Shankara Eye Hospital ಪ್ರತಿಯೊಬ್ಬರೂ ಮರಣದ ನಂತರ ಕಣ್ಣುಗಳನ್ನು ದಾನ ಮಾಡಲು ಮುಂದಾಗಬೇಕು. ಇದರಿಂದ ಇನ್ನೊಬ್ಬರ ಬದುಕಿನಲ್ಲಿ ಬೆಳಕು ಮೂಡುತ್ತದೆ ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಶ್ ಹೇಳಿದರು.
40ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಪ್ರಯುಕ್ತ ಶಂಕರ ಕಣ್ಣಿನ ಆಸ್ಪತ್ರೆಯ ಆವರಣದಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮತ್ತು ನೇತ್ರದಾನ ಮಾಡಲು ಮನವೊಲಿಸಿದ ವಿವಿಧ ಸಂಘಟನೆಗಳ ಪ್ರಮುಖರಿಗೆ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಕಣ್ಣುಗಳನ್ನು ಸಕಾಲದಲ್ಲಿ ನಾವು ಪರೀಕ್ಷೆ ಮಾಡಿಕೊಳ್ಳಬೇಕು. ಎಲ್ಲ ವಯಸ್ಸಿನವರು ಕಣ್ಣುಗಳನ್ನು ದಾನ ಮಾಡಬಹುದು. ನಮ್ಮಲ್ಲಿ ಒಂದು ವರ್ಷದಿಂದ ಹಿಡಿದು 94 ವರ್ಷದ ವಯೋಮಿತಿಯವರು ಕಣ್ಣುಗಳನ್ನು ದಾನ ಮಾಡಿದ್ದಾರೆ. ನೀವು ಮಾಡುವ ಪವಿತ್ರವಾದ ನೇತ್ರದಾನ ನಾಲ್ಕು ಅಂಧರ ಬಾಳಿಗೆ ಬೆಳಕಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಶಂಕರ ಕಣ್ಣಿನ ಆಸ್ಪತ್ರೆಯವರು ಎಲ್ಲರ ಸಹಕಾರದಿಂದ ಈವರೆಗೂ 2500ಕ್ಕಿಂತ ಹೆಚ್ಚು ನೇತ್ರಗಳನ್ನು ಸಂಗ್ರಹ ಮಾಡಿ ಜೋಡಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಡಾ. ರೂಪಶ್ರೀ ಮಾತನಾಡಿ, ಪ್ರತಿಯೊಬ್ಬರೂ ನೇತ್ರದಾನ ಮಾಡುವ ಇಚ್ಛೆಯನ್ನು ಹತ್ತಿರದ ಸಂಬಂಧಿಕರಿಗೆ ಮೊದಲೇ ತಿಳಿಸಿರಬೇಕು. ನೇತ್ರದಾನ ಒಂದು ಪವಿತ್ರವಾದ ದಾನ. ಆದ್ದರಿಂದ ಇಂದೇ ಎಲ್ಲರೂ ನಮ್ಮ ಮರಣದ ನಂತರ ನೇತ್ರದಾನವನ್ನು ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದರು.
ಡಾ. ರಾಜಶೇಖರ್ ಮಾತನಾಡಿ, ನೇತ್ರದಾನಕ್ಕೆ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಕಣ್ಣಿನಲ್ಲಿ ಪೊರೆ, ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ಕನ್ನಡಕ ಧರಿಸುವುದಾಗಲಿ ಯಾವುದೇ ಇದ್ದರೂ ಸಹ ನೇತ್ರದಾನಕ್ಕೆ ಅಡ್ಡಿಯಾಗುವುದಿಲ್ಲ. ಮುಖದ ಆಕಾರವೂ ಕೂಡ ಬದಲಾಗುವುದಿಲ್ಲ. ಆದ್ದರಿಂದ ನಾವೆಲ್ಲರೂ ನೇತ್ರದಾನ ಮಾಡೋಣ ಎಂದು ತಿಳಿಸಿದರು.
Shankara Eye Hospital ಮುಖ್ಯ ಆಡಳಿತಾಧಿಕಾರಿ ಗಾಯತ್ರಿ ಶಾಂತರಾಮ್ ಮಾತನಾಡಿ, ನೇತ್ರದಾನದ ಬಗ್ಗೆ ಏನಾದರೂ ಅನುಮಾನಗಳಿದ್ದರೆ ಹಾಗೂ ಸಮಸ್ಯೆಗಳಿದ್ದರೆ ಅವುಗಳನ್ನು ನಾವು ಪರಿಹರಿಸುತ್ತೇವೆ. ಸಮಾಜದಲ್ಲಿ ನೇತ್ರದಾನಿಗಳು ಹೆಚ್ಚಾಗಬೇಕು. 25 ಲಕ್ಷಕ್ಕೂ ಹೆಚ್ಚು ಭಾರತೀಯರು ದೃಷ್ಟಿಹೀನರಾಗಿದ್ದಾರೆ. ಅವರ ಜೀವನಕ್ಕೆ ಬೆಳಕಾಗೋಣ, ನೇತ್ರದಾನದ ಸಂದೇಶವನ್ನು ಎಲ್ಲೆಡೆ ಪಸರಿಸೋಣ ಎಂದರು.
ಗುಡ್ ಲಕ್ ಆರೈಕೆ ನಿರ್ದೇಶಕ ಜಿ.ವಿಜಯಕುಮಾರ್ ಹಾಗೂ ಪಂಚಾಕ್ಷರಿ ಹಿರೇಮಠ್, ಹಿರಿಯ ಆಡಳಿತ ಅಧಿಕಾರಿ ಅನಿತಾ, ಚಿತ್ರದುರ್ಗದ ಬಸವೇಶ್ವರ ಪುನರ್ಜೋತಿ ಐ ಬ್ಯಾಂಕ್ ಪದಾಧಿಕಾರಿಗಳು ಹಾಗೂ ರೆಡ್ ಕ್ರಾಸ್ ಮತ್ತು ರೋಟರಿಯ ಪದಾಧಿಕಾರಿಗಳಿಗೆ ವಿವಿಧ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಗೌರವ ಸಮರ್ಪಿಸಿ ಅಭಿನಂದಿಸಲಾಯಿತು. ಶಂಕರ ಕಣ್ಣಿನ ಆಸ್ಪತ್ರೆಯ ಗಾಯಿತ್ರಿ.ಟಿ.ಎಸ್. ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Shankara Eye Hospital ಇದುವರೆಗೆ ಶಂಕರ ಕಣ್ಣಿನ ಆಸ್ಪತ್ರೆಯಿಂದ 5000 ನೇತ್ರ ಜೋಡಣೆ ಕಾರ್ಯವಾಗಿದೆ- ಡಾ.ಮಹೇಶ್
Date:
