Bharat Scouts and Guides ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸೆಯ ಸಿದ್ಧಾಂತವು ಇಂದಿಗೂ ಪ್ರಸ್ತುತ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧೀಜಿ ಅವರ ಅಹಿಂಸಾ ತತ್ವ ಮತ್ತು ಸತ್ಯಾಗ್ರಹಗಳು ಸ್ವಾತಂತ್ರ‍್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದವು. ದೀರ್ಘ ಹೋರಾಟದ ಬಳಿಕ ದೇಶಕ್ಕೆ ಸ್ವಾತಂತ್ರ ದೊರೆಯಿತು ಎಂದು ತಿಳಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಉನ್ನತ ಆದರ್ಶಗಳು ಮತ್ತು ಸಮಗ್ರತೆಗೆ ಹೆಸರುವಾಸಿ ಆಗಿದ್ದರು. ಅವರ ವಿನಮ್ರತೆ, ಸಮಗ್ರತೆ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಹೆಸರುವಾಸಿಯಾದ ಅವರ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಹೇಳಿದರು.
ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ಅವರ ಬೋಧನೆಗಳು ಪ್ರಪಂಚದಾದ್ಯಂತ ಜನರೊಂದಿಗೆ ಪ್ರತಿಧ್ವನಿಸುತ್ತವೆ. ಅವರನ್ನು ಶಾಂತಿ ಮತ್ತು ಮಾನವೀಯ ಸಂಕೇತವನ್ನಾಗಿ ಮಾಡುತ್ತವೆ. ಹಲವಾರು ದೇಶಗಳಲ್ಲಿ ಗಾಂಧೀಜಿ ಅವರ ಅಹಿಂಸಾ ತತ್ವವನ್ನು ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ಮಾರ್ಟಿನ್ ಲೂಥರ್ ಮತ್ತು ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸ್ವಾತಂತ್ರ್ಯ ಹೋರಾಟಲ್ಲಿ ಈ ತತ್ವಗಳನ್ನೇ ಅಳವಡಿಸಿಕೊಂಡಿದ್ದರು ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್.ಮನೋಹರ ಮಾತನಾಡಿ, ಮಹಾತ್ಮ ಗಾಂಧಿ ಅವರ ಜಯಂತಿಯನ್ನು ವಿಶ್ವಸಂಸ್ಥೆಯು ಜಾಗತಿಕವಾಗಿ ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸುತ್ತದೆ ಎಂದು ಹೇಳಿದರು.
Bharat Scouts and Guides ಗೈಡ್ ಆಯುಕ್ತೆ ಲಕ್ಷ್ಮೀ ಕೆ.ರವಿ ಮಾತನಾಡಿ, ಸ್ವಾತಂತ್ರ್ಯ ಚಳವಳಿಗಳಿಗೆ ಸ್ಫೂರ್ತಿ ನೀಡಿದ ನಾಯಕ ಮಹಾತ್ಮ ಗಾಂಧಿ. ಅವರ ತ್ಯಾಗವನ್ನು ಸ್ಮರಿಸಲು ಮತ್ತು ಅವರ ಸತ್ಯ, ಶಾಂತಿ ಮತ್ತು ಸರಳತೆಯ ಬೋಧನೆಗಳ ಮೂಲಕ ಬದುಕಲು ಜನರನ್ನು ಪ್ರೇರೇಪಿಸಲು ಈ ದಿನ ಸಮರ್ಪಿಸಲಾಗಿದೆ ಎಂದು ತಿಳಿಸಿದರು.
ಆಯುಕ್ತ ಕೆ.ರವಿ ಮಾತನಾಡಿ, ಮಹಾತ್ಮ ಗಾಂಧಿ ಅವರ ಮಾರ್ಗದರ್ಶಿ ತತ್ವಗಳು ಮತ್ತು ಭಾರತದ ಸ್ವಾತಂತ್ರ‍್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಖಜಾಂಚಿ ಚೂಡಾಮಣಿ ಪವಾರ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ಕೆ ವಿ., ಜಂಟಿ ಕಾರ್ಯದರ್ಶಿ ವೈಆರ್ ವೀರೇಶಪ್ಪ, ರುದ್ರಪ್ಪ, ದೇವಣ್ಣ, ಗೌತಮ್, ಸೀನ, ಮಕ್ಕಳು ಉಪಸ್ಥಿತರಿದ್ದರು.
