Indian Medical Association ಸಾಮಾನ್ಯ ನಾಗರಿಕರಲ್ಲಿ ಜೀವ ರಕ್ಷಿಸುವ ಕೌಶಲ್ಯವನ್ನು ಬೆಳೆಸುವುದು ಅತ್ಯಂತ ಅಗತ್ಯ ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಯಿಂದ ನಗರದ ವಿವಿಧೆಡೆ ಆಯೋಜಿಸಿದ್ದ ಹೃದಯ ಶ್ವಾಸಕೋಶ (ಸಿಪಿಆರ್) ಪುನಶ್ಚೇತನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಎಲ್ಲರೂ ಅರಿತಿರಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆದೇಶದಂತೆ ರಾಷ್ಟ್ರೀಯ ಮಟ್ಟದಲ್ಲಿ ಐಎಂಎ ಕಾರ್ಯಕ್ರಮ ಆಯೋಜಿಸಿದ್ದು, ಐಎಂಎ ಶಿವಮೊಗ್ಗ ಈಗಾಗಲೇ ಸಿಪಿಆರ್ ಕಾರ್ಯಕ್ರಮವನ್ನು ಮೂರು ವರ್ಷಗಳಿಂದ ಹಲವಾರು ಕಡೆ ಸಂಯೋಜಿಸಿಕೊಂಡು ಬಂದಿದೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ ಮಾತನಾಡಿ, ಸಾಮಾಜಿಕ ಜಾಗೃತಿಗೆ, ಜೀವ ರಕ್ಷಣಾ ಶಿಕ್ಷಣಕ್ಕೆ ಹಾಗೂ ಸೇವಾ ಮನೋಭಾವ ಬೆಳೆಸುವ ಪ್ರಯತ್ನದಲ್ಲಿ ಐಎಂಎ ಅರ್ಥಪೂರ್ಣ ಹೆಜ್ಜೆ ಇಟ್ಟಿದೆ. ಮುಂದಿನ ದಿನಗಳಲ್ಲಿಯೂ ಕೂಡ ಸಿಪಿಆರ್ ಅರಿವು ಕಾರ್ಯಕ್ರಮಗಳನ್ನು ವಿವಿಧ ಕಡೆ ಮಾಡುವ ಯೋಜನೆಯನ್ನು ಸಂಘ ಹೊಂದಿದೆ. ಸಿಪಿಆರ್ ಕಲಿತು ಜೀವ ಉಳಿಸಲು ಪ್ರತಿಯೊಬ್ಬರೂ ಸನ್ನದ್ಧರಾಗಿರಲಿ ಎಂಬುದು ಐಎಂಎ ಶಿವಮೊಗ್ಗದ ಮಹತ್ತರ ಧ್ಯೇಯವಾಗಿದೆ ಎಂದು ಹೇಳಿದರು.
ಶ್ರೀಧರ್ ನರ್ಸಿಂಗ್ ಹೋಂ, ಶಿವಮೊಗ್ಗ ಡಯಾಗ್ನೋಸ್ಟಿಕ್ ಸೆಂಟರ್, ಅನಿಕೇತನ ಪಾರ್ಕ್, ರಾಜೇಂದ್ರ ನಗರ, ಸ್ನೇಹವಾಹಿನಿ ಮಹಿಳಾ ಸಹಕಾರ ಸಂಘ, ಫ್ರೀಡಂ ಪಾರ್ಕ್, ಶಿವಮೊಗ್ಗ ಸೈಕಲ್ ಕ್ಲಬ್, ಶ್ರೀರಾಮಪುರ ಪ್ರಾಥಮಿಕ ಚಿಕಿತ್ಸಾ ಕೇಂದ್ರ, ಸೀಗೆಹಟ್ಟಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ, ವೈಎಚ್‌ಎಐ ತರುಣೋದಯ ಘಟಕ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕ್ಯಾಂಟೀನ್ ಸಿಬ್ಬಂದಿ, ಓಟಿ ಸಿಬ್ಬಂದಿ ಮತ್ತು ಆಟೋ ಡ್ರೈವರ್ ಸೆಕ್ಯೂರಿಟಿ ಗಾರ್ಡ್ಗಳು, ಕಮಲ ನೆಹರು ರಾಷ್ಟ್ರೀಯ ಕಾಲೇಜಿನ ವಿದ್ಯಾರ್ಥಿನಿಯರು, ಎನ್‌ಸಿಸಿ ವಿದ್ಯಾರ್ಥಿನಿಯರು ಸಿಪಿಆರ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
Indian Medical Association ಡಾ. ಎಚ್.ಎಲ್.ಶಶಿಧರ್ ಅವರು ಶಿವಮೊಗ್ಗ ಐಎಂಎ ಸಿಪಿಆರ್ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಡಾ. ಕೆ ಅನುಪ್ ರಾವ್, ಡಾ. ಕೌಸ್ತುಭ ಅರುಣ್, ಡಾ. ಶ್ವೇತಾ ಬಾದಾಮಿ, ಡಾ. ಶಂಭುಲಿಂಗ ಬಂಕೊಳ್ಳಿ, ಡಾ. ಅಜಯ್ ಬಡ್ಡಿ, ಡಾ. ಸಂಧ್ಯಾ ಪಣಜಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಶಿವಮೊಗ್ಗ ನಗರದ ವಿವಿಧೆಡೆ ವೈದ್ಯರು ಮತ್ತು ತರಬೇತಿದಾರರ ಮಾರ್ಗದರ್ಶನದಲ್ಲಿ ಸಿಪಿಆರ್ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಹೃದಯ ನಿಲ್ಲುವ ಸ್ಥಿತಿಯನ್ನು ಗುರುತಿಸುವುದು, ತುರ್ತು ಸಹಾಯ ಕೋರುವುದು ಹಾಗೂ ಸ್ವತಃ ಕೈಯಿಂದ ಹಾರ್ಟ್ ಕಂಪ್ರೆಶನ್ ವಿಧಾನವನ್ನು ಮ್ಯಾನಿಕಿನ್ ಸಹಾಯದಿಂದ ಕಲಿಸಲಾಯಿತು.
ಅಭಿಯಾನದಲ್ಲಿ ಸಾವಿರಕ್ಕಿಂತ ಹೆಚ್ಚು ನರ್ಸ್, ನಾಗರಿಕರು, ವಿದ್ಯಾರ್ಥಿಗಳು, ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡರು. ಐಎಂಎ ಶಿವಮೊಗ್ಗ ವೈದ್ಯರು ನಗರ ಮಟ್ಟದ ಕಾರ್ಯಚಟುವಟಿಕೆಯನ್ನು ಯಶಸ್ವಿಗೊಳಿಸಿದರು.
