ಸ್ಮರಣೆ: ಡಾ. ಸಿ.ಜಿ. ರಾಘವೇಂದ್ರ ವೈಲಾಯ.
ನವಜಾತ ಶಿಶು & ಮಕ್ಕಳ ತಜ್ಞರು.
ಜನನಿ ನ್ಯೂಲೈಫ್ ಆಸ್ಪತ್ರೆ. ಶಿವಮೊಗ್ಗ
ಆಧುನಿಕ ಕನ್ನಡ ಸಾಹಿತ್ಯದ ಮೇಲೆ ನನ್ನಂಥವರಿಗೆ ಆಸಕ್ತಿ ಹುಟ್ಟಲು ಮುಖ್ಯ ಕಾರಣ ಎಂದರೆ ಸಂತೇಶಿವರದ ಭೈರಪ್ಪನವರು ಎನ್ನಬಹುದು. ಇವರು ಕನ್ನಡ ಸಾಹಿತ್ಯ ಲೋಕದ ಶಾಶ್ವತ ಧ್ರುವತಾರೆ. ಕರುನಾಡಿನ ಅಪರೂಪದ ಸಾಕ್ಷಿ ಪ್ರಜ್ಞೆ. ಯಾವ ಇಸಂಗಳ, ಪೂರ್ವಾಗ್ರಹ ಗಳ ತೆಕ್ಕೆಗೂ ಸಿಲುಕದೆ ಬದುಕನ್ನು ಬಹಳ ಹತ್ತಿರದಿಂದ ಸಾಪೇಕ್ಷವಾಗಿ ಕಂಡು ಅದರ ಹತ್ತು ಹಲವು ಮಜಲುಗಳನ್ನು ಪರೀಕ್ಷಕ ದೃಷ್ಟಿಯಿಂದ ವಿಮರ್ಶೆ ಮಾಡಿ ಪಂಥ ನಿರಪೇಕ್ಷವಾಗಿ ಸರ್ವತಂತ್ರ ಸ್ವತಂತ್ರವಾದ ಸಾಹಿತ್ಯದ ರಚನೆಯನ್ನು ಮಾಡಿದ ಇವರು ನಿಜವಾದ ವಿಶ್ವಮಾನವ.
ನೂರು ಮತದ ಹೊಟ್ಟ ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದಲ್ಲೆ ಮೀರಿ ಬರಹವನ್ನೂ ಬದುಕನ್ನೂ ಸಾದೃಶವಾಗಿ ಕಂಡ ಅಪರೂಪದ ಮಹನೀಯರಿವರು. ಭಾರತೀಯ ದರ್ಶನಗಳು ಮತ್ತು ತತ್ವಶಾಸ್ತ್ರದ ಅಧ್ಯಯನವು ಸೃಜನಶೀಲ ಸಾಹಿತ್ಯಕ್ಕೆ ಹೇಗೆ ಭದ್ರ ಅಡಿಪಾಯವನ್ನು ಹಾಕಬಲ್ಲದು ಎಂದು ತೋರಿಸಿಕೊಟ್ಟವರಿವರು. ಪಾಶ್ಚಾತ್ಯರ ಅನುಕರಣೆಯ ಜನಪ್ರಿಯ ಮಾರ್ಗದ ಬದಲಾಗಿ ಶುದ್ಧ ಭಾರತೀಯ ನೆಲೆಗಟ್ಟಿನಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ ಗೆದ್ದವರು ನಮ್ಮ ಭೈರಪ್ಪ.
ತಾವು ಏನೂ ಅಲ್ಲದೇ ಇದ್ದಾಗ ತಮ್ಮ ಬರಹಗಳಿಗೆ ಒಂದು ಭದ್ರ ನೆಲೆಯನ್ನು ಒದಗಿಸಿಕೊಟ್ಟ ಪ್ರಕಾಶಕರನ್ನು ಕೈಬಿಡದೆ ಕೊನೆವರೆಗೂ ನಂಬಿ ಬದುಕಿದ ವಿಶ್ವಾಸಿ ಇವರು.ತಮ್ಮ ಬರಹಗಳಲ್ಲಿ ಹಲೆವೆಡೆ ಮೂಡಿಬಂದ ವ್ಯಭಿಚಾರದ ಉಲ್ಲೇಖಗಳ ಕುರಿತು ಹಲವರಿಂದ ಹಲವು ಬಾರಿ ಉಗ್ರ ಟೀಕೆಗೆ ಒಳಗಾದ ಭೈರಪ್ಪನವರು ತಮ್ಮ ಬದುಕಿನಲ್ಲಿ ಮಾತ್ರ ಶುದ್ಧ ಗರತಿಯಂತೆ ಬಾಳಿದವರು ನಮ್ಮ ಭೈರಪ್ಪ.
