JCI Shivamogga ಸ್ವಯಂ ಉದ್ಯೋಗಿಗಳಾಗಲು ಹಾಗೂ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಕೌಶಲ್ಯಯುತ ಶಿಕ್ಷಣ ಹಾಗೂ ಜ್ಞಾನ ಅವಶ್ಯಕವಾಗಿದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ವಿ.ಗಣೇಶ್ ಹೇಳಿದರು.
ಜೆಸಿಐ ಸಪ್ತಾಹದ ಅಂಗವಾಗಿ ಹೊಳಲೂರಿನ ಕೆನರಾ ಬ್ಯಾಂಕ್ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಕೌಶಲ್ಯ ತುಂಬಾ ಮುಖ್ಯ. ಅರ್ಜಿ ಬರೆಯುವುದು, ಆನ್‌ಲೈನ್ ವಹಿವಾಟು ನಡೆಸುವುದು, ಮಾರುಕಟ್ಟೆ ಜ್ಞಾನ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಅರಿವು ಹೊಂದಿರಬೇಕು. ಇಂತಹ ತರಬೇತಿ ಕಾರ್ಯಾಗಾರಗಳು ತುಂಬಾ ಅನುಕೂಲ ಒದಗಿಸುತ್ತವೆ ಎಂದು ತಿಳಿಸಿದರು.
ಜೆಸಿಐ ನಿಯೋಜಿತ ರಾಷ್ಟ್ರೀಯ ತರಬೇತುದಾರ ಚಂದ್ರಶೇಖರ್ ಮಾತನಾಡಿ, ಸ್ವಂತ ಉದ್ಯಮದಿಂದ ಉತ್ತಮವಾಗಿ ಹಣವನ್ನು ಗಳಿಸುವ ಜತೆಯಲ್ಲಿ ಅನೇಕ ಜನರಿಗೆ ಕೆಲಸ ನೀಡಬಹುದಾಗಿದೆ. ಸ್ವಉದ್ಯಮವನ್ನು ಆರಂಭಿಸಲು ಬೇಕಾಗುವಂತಹ ವಿದ್ಯಾರ್ಹತೆ, ನೈಪುಣ್ಯತೆ, ತಾಳ್ಮೆ, ಆತ್ಮವಿಶ್ವಾಸ ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಹೇಗೆ ಮಾರುಕಟ್ಟೆ ಮಾಡಿಕೊಳ್ಳಬೇಕು. ಅದಕ್ಕೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವು ಅವಶ್ಯಕ ಎಂದರು.
ಮುದ್ರಾ ಮೂಲಕ 20 ಲಕ್ಷ ರೂ.ವರೆಗೆ ಸ್ವಉದ್ಯೋಗ ಮಾಡಲು ಸರ್ಕಾರ ನೆರವು ನೀಡುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಂಡು ಸ್ವಂತ ಉದ್ಯಮ ಸ್ಥಾಪಿಸಲು ಮುಂದಾಗಬೇಕು ಎಂದು ಹೇಳಿದರು.
JCI Shivamogga ಜೆಸಿಐ ಸಂಸ್ಥೆಯು ಮಾನವೀಯ ಸೇವೆಗಳ ಜತೆಯಲ್ಲಿ ಉದ್ಯೋಗ ತರಬೇತಿ ಹಾಗೂ ಅಗತ್ಯ ಕೌಶಲ್ಯಗಳ ಕಲಿಕೆ ಕುರಿತು ಮಾರ್ಗದರ್ಶನ ನೀಡುತ್ತಿದೆ ಎಂದರು. ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ನೂರಾರು ಮಹಿಳೆಯರು ಭಾಗಿಯಾಗಿದ್ದರು. ಕೆನರಾ ಬ್ಯಾಂಕ್ ಅಧಿಕಾರಿ ಕಾಂತೇಶ್, ಜೆಸಿಐ ಸಹ್ಯಾದ್ರಿ ಘಟಕದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
