ವಿಶ್ವ ಹಿಂದೂ ಪರಿಷದ್-ಭಜರಂಗದಳ ನೇತೃತ್ವದ ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿಯಿಂದ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಪ್ರತಿಷ್ಠಾಪಿತ ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಸೆ.10ರಂದು ಬುಧವಾರ ನಡೆಯಲಿದೆ.
ಬೆಳಗ್ಗೆ 11ಕ್ಕೆ ಶ್ರೀ ಸ್ವಾಮಿಯ ಸನ್ನಿಧಿಯಿಂದ ಆರಂಭವಾಗುವ ಶೋಭಾಯಾತ್ರೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಸ್ವಾಮಿ ವಿವೇಕಾನಂದ ಭೋದನಾ ಸಂಸ್ಥೆ, ಚಾಮರಾಜ ಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತ ನಂತರ ರಾಜಬೀದಿ ಮಾರ್ಗವಾಗಿ ಶ್ರೀ ವರದಹಸ್ತ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ರಂಗನಾಥ ದೇವಸ್ಥಾನದ ವರೆಗೆ ನಡೆಯಲಿದೆ.
ಶೋಭಾಯಾತ್ರೆಯಲ್ಲಿ ಚಂಡೆ ವಾಧ್ಯ, ಭಜನೆ, ಡೊಳ್ಳು ಸೇರಿದಂತೆ ವಿವಿಧ ವಾಧ್ಯ ಮೇಳಗಳು, ಜನಪದ ಕಲಾತಂಡಗಳು ಪ್ರದರ್ಶನ ನೀಡಲಿವೆ. ನಂತರ ಶ್ರೀ ಗಣೇಶ ಮೂರ್ತಿಯನ್ನು ಪುಣ್ಯನದಿ ದಂಡಾವತಿಯಲ್ಲಿ ವಿಸರ್ಜಿಸಲಾಗುವುದು.
ಶೋಭಾಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದೆ. ಹಿಂದೂ ಬಾಂಧವರು, ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಯವರು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಣೆಯಿಂದ ಭಾಗವಹಿಸುವ ಮೂಲಕ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ನಿರಂಜನ್ ಕೋರಿದ್ದಾರೆ.