ಇವರಿಗೆ ದೊರಕದೇ ಉಳಿದ ಜ್ಞಾನಪೀಠದಂತ ಹಲವಾರು ಪ್ರಶಸ್ತಿಗಳು ಈ ಮೂಲೂ ತಮ್ಮ ಮೌಲ್ಯವನ್ನು ಕುಗ್ಗಿಸಿಕೊಂಡವೇ ಹೊರತು ಭೈರಪ್ಪನವರು ಆ ಕುರಿತು ಎಂದೂ ವಿಷಾದಗೊಂಡವರಲ್ಲ. ಸಾಹಿತ್ಯಾಸಕ್ತರು ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡ ಇವರ ಪುಸ್ತಕಗಳನ್ನು ಜನರು ಕೊಂಡು ಓದುವವರೆಗೂ ಭೈರಪ್ಪನವರು ಅಜರಾಮರ. ಇವರ ಬರಹಗಳಿಗೆ ಇರುವ ಮಾರುಕಟ್ಟೆಯೇ ಈ ಕೃತಿಗಳ ನೈಜ ಮೌಲ್ಯಮಾಪನ ವೆನ್ನಬಹುದು. ಆಧುನಿಕ ಕನ್ನಡ ಸಾಹಿತ್ಯವನ್ನು ವೈಶ್ವಿಕ ಮಟ್ಟಕ್ಕೆ ಎತ್ತರಿಸಿದ ಭೈರಪ್ಪನವರಿಗೆ ಕನ್ನಡಿಗರು ಸದಾ ಚಿರಋಣಿಗಳಾಗಿರಬೇಕು.
ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು ಎಂಬ ಭಾವಕ್ಕೆ ತಕ್ಕಂತೆ ತಾವು ಇದುತನಕ ಬರೆದು ಗಳಿಸಿದ ಸರ್ವಸ್ವವನ್ನೂ ಕಾಯ ಬಿಟ್ಟು ಹೋಗುವ ಮೊದಲೇ ತಾವು ಸಮಾಜಕ್ಕೆ ಕೊಟ್ಟು ಹೋಗಬೇಕೆಂಬ ತುಡಿತವನ್ನು ಹೊಂದಿ ಅದಕ್ಕನುಗುಣವಾಗಿ ತಮ್ಮ ಅಭಿಮಾನಿಗಳ ನರವಿನಿಂದ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದರು. ಇತ್ತೀಚೆಗೆ ಬರಡಾಗಿದ್ದ ತನ್ನ ಹುಟ್ಟೂರಿನ ಕೆರೆಗೆ ಮತ್ತೆ ನೀರನ್ನು ಹರಿಸಿದ ಆಧುನಿಕ ಭಗೀರಥ ಇವರು. ಪ್ರಶಸ್ತಿ, ಪ್ರಚಾರ, ಪ್ರಲೋಭನೆ, ರಾಜಕೀಯ ಪ್ರೇರಣೆ ಮತ್ತು ತ್ವರಿತ ಜನಪ್ರಿಯತೆಗಳ ಹಂಗಿಗೆ ಸಿಲುಕದೇ ಕೇವಲ ಆತ್ಮತೃಪ್ತಿಗಾಗಿ ಬರೆದು ಸೈ ಅನಿಸಿಕೊಂಡವರು ನಮ್ಮ ಭೈರಪ್ಪ. ಮಾನವನ ಬದುಕಿನಲ್ಲಿ ಮೌಲ್ಯಗಳ ಸಂಘರ್ಷ, ಚತುರ್ವಿಧ ಪುರುಷಾರ್ಥಗಳ ನಡುವಿನ ತಾಕಲಾಟ, ಲೌಕಿಕ ಬಯಕೆಗಳು ಮತ್ತು ಪಾರಲೌಕಿಕ ನಂಬಿಕೆಗಳ ನಡುವಿನ ತೊಯ್ದಾಟ ಹೀಗೆ ಬದುಕನ್ನು ಚಿಕಿತ್ಸಕ ದೃಷ್ಟಿಯಿಂದ ಕಂಡು, ಆ ಭಾವಮಥನದಲ್ಲಿ ಉದಿಸಿದ ಅಮೃತ ಮತ್ತು ವಿಷಗಳೆರಡನ್ನೂ ತನ್ನ ಕೃತಿಗಳ ಮೂಲಕ ನಿಸ್ಪ್ರಹವಾಗಿ ಓದುಗರಿಗೆ ಉಣಬಡಿಸಿದ ನಿಷ್ಠರವಾದಿ ನಮ್ಮ ಭೈರಪ್ಪ. ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ ಬರೆಯುವುದು ಅನಿವಾರ್ಯ ಕರ್ಮ ನನಗೆ, ಎಂಬಂತೆ ಬರೆದವರು ನಮ್ಮ ಭೈರಪ್ಪ. 25 ಉತ್ಕೃಷ್ಟ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತವಾಗಿಸಿದ ಇವರು ಸಾಹಿತಿಯೋರ್ವ ಕೇವಲ ಬರೆದು ಗಳಿಸುವ ಮೂಲಕ ಬದುಕಬಹುದು ಎಂದು ಸಾಧಿಸಿ ತೋರಿದ trend setter ಎನ್ನಬಹುದು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಮಾಜದಿಂದ ಗಳಿಸಿದ ಎಲ್ಲವನ್ನೂ ಅದಕ್ಕೆ ಬಡ್ಡಿಯನ್ನೂ ಸೇರಿಸಿ ಮತ್ತೆ ಸಮಾಜಕ್ಕೇ ಬಿಟ್ಟು ಹೋದ ಮಹಾತ್ಮರಿವರು.
ಅನಂತ ತಾನನಂತವಾಗಿ ಆಗುತಿಹನು ನಿತ್ಯಯೋಗಿ ಎಂಬಂತೆ ಸಾರ್ಥಕ ಬದುಕನ್ನು ಬದುಕಿ, ಹೇಗೆ ಬಂದರೋ ಹಾಗೆಯೇ ಕಿಂಚಿತ್ತೂ ಸದ್ದುಮಾಡದೇ ಹೊರಟು ಹೋದ ಕರ್ಮಯೋಗಿ ನಮ್ಮ ಭೈರಪ್ಪ. ಇವರು ಬದುಕು ಮತ್ತು ಸಾಹಿತ್ಯವೆರಡನ್ನೂ ತಪಸ್ಸಿನಷ್ಟೇ ಪವಿತ್ರವಾಗಿ ಕಂಡವರು. ಲೋಕಕ್ಕೆ ಎಂದೂ ಹೊರೆಯಾಗದಂತೆ ಬದುಕಿ, ಛೇ ಇನ್ನೂ ಒಂದಷ್ಟು ವರ್ಷ ಬದುಕಬಾರದಿತ್ತೇ ಎಂಬ ವಿಷಾದವನ್ನು ನಮ್ಮೆಲ್ಲರಲ್ಲಿ ಉಳಿಸಿ ಕಣ್ಮರೆಯಾದ ಅದಮ್ಯ ಚೇತನ ನಮ್ಮ ಭೈರಪ್ಪ. ಈ ಕಾಲಾತೀತ ಸಾಹಿತ್ಯ ಕೃತಿಗಳ ಸೃಷ್ಟಿಕರ್ತನ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಮತ್ತೊಮ್ಮೆ ಅವರ ಬರಹಗಳಲ್ಲಿ ಮುಳುಗೇಳೋಣ. ಅಲ್ಲಿ ಕಂಡುಬರುವ ಮೌಲ್ಯಗಳನ್ನು ನಮ್ಮ ಬದುಕಿನೊಂದಿಗೆ ತಾಳೆಹಾಕುತ್ತಾ ತನ್ಮೂಲಕ ನಮ್ಮ ಬದುಕನ್ನು ಉತ್ತಮಗೊಳಿಸೋಣ.
ಡಾ|| ಸಿ.ಜಿ. ರಾಘವೇಂದ್ರ ವೈಲಾಯ
ನವಜಾತ ಶಿಶು & ಮಕ್ಕಳ ತಜ್ಞರು
ಜನನಿ ನ್ಯೂಲೈಫ್ ಮಹಿಳಾ & ಮಕ್ಕಳ ಆಸ್ಪತ್ರೆ
ಶಿವಮೊಗ್ಗ, ಕರ್ನಾಟಕ.
