Chamber Of Commerce Shivamogga ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜಗಾರ್ ಉದ್ಯೋಗಾಧಾರಿತ ಪ್ರೋತ್ಸಾಹಧನ (ಇಎಲ್‌ಐ) ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಂಘ, ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.
ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗಾರ್ಹತೆ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲಿರುವ ಉದ್ಯೋಗ ಸಂಬಂಧಿತ ಪ್ರೋತ್ಸಾಹ ಧನ (ಇಎಲ್ ಐ) ಯೋಜನೆಯು ಹೊಸ ಉದ್ಯೋಗ ಸೃಷ್ಟಿ ಮತ್ತು ನಿರಂತರ ಉದ್ಯೋಗಕ್ಕಾಗಿ ಆರ್ಥಿಕ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.
ಯೋಜನೆಯು ಇಪಿಎಫ್‌ಒ ಅಡಿಯಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಯಪಡೆಯನ್ನು ಔಪಚಾರಿಕಗೊಳಿಸುವ ಗುರಿ ಹೊಂದಿದೆ.
ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 99,446 ಕೋಟಿ ರೂ. ಹಣ ಮೀಸಲಿಟ್ಟಿದೆ. 3.50 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಆದ್ದರಿಂದ ಹೆಚ್ಚು ಹೆಚ್ಚು ಯುವ ಉದ್ಯೋಗವನ್ನು ಸೃಷ್ಟಿಸುವುದರ ಮೂಲಕ ಯೋಜನೆಯ ಪ್ರಯೋಜನವನ್ನು ಜಿಲ್ಲೆಯ ಎಲ್ಲ ಉದ್ಯಮಿಗಳು ಬಳಸಿಕೊಳ್ಳಬೇಕು. ನಮ್ಮ ಸಂಘದಿಂದ ಎಲ್ಲ ಸಹಕಾರ ನೀಡಲಾಗುತ್ತದೆ ಎಂದರು.
ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಇಪಿಎಫ್‌ಒ ಲೆಕ್ಕಾಧಿಕಾರಿ ಸುನಿಲ್ ಟಿ ಎಸ್ ಮಾತನಾಡಿ, ಯೋಜನೆಯು ಎರಡು ಭಾಗಗಳನ್ನು ಹೊಂದಿದ್ದು, ಎ ಭಾಗವು ಇಪಿಎಫ್‌ಒನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರೋತ್ಸಾಹ ಧನ ಒದಗಿಸುತ್ತದೆ. ಮೊದಲ ಬಾರಿಯ 1.92 ಕೋಟಿ ಉದ್ಯೋಗಿಗಳಿಗೆ ಪ್ರಯೋಜನ ನೀಡುತ್ತದೆ. ಬಿ ಭಾಗವು ಉತ್ಪಾದನಾ ವಲಯದ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸುತ್ತದೆ. ಉದ್ಯೋಗದಾತರಿಗೆ ಪ್ರೋತ್ಸಾಹ ಧನ ಒದಗಿಸುತ್ತದೆ. 2.60 ಕೋಟಿ ಜನರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವ ನಿರೀಕ್ಷೆಯಿದೆ ಎಂದರು.
Chamber Of Commerce Shivamogga ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಮಾತನಾಡಿ, ಇಎಲ್‌ಐ ಯೋಜನೆಯು ಎಲ್ಲ ಕ್ಷೇತ್ರಗಳಲ್ಲಿ, ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ.
ಕೋಟ್ಯಂತರ ಯುವಕರು ಮತ್ತು ಮಹಿಳೆಯರಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿ ವಿಸ್ತರಿಸುತ್ತದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಎಸ್.ಎಸ್.ಉದಯಕುಮಾರ್, ಗಣೇಶ್ ಎಂ.ಅಂಗಡಿ, ಕೆ.ಬಿ.ಶಿವಕುಮಾರ್, ಪ್ರದೀಪ್ ವಿ.ಎಲಿ, ವಿನೋದ್ ಕುಮಾರ್ ಜೈನ್, ಜಿ.ವಿ.ಕಿರಣ್ ಕುಮಾರ್, ಹೆಚ್.ಎಸ್.ನರೇಂದ್ರ, ರವಿಪ್ರಕಾಶ್ ಜೆನ್ನಿ, ಬಿ.ಸುರೇಶ್ ಕುಮಾರ್, ಮಾಜಿ ಅಧ್ಯಕ್ಷ ಟಿ.ಆರ್.ಅಶ್ವಥ್ ನಾರಾಯಣ್ ಶೆಟ್ಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ಜಂಟಿ ನಿರ್ದೇಶಕ ಸುರೇಶ್, ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಹಿರಿಯ ಸಹಾಯಕ ಗಿರಿಶಂಕರ್, ಟಿ ಕೆ ರವೀಂದ್ರ ಹಾಗೂ ಅನೇಕ ಉದ್ಯಮಿಗಳು ಭಾಗವಹಿಸಿದ್ದರು.
