Bharat Scouts and Guides ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇ ನನ್ನ ಜೀವನದ ಅತ್ಯುತ್ತಮ ಕ್ಷಣಗಳು. ಕಾರ್ಗಿಲ್ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾರತೀಯ ವಾಯುಸೇನೆಯ ನಿವೃತ್ತ ಸಾರ್ಜೆಂಟ್ ಎ.ತ್ರಿಲೋಕ್ ಹೇಳಿದರು.
ಕುವೆಂಪು ರಂಗಮಂದಿರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಆಯೋಜಿಸಿದ್ದ 12ನೇ ವರ್ಷದ ಗೀತಭಾರತಿ-2025 ತಾಯಿ ಭಾರತಿಗೆ ಗೀತೆಗಳ ಆರತಿ ದೇಶ ಭಕ್ತಿಗೀತೆಗಳ ಕಾರ್ಯಕ್ರಮವನ್ನು ಅಮರ್ ಜವಾನ್‌ಗೆ ಗೌರವ ಸಲ್ಲಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಎಲ್ಲರಲ್ಲೂ ದೇಶಪ್ರೇಮ ಇರಲಿ, ಕಾರ್ಗಿಲ್ ಯುದ್ಧದಲ್ಲಿ ಯುದ್ಧವಿಮಾನಕ್ಕೆ ಬೇಕಾದ ಎಲ್ಲವನ್ನೂ ಅದಕ್ಕೆ ಅಳವಡಿಸುವುದು, ಜೊತೆಗೆ ವಾಪಸ್ ಬಂದ ವಿಮಾನಗಳನ್ನು ಪರಿಶೀಲಿಸಿ ಅವುಗಳಿಗೆ ಬೇಕಾದ ಎಲ್ಲವನ್ನೂ ಅಳವಡಿಸುವ ಕೆಲಸ ಮಾಡುವುದು ದಿನದ ಚಟುವಟಿಕೆಯಾಗಿತ್ತು ಎಂದು ತಿಳಿಸಿದರು.
ಮಲ್ನಾಡ್ ಓಪನ್ ಗ್ರೂಪ್ ಆಯೋಜಿಸಿರುವ ‘ಗೀತಭಾರತಿ’ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ, ಸೈನಿಕರನ್ನು ಕರೆಯಿಸಿ ಅವರ ಮಾತುಗಳನ್ನು, ಯುದ್ಧದ ಅನುಭವಗಳನ್ನು ತಿಳಿಸುವ ಕಾರ್ಯಕ್ರಮ ವಿನೂತನ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, 2012ರಿಂದಲೂ ಕಾರ್ಯಕ್ರಮದ ಭಾಗವಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀನಾದಮಯಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳು ಹಾಡುತ್ತಿರುವುದು ಪುಷ್ಪವನ್ನು ತಾಯಿ ಭಾರತಿಗೆ ಅರ್ಪಿಸುವ ರೀತಿಯಲ್ಲಿದೆ. ಶಿಸ್ತಿನಿಂದ ಕೂಡಿದ ಕಾರ್ಯಕ್ರಮ ನಿರಂತರವಾಗಿರಲಿ ಎಂದು ಆಶಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ರಾಜ್ಯ ಮಟ್ಟದಲ್ಲಿ ನಮ್ಮ ಸಂಸ್ಥೆ ‘ಗೀತಗಾಯನ’ ಸ್ಪರ್ಧೆ ಏರ್ಪಡಿಸಲು ಗೀತಭಾರತಿ ಕಾರ್ಯಕ್ರಮವೇ ಮೂಲ ಕಾರಣ. ಇದು ಸದಾ ಹೀಗೆಯೇ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳಗಿಸಲಿ ಎಂದರು.
ಇದೇ ಸಂದರ್ಭದಲ್ಲಿ ಗ್ರೂಪ್ ಹಿರಿಯ ಸದಸ್ಯ, ಯುಪಿಎಸ್‌ಸಿನಲ್ಲಿ 615ನೇ ರ‍್ಯಾಂಕ್ ಪಡೆದ ಡಾ. ದಯಾನಂದ ಸಾಗರ್.ಎಲ್ ಅವರನ್ನು ಸನ್ಮಾನಿಸಲಾಯಿತು. ನಾನು ಗ್ರೂಪ್ ಸದಸ್ಯ ಎನ್ನುವುದೇ ಹೆಮ್ಮೆ. ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ಹೇಳಿಕೊಡುತ್ತಿದ್ದರು. ಪ್ರತಿಯೊಬ್ಬರ ಬೆಳವಣಿಗೆಗೆ ಎಲ್ಲರೂ ಸಹಕರಿಸುತ್ತಾರೆ. ಇದರಿಂದ ನಾನು ರಾಷ್ಟ್ರಪತಿ ಪುರಸ್ಕಾರ ಪಡೆದದ್ದು, ಯುಪಿಎಸ್‌ಸಿ ಪರೀಕ್ಷೆಗೂ ಮಲ್ನಾಡ್ ಓಪನ್ ಗ್ರೂಪ್ ಮಾರ್ಗದರ್ಶನ ನೀಡಿದೆ ಎಂದರು.
ಗ್ರೂಪ್ ಮೊದಲ ಬ್ಯಾಚ್‌ನ ರಾಷ್ಟ್ರಪತಿ ಸ್ಕೌಟ್ ಪುರಸ್ಕಾರ ಪಡೆದ ಲೋಕೇಶ್.ಹೆಚ್ ಮತ್ತು ಹೊನ್ನಾಳಿ ಆಕ್ಸಫರ್ಡ್ ಶಾಲೆಯ ಮುಖ್ಯಶಿಕ್ಷಕಿ ಸುಚಿತ್ರ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಗ್ರೂಪ್ ಅಧ್ಯಕ್ಷ ಶ್ರೀನಿವಾಸ ವರ್ಮ.ಎಸ್.ಟಿ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಾಜೇಶ್ ಅವಲಕ್ಕಿ ಮತ್ತು ಗ್ರೂಪ್ ಸ್ಕೌಟ್ಸ್-ಗೈಡ್ಸ್ ಸದಸ್ಯರು ಮಾಡಿದರು.
Bharat Scouts and Guides ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಯ 950ಕ್ಕೂ ಹೆಚ್ಚಿನ ಮಕ್ಕಳು ದೇಶಭಕ್ತಿಗೀತೆಗಳನ್ನು ಹಾಡಿದರು. ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಮಾಚೇನಹಳ್ಳಿಯ ವಿಜಯ್ ಟೆಕ್ನೋಕ್ರಾಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಹೆಚ್.ಮಹೇಂದ್ರಪ್ಪ, ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಮಲ್ನಾಡ್ ಓಪನ್ ಗ್ರೂಪ್ ನ ಹೆಚ್.ಪರಮೇಶ್ವರ್, ಜಿ.ವಿಜಯಕುಮಾರ್, ಎಸ್ ಜಿ ಆನಂದ್. ಕೆ ರವಿ, ಚಂದ್ರಶೇಖರಯ್ಯ ಉಪಸ್ಥಿತರಿದ್ದರು.
