Shri Kshetra Dharmasthala Rural Development ಧನಸಂಪತ್ತಿನಿಂದಲೇ ಸುಖ ನೆಮ್ಮದಿ ಸಾಧ್ಯವಿಲ್ಲ, ಜ್ಞಾನ ಸಂಪತ್ತು ಹಾಗೂ ಆರೋಗ್ಯ ಸಂಪತ್ತು ಸಹಾ ಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ ಹೇಳಿದರು.
ದಾವಣಗೆರೆ ತಾಲೂಕು ಲೋಕಿಕೆರೆ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆ ಧಾರ್ಮಿಕ ಸಭೆಯ ಪ್ರಧಾನ ಉಪನ್ಯಾಸ ನೀಡುತ್ತಾ ಬದುಕು ಸಾಗಿಸಲು ಹಣ ಬೇಕು, ಆದರೆ ಬದುಕು ನೆಮ್ಮದಿ ಆಗಿರಬೇಕೆಂದರೆ ಜ್ಞಾನವೂ ಬೇಕು, ಆರೋಗ್ಯವೂ ಬೇಕು, ನೆಮ್ಮದಿಯ ಬದುಕಿನಲ್ಲಿ ತೃಪ್ತಿಯೂ ಬೇಕೆಂದರೆ ಆಧ್ಯಾತ್ಮಿಕತೆಯೂ ಬೇಕು, ಇದಕ್ಕೆ ಪೂರಕವಾಗಿ ಇಂತಹ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯ ಎಂದರಲ್ಲದೆ ಶಾಸನಸ್ಥ ಪುರಾತನ ಗ್ರಾಮವಾದ ಲೋಕಿಕೆರೆಯ ಚಾರಿತ್ರಿಕ ಐತಿಹಾಸಿಕ ಮಹತ್ವವನ್ನು ವಿವರಿಸಿದರು. ಗ್ರಾಮಾಭಿವೃದ್ಧಿಯೇ ರಾಷ್ಟ್ರಾಭಿವೃದ್ಧಿಗೆ ಸೋಪಾನ ಎನ್ನುವುದು ಧರ್ಮಸ್ಥಳ ಸಂಸ್ಥೆಯ ಧ್ಯೇಯವಾಗಿದೆ ಎಂಬುದನ್ನು ಯೋಜನೆಗಳ ಅಂಕಿ ಅಂಶಗಳ ಸಹಿತ ಮಂಜುನಾಥ್ ವಿವರಿಸಿದರು.
ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಹದಡಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಶ್ರೀಶೈಲ ಪಟ್ಟಣಶೆಟ್ಟಿ ಮೊಬೈಲ್ ಗೀಳು ಅನೇಕ ಅಚಾತುರ್ಯ ಅಪರಾಧಗಳಿಗೂ ಕಾರಣವಾಗುತ್ತಿದ್ದು ಸಾಧ್ಯವಾದಷ್ಟು ಮಕ್ಕಳ ಕೈಗೆ ಮೊಬೈಲ್ ಕೊಡುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.
Shri Kshetra Dharmasthala Rural Development ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತರುದ್ರೇಶ್ವರ ಮಹಾ ಸ್ವಾಮಿಗಳು ಸತ್ಯ ಶುದ್ಧ ಕಾಯಕ ಮಾಡುವವರಿಗೆ ಲಕ್ಷ್ಮಿ ಒಲಿಯುತ್ತಾಳೆ, ಸತ್ಯ ಶುದ್ಧ ಕಾಯಕದಲ್ಲೇ ಕೈಲಾಸವೂ ಇರುತ್ತದೆ, ಇದಕ್ಕಾಗಿ ದೇಹವೇ ಪ್ರಸಾದ ಕಾಯವಾಗಬೇಕು, ಪ್ರತಿಯೊಬ್ಬರೂ ತಮ್ಮ ತಂದೆ ತಾಯಿಗಳಲ್ಲಿ ದೇವರನ್ನು ಕಾಣುತ್ತಾ ವೃದ್ಧಾಪ್ಯದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.
ಗ್ರಾಮಾಭಿವೃದ್ಧಿ ಟ್ರಸ್ಟಿನ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ್ ಪ್ರಾಸ್ತಾವಿಕ ಮಾತುಗಳ ನಾಡಿದರು. ಪೂಜಾ ಸಮಿತಿ ಅಧ್ಯಕ್ಷ ಮಂಜಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳಾದ ವೈ ಟಿ ಮಲ್ಲಿಕಾರ್ಜುನಪ್ಪ, ಜಯಮ್ಮ, ಸುರೇಶ್, ಓಬೇಶಪ್ಪ ಬಿ ಹೆಚ್, ನಿರಂಜನ ಮೂರ್ತಿ ಮುಂತಾದವರು ಉಪಸ್ಥಿತರಿದ್ದು ಬಸವರಾಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ ದೀಕ್ಷಾ ಮತ್ತು ತಂಡದವರು ಪ್ರಾರ್ಥನೆ ಹಾಡಿದರು. ಗ್ರಾಮಾಭಿವೃದ್ಧಿ ಟ್ರಸ್ಟಿನ ಯೋಜನಾಧಿಕಾರಿ ನವೀನ್ ಸ್ವಾಗತ ಕೋರಿದರು, ರೇಖಾ ವಂದನೆ ಸಲ್ಲಿಸಿದರು. ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರಸ್ತುತಿಗಳು ನೆರವೇರಿದವು.
