DVS Composite Pre-university College ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವುದರಿಂದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯವೈಕರಿಯನ್ನು ತಿಳಿಯಲು ಅಣಕು ಸಂಸತ್ ಸ್ಪರ್ಧೆ ನೆರವಾಗುತ್ತದೆಂದು ಅಧ್ಯಕ್ಷತೆ ವಹಿಸಿದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಶಿವಮೊಗ್ಗ ನಿರ್ದೇಶಕ ಚಂದ್ರಪ್ಪ ಎಸ್ ಗುಂಡಪಲ್ಲಿ ಹೇಳಿದರು.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಡಿ.ವಿ.ಎಸ್. ಸಂಯುಕ್ತ ಪದವಿ ಪೂರ್ವ ಕಾಲೇಜು, ಶಿವಮೊಗ್ಗ ಇವರ ಸಹಯೋಗದೊಂದಿಗೆ 2025- 26ನೇ ಸಾಲಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ, ಅಬ್ದುಲ್ ನಜೀರ್ ಸಾಬ್ ಸಭಾಂಗಣ ಜಿ. ಪಂ. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೈನಂದಿನ ಜೀವನದಲ್ಲಿ ನಡೆಯುವ ಪ್ರಚಲಿತ ಘಟನೆಗಳು, ಪ್ರಶ್ನೆಗಳನ್ನು ಗಮನಿಸಿದರೆ ಇವತ್ತಿನ ಯುವ ಪೀಳಿಗೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ.
ಅರ್ಥಪೂರ್ಣವಾಗಿ ಭಾಗವಹಿಸುವ ಮೂಲಕ ರಾಜ್ಯ,ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಬೇಕು. ತೀರ್ಪುಗಾರರು ನ್ಯಾಯಾಧೀಶರ ಸ್ಥಾನದಲ್ಲಿದ್ದು ನಿಷ್ಪಕ್ಷಪಾತವಾಗಿ ತೀರ್ಪು ನೀಡುತ್ತಾರೆಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಡಿ ಎಸ್ ಟು ಅನ್ನಪೂರ್ಣ ಮಾತನಾಡಿ ಈ ರೀತಿಯ ಕಾರ್ಯಕ್ರಮಗಳಿಂದ ನಮ್ಮ ರಾಷ್ಟ್ರದ ರಾಜಕೀಯ ವ್ಯವಸ್ಥೆ, ಸಂಸದೀಯ ವ್ಯವಹಾರಗಳು ಹೇಗೆ ನಡೆಯುತ್ತವೆ ಎಂಬ ಜ್ಞಾನ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಡಿ.ವಿ. ಎಸ್. ಸಮಿತಿ( ರಿ.) ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ ಅವರು 63 ವರ್ಷಗಳ ಹಿಂದಿನ ತಮ್ಮ ವಿದ್ಯಾರ್ಥಿ ಜೀವನದ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡು ತಾವು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದ್ದೆ ಎಂದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪಂಡರೀನಾಥ್ ಎಸ್. ಮಾತನಾಡಿ ಇಂದಿನ ವಿದ್ಯಾರ್ಥಿಗಳು ಮುಂದೆ ರಾಜಕೀಯವಾಗಿ ವಿವಿಧ ಹುದ್ದೆಗಳಲ್ಲಿ ಕಾಣಿಸಬಹುದು ಎಂದರು.
DVS Composite Pre-university College ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಯೋಗೀಶ್ ಎಸ್. ಉತ್ತಮವಾದ ಸಮಾಜವನ್ನು ಕಟ್ಟುವ ಶಕ್ತಿ ಯುವ ಜನತೆಗಿದ್ದು ಜೀವನದಲ್ಲಿ ಪ್ರಾಮಾಣಿಕತೆಯನ್ನು ರೂಡಿಸಿಕೊಳ್ಳಬೇಕೆಂದರು.
ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಮಂಜುನಾಥ ಬಣಕಾರ ಪ್ರಸ್ತಾವಿಕ ನುಡಿಗೈದರು.
ವೇದಿಕೆಯಲ್ಲಿ ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ರಾಜು ಕೆ.ಹೆಚ್.,ಜಿ.ಎಫ್. ಕುಟ್ರಿ, ಉಪಸ್ಥಿತರಿದ್ದರು.
ರಾಜ್ಯಶಾಸ್ತ್ರ ಉಪನ್ಯಾಸಕರಾದ ದೇವಕುಮಾರ ಎ.ಜಿ. ಘನಶಾಮ್, ಡಾ. ವಸಂತನಾಯ್ಕ್, ತೀರ್ಥಪ್ಪ ಭಾಗವಹಿಸಿದ್ದರು.
ಕು.ವಾರುಣಿ ಪ್ರಾರ್ಥಿಸಿ, ಡಿ.ವಿ.ಎಸ್.ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಉಮೇಶ್ ಹೆಚ್.ಸಿ. ಸ್ವಾಗತಿಸಿ, ಉಪನ್ಯಾಸಕ ಸಂದೇಶ ನಾಡಿಗ್ ನಿರೂಪಿಸಿ ಉಪನ್ಯಾಸಕಿ ಆಶಾ ವಂದಿಸಿದರು.
