ಸಾಗರ ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕು ಹಾಗೂ ಬೀದಿನಾಯಿ ಕಚ್ಚಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನಗರಸಭೆಯಿಂದ ಪರಿಹಾರ ನೀಡುವಂತೆ ಒತ್ತಾಯಿಸಿ ಮಂಗಳವಾರ ಸಾಗರ ನಾಗರೀಕರ ಒಕ್ಕೂಟ, ಸಾಗರ ಹೆಲ್ಪ್ಲೈನ್, ಪೇಶೆಂಟ್ ರಿಲೀಫ್ ಫೌಂಡೇಶನ್ , SYS ಹಿಸಬಾ ತಂಡ, ಇನ್ನಿತರೆ ಪಕ್ಷಾತೀತ ಜಾತೀಯತಿತ ಸಂಘಟನೆಗಳ ವತಿಯಿಂದ ನಗರಸಭೆ ಅಂಬೇಡ್ಕರ್ ಪ್ರತಿಮೆ ಎದುರು ಮಂಗಳವಾರ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಿನ್ನೆ ಸೋಮವಾರ ಮಧ್ಯಾಹ್ನ ಸಾಗರದ ಜನ್ನತ್ ನಗರದಲ್ಲಿ ಮೂರು ವರ್ಷದ ಪುಟ್ಟ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ನಡೆದಿತ್ತು.
ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಇಂದು ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರಸಭೆಯ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ನಾಗರಿಕರು ಸೇರಿ ಸಾಗರ ನಗರಸಭೆಯ ಆಡಳಿತ, ಅಧಿಕಾರಿಗಳಿಗೆ ಸೇರಿದಂತೆ ಪ್ರಾಣಿ ದಯಾ ಸಂಘದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ಪ್ರಮುಖ ಹಾಗೂ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ ಮಾತನಾಡಿ, ಬೀದಿನಾಯಿ ಹಾವಳಿಯಿಂದ ಜನರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ನಾಯಿ ಮನೆಯ ಮೇಲೆ ಸಹ ಹತ್ತಿ ಉಪಟಳ ನೀಡುತ್ತಿದೆ. ಸೋಮವಾರ ಜನ್ನತ್ ನಗರದಲ್ಲಿ ರಶೀದ್ ಎಂಬುವವರ ಮೂರು ವರ್ಷದ ಮಗ ಮಕ್ಬೂಲ್ ಎಂಬುವವರಿಗೆ ನಾಯಿ ಕಡಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಮಗುವನ್ನು ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಂತಹ ಹಲವು ಪ್ರಕರಣಗಳು ಪಟ್ಟಣದಲ್ಲಿ ನಡೆದಿದೆ. ನಾಯಿ ನಿಯಂತ್ರಣ ಮಾಡಿ ಎಂದರೆ ಪ್ರಾಣಿದಯಾ ಸಂಘದವರನ್ನು ತೋರಿಸಿ ಸುಮ್ಮನಾಗುತ್ತಿದ್ದಾರೆ. ನಗರಸಭೆಯಲ್ಲಿ ನಾಯಿಕಡಿತ ಇನ್ನಿತರೆ ನಡೆದಾಗ ತಿಳಿಸಲು ಸಹಾಯವಾಣಿ ಮಾಡಬೇಕು. ಆದರೆ ಅದನ್ನು ಪಾಲಿಸಿಲ್ಲ. ತಕ್ಷಣ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ತರಬೇಕು. ಬೀದಿನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನಡೆಸಿ ನಗರಸಭೆಯ ಪೌರಾಯುಕ್ತ ಹೆಚ್ ಕೆ ನಾಗಪ್ಪ ಹಾಗೂ ನಗರಸಭೆಯ ಅಧ್ಯಕ್ಷೆ ಮೈತ್ರಿ ಪಾಟೀಲ್ ರವರಿಗೆ ಮನವಿ ಸಲ್ಲಿಸಲಾಯಿತು
ಪ್ರತಿಭಟನೆ ಉದ್ದೇಶಿಸಿ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ರೈತ ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ಶಿರವಾಳ , ಪೇಶೆಂಟ್ ರಿಲೀಫ್ ಫೌಂಡೇಶನ್ ಮುಖ್ಯಸ್ಥ ಸದ್ದಾಂ ದೊಡ್ಮನೆ ಸೇರಿದಂತೆ ಅನೇಕರು ಮಾತನಾಡಿದರು.
