Pace PU College ಶ್ರೀ ಭಗವದ್ಗೀತೆಯಲ್ಲಿ ವಿಶ್ವ ಜೀವನದ ರಹಸ್ಯ ಅಡಗಿದೆ ಎಂದು ವಾಗ್ಮಿ ಜಿ.ಎಎಸ್.ನಟೇಶ್ ಹೇಳಿದರು.
ಅವರು ಶಿವಮೊಗ್ಗ ನಗರದ ಪೇಸ್ ಪಿ.ಯೂ.ಕಾಲೇಜು ಮತ್ತು ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ಸ್ವರ್ಣರಶ್ಮಿ ಟ್ರಸ್ಟ್ ಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಭಗವದ್ಗೀತೆಯಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಇಡೀ ವಿಶ್ವಕ್ಕೆ ಭಾರತದ ಸತ್ವವನ್ನು ಎತ್ತಿ ತೋರಿಸುವುದೇ ಭಗವದ್ಗೀತೆ. ರಾಮ ನಡೆದ ದಾರಿಯಲ್ಲಿ ನಾವು ನಡೆಯಬೇಕು. ಆದರೆ ಶ್ರೀ ಕೃಷ್ಣ ನಡೆದ ಹಾದಿಯಲ್ಲಿ ನಡೆಯಲಾಗುವುದಿಲ್ಲ. ಬದಲಾಗಿ ಶ್ರೀ ಕೃಷ್ಣ ಹೇಳಿದ ಮಾತುಗಳನ್ನು ಕೇಳಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದ ಅವರು ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯನ್ನು ಓದದ ಭಾರತ ಭಾರತವೇ ಅಲ್ಲ. ಭಾರತೀಯರಾಗಲು ಪ್ರತಿಯೊಬ್ಬರೂ ಈ ಮೂರು ಗ್ರಂಥಗಳನ್ನು ಓದಲೇಬೇಕು ಎಂದು ಪ್ರತಿಪಾದಿಸಿದರು.
ದೇಹವನ್ನು ನಾಶಪಡಿಸಬಹುದು. ಆದರೆ ಆತ್ಮವನ್ನು ನಾಶಪಡಿಸಲು ಸಾಧ್ಯವಿಲ್ಲ. ಮನಸ್ಸನ್ನು ಹೃದಯ ನಿಯಂತ್ರಿಸಬೇಕು. ಪ್ರಾಣಶಕ್ತಿಯನ್ನು ಶಿರಸ್ಸು ನಿಯಂತ್ರಿಸಬೇಕು. ಇದುವೇ ಯೋಗ ಶಕ್ತಿ. ಭಗವದ್ಗೀತೆ ತಿಳಿಸುವುದೇ ಇದನ್ನು ಎಂದರು.
ಗೀತೆ ಭಾರತದ ಸರ್ವಸ್ವ. ಪ್ರತಿಯೊಂದು ಸಂಶಯ, ಸಮಸ್ಯೆಗಳಿಗೆ ಪರಿಹಾರ ಭಗವದ್ಗೀತೆಯಲ್ಲಿದೆ. ಪೂಜಾ, ಕರ್ತವ್ಯ ಪಾಲನೆ, ಧ್ಯಾನ, ತ್ಯಾಗ, ತಪಸ್ಸುಗಳ ಬಗ್ಗೆ ಹೇಳುವ ಭಗವದ್ಗೀತೆ ಇಂದ್ರಿಯ ನಿಗ್ರಹ ಶಕ್ತಿಯನ್ನು ಹೊಂದಿದೆ.
ಅಪ್ಪ, ಅಮ್ಮ, ವಿದ್ಯಾ ಗುರುಗಳಿಗೆ ಗೌರವ ಕಡಿಮೆಯಾಗದಂತೆ ವಿದ್ಯಾರ್ಥಿಗಳು ಗಮನಿಸಬೇಕು. ಜೀವನದಲ್ಲಿ ಸರಳವಾಗಿದ್ದವರು, ಅಹಂಕಾರ ರಹಿತರು ಮಾಡಿದಷ್ಟು ಸಾಧನೆಯನ್ನು ದುಡ್ಡಿದ್ದವರು ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
Pace PU College ಈ ಸಂದರ್ಭದಲ್ಲಿ ಅಭಿಯಾನ ಸಮಿತಿಯ ಡಾ.ಬಾಲಕೃಷ್ಣ ಹೆಗಡೆ, ಪಿ.ಯೂ.ಕಾಲೇಜಿನ ಪ್ರಾಚಾರ್ಯ ಪ್ರೊ.ವಿಶ್ವನಾಥಯ್ಯ, ಉಪನ್ಯಾಸಕರಾದ ಡಾ.ಮೈತ್ರೇಯಿ ಆದಿತ್ಯಪ್ರಸಾದ್, ಬಸವರಾಜ್, ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ಮುಖ್ಯೋಪಾದ್ಯಾಯರಾದ ಪವನಕುಮಾರ್ ಮೊದಲಾದವರಿದ್ದರು.
