ಸ್ವಚ್ಛ, ಸುಂದರ ಪಟ್ಟಣವನ್ನಾಗಿಸುವ ಕನಸು ಕಾಣುತ್ತಿರುವ ಅಧಿಕಾರಿಗಳು ಕಸ ವಿಲೇವಾರಿ ಮಾಡುವುದನ್ನು ಮರೆತಂತೆ ಕಾಣುತ್ತಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ರಸ್ತೆ ಬದಿಯಲ್ಲಿ ಕಸದ ರಾಶಿ ರಾರಾಜಿಸುತ್ತಿದೆ.
ಪ್ರತಿ ವರ್ಷ ಪುರಸಭೆ ವತಿಯಿಂದ ಕಸ ವಿಲೇವಾರಿಗಾಗಿ ಕೋಟ್ಯಂತರ ರೂ., ವ್ಯಯ ಮಾಡಲಾಗುತ್ತಿದೆ ಎನ್ನುವ ಅಧಿಕಾರಿಗಳು ಬಿಡುಗಡೆಯಾದ ಅನುದಾನ ಸರಿಯಾಗಿ ಬಳಕೆಯಾಗುತ್ತಿದೆಯೇ ಎನ್ನುವ ಕುರಿತು ಗಮನಹರಿಸಿದಂತೆ ಕಾಣುತ್ತಿಲ್ಲ. ಅಧಿಕಾರಿಗಳ ಕರ್ತವ್ಯ ಲೋಪದಿಂದ ಪಟ್ಟಣದಲ್ಲಿ ಕಸದ ರಾಶಿ ದ್ವಿಗುಣ ಗೊಳ್ಳುತ್ತಿದೆ. ಸುಂದರ ಪಟ್ಟಣವನ್ನಾಗಿಸುವ ಕನಸು ಕಗ್ಗಂಟಾಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆಯ ಬಿಎಸ್‌ಎನ್‌ಎಲ್ ಕಚೇರಿ ಬಳಿ ಸಮರ್ಪಕವಾಗಿ ಕಸ ವಿಲೇವಾರಿಯಾಗದೆ ರಸ್ತೆ ಬದಿಯಲ್ಲೇ ಕಸದ ರಾಶಿ ರಾರಾಜಿಸುತ್ತಿದೆ. ಪುರಸಭೆಯಿಂದ ಆಟೋ, ಟ್ರ್ಯಾಕ್ಟರ್ಗಳು ಸಮರ್ಪಕವಾಗಿ ಕಸ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ಆರೋಪ ಒಂದಡೆಯಾದರೆ, ಮತ್ತೊಂದಡೆ ಅಧಿಕಾರಿಗಳನ್ನು ಕೇಳಿದರೆ ಆಟೋ, ಟ್ರ್ಯಾಕ್ಟರ್ಗಳು ಮನೆ ಬಾಗಿಲಿಗೆ ಬರುತ್ತಿವೆ. ಆದರೂ, ಸಾರ್ವಜನಿಕರು ರಸ್ತೆ ಬದಿಯಲ್ಲಿಯೇ ಕಸ ಸುರಿಯುತ್ತಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡುತ್ತಾರೆ.
ರಸ್ತೆ ಬದಿಯಲ್ಲಿ ಕಸದ ರಾಶಿ ಹಾಕುವುದರಿಂದ ದಾರಿ ಹೋಕರು ದುರ್ವಾಸನೆಯ ಜೊತೆಗೆ ತ್ಯಾಜ್ಯಗಳಲ್ಲಿನ ಪ್ಲಾಸ್ಟಿಕ್ ಕವರ್‌ಗಳು ರಸ್ತೆಯನ್ನೇ ಆಕ್ರಮಿಸುತ್ತಿವೆ. ಈ ಬಗ್ಗೆ ನೆರೆ ಹೊರೆಯವರು ಪ್ರಶ್ನಿಸಿದರೆ, ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗಳು ಜರುಗಿವೆ. ಮಾತ್ರವಲ್ಲದೇ ತ್ಯಾಜ್ಯವು ಚರಂಡಿಗಳನ್ನು ಸೇರುತ್ತಿದ್ದು, ಮಳೆ ಬಂದರೆ ನೀರು ಸರಾಗವಾಗಿ ಹರಿಯದೇ ರಸ್ತೆಯನ್ನು ಆಕ್ರಮಿಸುತ್ತದೆ. ಅಲ್ಲದೇ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಡುತ್ತಿದೆ. ಇದರಿಂದ ಅನೇಕ ರೋಗಳು ಹರಡುವ ಭೀತಿ ಜನತೆಯಲ್ಲಿ ಉಂಟಾಗಿದೆ. ತ್ಯಾಜ್ಯವು ಅಲ್ಲೇ ಕುಳಿತು ದುರ್ವಾಸನೆ ಉಂಟಾಗುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳ ಆರೊಗ್ಯದ ಮೆಲೆ ವಿಪರೀತ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿನಿಯರ ವಸತಿ ನಿಲಯ, ಸುಭಾಷ್ ಚಂದ್ರ ಬೋಸ್ ಸರ್ಕಾರಿ ಉರ್ದು ಪ್ರೌಢ ಶಾಲೆಗಳು ಇದ್ದು, ವಿದ್ಯಾಥಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಪಾದಚಾರಿಗಳು, ವಾಹನಗಳ ಸವಾರರು ಪುರಸಭೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ.
ಪುರಸಭೆ ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಂಡು ಕಸ ವಿಲೇವಾರಿ ನಿರ್ವಹಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಬೇಕು. ಈ ಮೂಲಕ ಪಟ್ಟಣದ ಸ್ವಚ್ಛತೆ, ಸೌಂದರ್ಯ ಕಾಪಾಡುವ ಮೂಲಕ ಆರೋಗ್ಯಕರ ವಾತಾವಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಸೊರಬದ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ
Date:
