Bharat Scouts and Guides ಮಕ್ಕಳಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವನೆ ಹಾಗೂ ಶಿಸ್ತಿನ ಜೀವನಶೈಲಿ ರೂಪಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಎಸ್.ಗುಂಡಪಲ್ಲಿ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಪದವಿಪೂರ್ವ ರೋವರ್ ರೇಂಜರ್ಸ್ ಮಕ್ಕಳಿಗೆ ಹಮ್ಮಿಕೊಳ್ಳಲಾದ ಮೂರು ದಿನಗಳ ನಿಪುಣ ಪರೀಕ್ಷಾ ಶಿಬಿರ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಿಂದ ಮಕ್ಕಳ ಮನಸ್ಸು ಕಲುಷಿತವಾಗಿದ್ದು, ಸ್ವಂತ ಬುದ್ಧಿವಂತಿಕೆ ಕಡಿಮೆಯಾಗಿದೆ. ಮೊಬೈಲ್ ಹಾವಳಿಯಿಂದ ಮಕ್ಕಳು ದೈಹಿಕ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದಾರೆ. ಆದ್ದರಿಂದ ಇಂತಹ ಸ್ಕೌಟ್ಸ್ ಅಂಡ್ ಗೈಡ್ಸ್ ಚಳುವಳಿಯಲ್ಲಿ ಮಕ್ಕಳು ತೊಡಗಿಕೊಳ್ಳುವುದರಿಂದ ಸೃಜನಶೀಲರಾಗುತ್ತಾರೆ. ಆತ್ಮವಿಶ್ವಾಸ ಸಹ ವೃದ್ಧಿಯಾಗುತ್ತದೆ. ಸಾಮಾಜಿಕ ಜವಾಬ್ದಾರಿಯೂ ಕೂಡ ವೃದ್ಧಿಸುತ್ತದೆ ಎಂದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕಾಚಿನಕಟ್ಟೆಯ ಪಂಡರಿನಾಥ್ ಮಾತನಾಡಿ, ಸ್ಕೌಟ್ಸ್ ಅಂಡ್ ಗೈಡ್ಸ್ ಪ್ರಪಂಚಾದ್ಯಂತ ಮಕ್ಕಳಲ್ಲಿ ಜೀವನದ ಕಲೆ, ವ್ಯಕ್ತಿತ್ವ ನಿರ್ಮಾಣ ಹಾಗೂ ಸಕಾರಾತ್ಮಕ ಭಾವನೆಗಳನ್ನು ಮೂಡಿಸುತ್ತಿದೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಈ ತರಬೇತಿ ಪಡೆದ ನಂತರ ಮಕ್ಕಳು ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಇಂತಹ ಪರೀಕ್ಷೆಗಳನ್ನು ಸದಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
Bharat Scouts and Guides ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಆಯುಕ್ತರಾದ ಕೆ.ರವಿ, ಲಕ್ಷ್ಮೀ ರವಿ, ಎಸ್.ಜಿ.ಆನಂದ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ವೈ.ಆರ್.ವೀರೇಶಪ್ಪ, ಶಿವಶಂಕರ್, ರಾಜೇಶ್ ಅವಲಕ್ಕಿ, ಮಲ್ಲಿಕಾರ್ಜುನ್ ಕಾನೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
