನೆಯನ್ನು ಹೊಂದಿಸಿಕೊಳ್ಳಬೇಕು” ಎಂದು ಹೇಳಿದರು.
ಈ ಪ್ರಕರಣದಲ್ಲಿ ವೈದ್ಯರು ಮೂರು ಗ್ರಾಫ್ಟ್ ಗಳನ್ನು ಬಳಸಿ ಆಫ್- ಪಂಪ್ ಸಿಎಬಿಜಿ (ಒಪಿಸಿಎಬಿಜಿ) ಶಸ್ತ್ರಚಿಕಿತ್ಸೆ ನಡೆಸಿದರು. ಮರುದಿನ ರೋಗಿಗೆ ಎಕ್ಸ್‌ಟ್ಯೂಬೇಟ್ (ಟ್ಯೂಬ್ ಅನ್ನು ತೆಗೆಯುವುದು) ಮಾಡಲಾಯಿತು ಮತ್ತು ನಂತರ ರೋಗಿಯು ನಿಧಾನಕ್ಕೆ ಚೇತರಿಸಿಕೊಂಡರು.
ಕೈಫೋಸಿಸ್ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆ ಪ್ರಕ್ರಿಯೆ ಕೂಡ ಕಾರ್ಯವಿಧಾನದಷ್ಟೇ ಸವಾಲಿನದ್ದಾಗಿದೆ. ಎದೆಭಾಗದಲ್ಲಿನ ನೋವಿನ ಕಾರಣಕ್ಕೆ ರೋಗಿಗಳು ಬಾಗಿದ ಭಂಗಿಯನ್ನು ಅನುಸರಿಸಬಹುದು. ಅದನ್ನೇ ಅಭ್ಯಾಸವಾಗಿಸಿಕೊಳ್ಳಬಹುದು. ಈಗಾಗಲೇ ಕೈಫೋಸಿಸ್ ಹೊಂದಿರುವವರಿಗೆ ಇದರಿಂದ ಶ್ವಾಸಕೋಶದ ವಿಸ್ತರಣೆ ಕಡಿಮೆಯಾಗಿ ಉಸಿರಾಟದ ತೊಂದರೆ ಉಂಟಾಗಬಹುದು. ಶ್ವಾಸಕೋಶ ಕುಗ್ಗುವಿಕೆ (ಅಟೆಲೆಕ್ಟಾಸಿಸ್), ಕತ್ತನ್ನು ನಿಧಾನವಾಗಿ ತಿರುಗಿಸುವುದು, ಚೇತರಿಕೆ ನಿಧಾನವಾಗುವುದು ಮತ್ತು ಫಿಸಿಯೋಥೆರಪಿ ಸಂದರ್ಭದಲ್ಲಿಯೂ ಸವಾಲು ಇರಬಹುದು. ಫಿಸಿಯೋಥೆರಪಿಸ್ಟ್ ಗಳು ಕೈಫೋಸಿಸ್ ಸಮಸ್ಯೆಯು ಎದೆಗೂಡಿನ ಚಲನೆಯನ್ನು ಮತ್ತಷ್ಟು ಕಷ್ಟಕರಗೊಳಿಸಬಹುದು ಎಂದು ಹೇಳುತ್ತಾರೆ. ಹಾಗಾಗಿ ಚೇತರಿಕೆಯ ಪ್ರಕ್ರಿಯೆಯಗಳಲ್ಲಿ ಉಸಿರಾಟ ವ್ಯಾಯಾಮಗಳು ಬಹಳ ಮುಖ್ಯವಾಗುತ್ತವೆ.
“ರೋಗಿಗಳಿಗೆ ಶಸ್ತ್ರಚಿಕಿತ್ಸೆಯಾದರೆ ಮಾತ್ರ ಸಾಲದು, ಸೂಕ್ತವಾದ ಹೃದಯ ಆರೈಕೆ ಅಗತ್ಯವಾಗಿರುತ್ತದೆ. ಪರಿಣತರ ಮೇಲ್ವಿಚಾರಣೆಯಲ್ಲಿ ವ್ಯಾಯಾಮ ಮತ್ತು ಫಿಸಿಯೋಥೆರಪಿ ಅಗತ್ಯವಿದೆ. ಸೂಕ್ತ ಆಹಾರ ಮತ್ತು ಪೌಷ್ಟಿಕತೆ ಹಾಗೂ ಶಸ್ತ್ರಚಿಕಿತ್ಸೆಯ ನಂತರದ ಒತ್ತಡವನ್ನು ಕಡಿಮೆ ಮಾಡಲು ಕೌನ್ಸೆಲಿಂಗ್ ಕೂಡ ಬೇಕು” ಎನ್ನುತ್ತಾರೆ ಡಾ. ಬಾಲಸುಬ್ರಮಣಿ.
ಡಾ. ಶರತ್ ಪಿ ಸಂಗನಗೌಡರ್, ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗೀಸ್ ಪಿ ಜಾನ್, ಮಾರ್ಕೇಟಿಂಗ್ ಮ್ಯಾನೇಜರ್ ಶೈಲೇಶ್ ಎಸ್, ಎನ್ ಮುಂತಾದವರು ಉಪಸ್ಥಿತರಿದ್ದರು.
