ಉತ್ತಮ ಆಹಾರ ಸೇವನೆ, ಒಳ್ಳೆಯ ಜೀವನಶೈಲಿ ಹಾಗೂ ವ್ಯಾಯಾಮ ಮಾಡುವುದರಿಂದ ಸದೃಢ ಆರೋಗ್ಯ ನಮ್ಮದಾಗುತ್ತದೆ ಎಂದು ವೈದ್ಯ ಡಾ. ಪ್ರವೀಣ್ ದೇವರಬಾವಿ ಹೇಳಿದರು.
ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಸಂಯುಕ್ತ ವಿಶ್ರಾಂತ ನೌಕರರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಕಾಲದಲ್ಲಿ ನಮ್ಮ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳುವುದೇ ಒಂದು ಸವಾಲಾಗಿದೆ. ಪ್ರತಿ ನಿತ್ಯ ಯೋಗ ಮತ್ತು ವ್ಯಾಯಾಮ ಮಾಡಬೇಕು. ಸಕಾರಾತ್ಮಕ ಭಾವನೆಗಳು ನಮ್ಮ ಆರೋಗ್ಯ ಮತ್ತು ಮನಸ್ಸನ್ನು ಸದೃಢವಾಗಿ ಇಡುತ್ತವೆ ಎಂದು ತಿಳಿಸಿದರು.
ಮಧುಮೇಹ ಕರ್ನಾಟಕದ ಹೆಚ್ಚು ಜನರಲ್ಲಿ ಸಮಸ್ಯೆ ಉಂಟುಮಾಡುತ್ತಿದೆ. ಕಾಯಿಲೆಗಳಿಗೆ ನಾವು ಹೆದರದೆ ಸಕಾಲದಲ್ಲಿ ಆರೋಗ್ಯದ ತಪಾಸಣೆ ಮಾಡಿಸಬೇಕು. ಆರೋಗ್ಯ ಪದ್ಧತಿಯನ್ನು ಸರಿಯಾಗಿ ರೂಡಿಸಿಕೊಂಡರೆ ಯಾವ ಕಾಯಿಲೆಗಳು ಸಹ ನಮಗೆ ತೊಂದರೆ ಕೊಡುವುದಿಲ್ಲ. 40 ವರ್ಷ ದಾಟಿದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೆ ಒಮ್ಮೆ ಒಂದು ಬಾರಿ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಮತ್ತು ಕಣ್ಣುಗಳನ್ನು ಸಾಮಾನ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರತಿನಿತ್ಯ ಆಹಾರದಲ್ಲಿ ತರಕಾರಿ, ಹಣ್ಣು ಹಾಲು ಮತ್ತು ಪ್ರೋಟೀನ್ ಅಂಶ ಇರುವ ಹಾಗೆ ನೋಡಿಕೊಳ್ಳಬೇಕು. ಕರಿದ ಪದಾರ್ಥಗಳು, ಬೇಕರಿ ಪದಾರ್ಥಗಳು ಕೊಬ್ಬಿನ ಪದಾರ್ಥಗಳಿಂದ ದೂರವಿರಬೇಕು ಎಂದರು.
ವೈದ್ಯ ಅಭಿಷೇಕ್ ನುಚ್ಚಿನ್ ಮಾತನಾಡಿ ಶ್ವಾಸಕೋಶ ಹಾಗೂ ವಿವಿಧ ಕಾಯಿಲೆಗಳ ಬಗ್ಗೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಂಯುಕ್ತ ವಿಶ್ರಾಂತ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಿವೃತ್ತ ಜೀವನದಲ್ಲಿ ನಮ್ಮ ಆರೋಗ್ಯ ಹಾಗೂ ಪ್ರತಿನಿತ್ಯದ ಚಟುವಟಿಕೆಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸರಳ ವ್ಯಾಯಾಮ ಹಾಗೂ ಮನಸ್ಸಿಗೆ ಉಲ್ಲಾಸ ನೀಡುವಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಗೌರವಾಧ್ಯಕ್ಷ ಪಿ.ಒ.ಶಿವಕುಮಾರ್ ಮಾತನಾಡಿ, ಒತ್ತಡ ಹಾಗೂ ಖಿನ್ನತೆಯಿಂದ ದೂರವಿರಬೇಕು. ಒಳ್ಳೆಯ ಆಲೋಚನೆ ಚಿಂತನೆ ನಮಗೆ ಜೀವನೋತ್ಸಾಹವನ್ನು ಉಂಟು ಮಾಡುತ್ತವೆ ಎಂದರು.
ಕಾರ್ಯದರ್ಶಿ ಕುಮಾರ್ ಬೆನಕಪ್ಪ, ರವಿಕುಮಾರ್, ನಿರ್ದೇಶಕರಾದ ಎನ್.ಬಿ.ಮಂಜುನಾಥ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.
ಉತ್ತಮ ಆಹಾರ, ವ್ಯಾಯಾಮದಿಂದ ಸದೃಢ ಆರೋಗ್ಯ : ಡಾ. ಪ್ರವೀಣ್ ದೇವರಬಾವಿ
Date:
