ನೀರನ್ನು ಸೃಷ್ಟಿಸುವ ಶಕ್ತಿಯಂತೂ ನಮಗಿಲ್ಲ, ಆದರೆ ಪೂರ್ವಜರು ನಿರ್ಮಿಸಿದ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಬಹುದು. ಪ್ರಕೃತಿಯಿಂದ ವರದಾನವಾಗಿ ಬಂದಿರುವ ಈ ಸಂಪನ್ಮೂಲವನ್ನು ಭವಿಷ್ಯದ ಪೀಳಿಗೆಗಾಗಿ ಉಳಿಸಿ, ಬೆಳೆಸಿ, ಸುಸ್ಥಿರ ಮತ್ತು ಸಮೃದ್ಧ ಕರ್ನಾಟಕ ಕಟ್ಟುವ ಜವಾಬ್ದಾರಿ ನಮ್ಮೆಲ್ಲರದ್ದು, ಈ ನಿಟ್ಟಿನಲ್ಲಿ ಸಚಿವರಾದ ಶ್ರೀ ಎನ್.ಎಸ್.ಬೋಸರಾಜು ಅವರ ಮಾರ್ಗದರ್ಶನದಲ್ಲಿ ಸಣ್ಣ ನೀರಾವರಿ ಇಲಾಖೆಯು ಮಹತ್ವಾಕಾಂಕ್ಷೆಯ ʼನೀರಿದ್ದರೆ ನಾಳೆʼ ಎಂಬ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ʼನೀರಿದ್ದರೆ ನಾಳೆʼ ಎಂಬ ವಿಶೇಷ ಪರಿಕಲ್ಪನೆಯ ಮೂಲಕ ನೀರಿನ ಮಹತ್ವವನ್ನು ತಿಳಿಸುವುದು, ರಾಜ್ಯದ ಜಲಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು, ನಾಗರೀಕರನ್ನು ನೀರಿನ ಸಂರಕ್ಷಣೆಯ ಅಭಿಯಾನದಲ್ಲಿ ಪಾಲುದಾರರನ್ನಾಗಿ ಮಾಡುವುದು ಮುಖ್ಯ ಉದ್ದೇಶವಾಗಿದೆ.
ಮೊದಲನೇ ಹಂತದಲ್ಲಿ 27 ತಾಲೂಕುಗಳ 525 ಅಂತರ್ಜಲ ಬಳಕೆ ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದ 100ಕ್ಕೂ ಹೆಚ್ಚು ಅಂತರ್ಜಲ ಬಳಕೆಯ ಗ್ರಾಮ ಪಂಚಾಯಿತಿಗಳಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ 2025-26 ನೇ ಸಾಲಿನಲ್ಲಿ ರೂ.200 ಕೋಟಿ ವೆಚ್ಚದಲ್ಲಿ ಅಂತರ್ಜಲ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗಿದೆ.
ʼನೀರಿದ್ದರೆ ನಾಳೆʼ ಎಂಬ ಪರಿಕಲ್ಪನೆಯು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಎಂಬುದನ್ನು ನಾವು ಮೆರೆಯೋಣ. ಸುಂದರ ಹಾಗೂ ಸುಭದ್ರ ನಾಳೆಗಳ ಗ್ಯಾರಂಟಿಗಾಗಿ ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳೋಣ ಎಂದು ರಾಜ್ಯ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.
